ADVERTISEMENT

ಕೋಲಾರ ಲೋಕಸಭೆ ಕ್ಷೇತ್ರ | ಎಲ್ಲಿ ಯಾರಿಗೆಷ್ಟು ಲೀಡ್‌, ಯಾರಿಗೆ ಹೊಡೆತ?

ಬಿಸಿಲ ಧಗೆ ಮೀರಿಸುತ್ತಿರುವ ‘ಲೋಕ’ ಲೆಕ್ಕಾಚಾರದ ಕಾವು; ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಕೆ.ಓಂಕಾರ ಮೂರ್ತಿ
Published 29 ಏಪ್ರಿಲ್ 2024, 7:34 IST
Last Updated 29 ಏಪ್ರಿಲ್ 2024, 7:34 IST
ಕೆ.ವಿ.ಗೌತಮ್‌
ಕೆ.ವಿ.ಗೌತಮ್‌   

ಕೋಲಾರ: ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಫಲಿತಾಂಶ ಹೊರಬೀಳಲು ಬರೋಬ್ಬರಿ 37 ದಿನಗಳು ಇದ್ದರೂ ಸೋಲು ಗೆಲುವಿನ ಲೆಕ್ಕಾಚಾರದ ‘ಕಾವು’ ಮಾತ್ರ ದಿನೇದಿನೇ ಏರುತ್ತಿದೆ, ಬಿಸಿಲ ಧಗೆಯನ್ನೂ ಮೀರಿಸುವಂತಿದೆ.

ಪ್ರಮುಖವಾಗಿ ಮೊದಲ ಬಾರಿ ಲೋಕಸಭಾ ಚುನಾವಣಾ ಕಣಕ್ಕಿಳಿದಿರುವ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್ ಹಾಗೂ ಜೆಡಿಎಸ್‌ ಅಭ್ಯರ್ಥಿ ಎಂ.ಮಲ್ಲೇಶ್‌ ಬಾಬು ಅವರ ಎದೆಯಲ್ಲಿ ಈಗಲೇ ಢವಢವ ಶುರುವಾಗಿದೆ.

ಯಾವ ಕ್ಷೇತ್ರದಲ್ಲಿ ಯಾರಿಗೆ ಲೀಡ್‌ ಬರಬಹುದು, ಯಾವ ಕ್ಷೇತ್ರದಲ್ಲಿ ಹಿನ್ನಡೆ ಆಗಬಹುದು, ಯಾರಿಗೆ ವಿಜಯಮಾಲೆ ಒಲಿಯಲಿದೆ ಎಂಬ ಚರ್ಚೆ ಕೇಳಿ ಬರುತ್ತಿದೆ. ಊರ ಮುಂದಿನ ಅರಳಿ ಮರ, ದೇಗುಲ ಕಟ್ಟೆ, ದರ್ಶಿನಿಗಳು, ಸಲೂನ್‌, ಕಾಫಿ–ಟೀ ಗೂಡಂಗಡಿ, ಬಸ್‌ ನಿಲ್ದಾಣ, ಹೊಲ, ತೋಟ, ಸಭೆ, ಸಮಾರಂಭಗಳಲ್ಲೂ ಅದೇ ಚರ್ಚೆ. ಯುವಕರು, ವಯೋವೃದ್ಧರು, ಕಾರ್ಯಕರ್ತರು, ಮುಖಂಡರು, ಅಭ್ಯರ್ಥಿಗಳು ಕೂಡ ಅದೇ ಗುಂಗಿನಲ್ಲಿದ್ದಾರೆ.

ADVERTISEMENT

ನಿಮ್ಮ ಕ್ಷೇತ್ರದಲ್ಲಿ ಯಾರಿಗೆ ಲೀಡ್‌? ನಿಮ್ಮ ಸಮುದಾಯದವರು ಯಾರಿಗೆ ವೋಟ್‌ ಹಾಕಿದ್ದಾರೆ? ಈ ಬಾರಿ ಮಹಿಳೆಯರ ಒಲವು ಹೆಚ್ಚು ಯಾರ ಕಡೆ ಇರಬಹುದು? ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳು ಕೈಹಿಡಿಯಬಲ್ಲವೇ? ಮೋದಿ ಫ್ಯಾಕ್ಟರ್‌ ಕೆಲಸ ಮಾಡಲಿದೆಯೇ ಎಂಬಂಥ ಪ್ರಶ್ನೆಗಳು ಪದೇಪದೇ ಎದುರಾಗುತ್ತಿವೆ.

‘ಆ ಸಮುದಾಯದವರೆಲ್ಲಾ ಜೆಡಿಎಸ್‌ಗೆ ಮತ ನೀಡಿದ್ದಾರಂತೆ, ಮಾಜಿ ಸಚಿವರು ಆ ಸಮುದಾಯದ ಬಗ್ಗೆ ಆ ರೀತಿ ಮಾತನಾಡಬಾರದಿತ್ತು’. ‘ಆ ಸಮುದಾಯದವರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮನೆಯಿಂದ ಹೊರಬಂದು ಕಾಂಗ್ರೆಸ್‌ಗೆ ವೋಟ್‌ ಮಾಡಿದ್ದಾರಂತೆ, ಅದು ನಿಜವೇ ಆಗಿದ್ದರೆ ಕಾಂಗ್ರೆಸ್‌ಗೆ ಪ್ಲಸ್‌ ಪಾಯಿಂಟ್‌’, ‘ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಬೆಳೆಸುವ, ತಿಂಗಳಿಗೆ ₹ 2 ಸಾವಿರ ಪಡೆಯುವ ಮಹಿಳೆಯರು ಸಾರಸಗಟಾಗಿ ಕಾಂಗ್ರೆಸ್‌ಗೆ ಹಾಕುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ, 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 135 ಸೀಟು ಬರುವ ನಿರೀಕ್ಷೆಯನ್ನು ಯಾರಾದರೂ ಇಟ್ಟುಕೊಂಡಿದ್ದರೇ?’ ಎಂಬ ಮಾತುಗಳು, ಚರ್ಚೆಗಳು ಅಲ್ಲಲ್ಲಿ ಕೇಳಿಬರುತ್ತಿವೆ.

ಈ ಬಾರಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಹೈಕಮಾಂಡ್‌ ತಮ್ಮ ಪಕ್ಷದ ಶಾಸಕರಿಗೆ, ಮಾಜಿ ಶಾಸಕರಿಗೆ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಅಭ್ಯರ್ಥಿಗಳಿಗೆ ಲೀಡ್‌ ಕೊಡಿಸುವ ಜವಾಬ್ದಾರಿ ಕೊಟ್ಟಿತ್ತು. ಜೆಡಿಎಸ್‌ಗೆ ಬಿಜೆಪಿ ಬೆಂಬಲ ಬೇರೆ ಇತ್ತು. ಹೀಗಾಗಿ, ಅವರಿಗೆಲ್ಲಾ ದೊಡ್ಡ ಸವಾಲು ಇತ್ತು.

ಇವರಲ್ಲಿ ಕೆಲವರು ತಮ್ಮ ಪಕ್ಷದ ಅಭ್ಯರ್ಥಿಗೆ ಲೀಡ್‌ ಕೊಡಿಸಲು ಬಹಳಷ್ಟು ಶ್ರಮ ಹಾಕಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಗಮನಿಸುವುದಾದರೆ ಚಿಂತಾಮಣಿಯಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್‌, ಕೋಲಾರದಲ್ಲಿ ಶಾಸಕ ಕೊತ್ತೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಕೆಜಿಎಫ್‌ನಲ್ಲಿ ಶಾಸಕಿ ರೂಪಕಲಾ ಶಶಿಧರ್‌, ಮಾಲೂರಿನಲ್ಲಿ ಶಾಸಕ ಕೆ.ವೈ.ನಂಜೇಗೌಡ, ಬಂಗಾರಪೇಟೆ ಕ್ಷೇತ್ರದಲ್ಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಮುಳಬಾಗಿಲಿನಲ್ಲಿ ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿ ಆದಿನಾರಾಯಣ ಪ್ರಯತ್ನ ಹಾಕಿದ್ದಾರೆ. ಶ್ರೀನಿವಾಸಪುರದಲ್ಲಿ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ತಮ್ಮ ಸೋಲಿನ ಬಗ್ಗೆ ದೂಷಿಸುತ್ತಲೇ ಭಾವನಾತ್ಮಕ ದಾಳ ಉರುಳಿಸಿದ್ದರು. ಅವರ ಕೆಲವೊಂದು ಹೇಳಿಕೆಗಳು ವಿವಾದಕ್ಕೂ ಗ್ರಾಸವಾಗಿವೆ.

ಮಾಲೂರಿಗೆ ರಾಹುಲ್‌ ಗಾಂಧಿ ಬಂದು ಪ್ರಚಾರ ಮಾಡಿದರೆ, ಮುಳಬಾಗಿಲು, ಬಂಗಾರಪೇಟೆ, ಶಿಡ್ಲಘಟ್ಟ, ಚಿಂತಾಮಣಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರದಲ್ಲಿ ಭಾಗಿಯಾಗಿದ್ದರು.

ಕಾಂಗ್ರೆಸ್‌ ಪಾಲಿಗೆ ಮಾಲೂರಿನಲ್ಲಿ ದೊಡ್ಡ ಸವಾಲು ಇದೆ. ಜೆಡಿಎಸ್‌ನ ರಾಮೇಗೌಡ, ಬಿಜೆಪಿಯ ಮಂಜುನಾಥ್ ಗೌಡ, ಪಕ್ಷೇತರ ಅಭ್ಯರ್ಥಿಯಾಗಿದ್ದ ಹೂಡಿ ವಿಜಯಕುಮಾರ್‌ ಜೊತೆಗೂಡಿದ್ದು ಮಲ್ಲೇಶ್‌ ಬಾಬು ಅವರಿಗೆ ಲೀಡ್‌ ಕೊಡಿಸುವ ಉಮೇದಿನಲ್ಲಿದ್ದಾರೆ. ಮುಳಬಾಗಿಲಿನಲ್ಲಿ ಎಚ್‌.ಡಿ.ಕುಮಾರಸ್ವಾಮಿ ಬಂದು ಪ್ರಚಾರ ನಡೆಸಿದ್ದು, ಕಳೆದ ಬಾರಿಗಿಂತ ಹೆಚ್ಚು ಲೀಡ್‌ ಕೊಡಿಸುವ ಭರವಸೆಯನ್ನು ಶಾಸಕ ಸಮೃದ್ಧಿ ಮಂಜುನಾಥ್‌ ನೀಡಿದ್ದಾರೆ. ಶಿಡ್ಲಘಟ್ಟದಲ್ಲಿ ಶಾಸಕ ರವಿಕುಮಾರ್‌, ಶ್ರೀನಿವಾಸಪುರದಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಬಹಳ ಪ್ರಯತ್ನ ಹಾಕಿದ್ದಾರೆ. ಕೋಲಾರದಲ್ಲಿ ಸಿಎಂಆರ್‌ ಶ್ರೀನಾಥ್‌, ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು, ಚಿಂತಾಮಣಿಯಲ್ಲಿ ಕೃಷ್ಣಾರೆಡ್ಡಿ ಬಹಳಷ್ಟು ಓಡಾಡಿದ್ದಾರೆ. ಟಿಕೆಟ್‌ ತಪ್ಪಿಸಿಕೊಂಡಿದ್ದರೂ ಸಂಸದ ಎಸ್‌.ಮುನಿಸ್ವಾಮಿ ಕಾಂಗ್ರೆಸ್‌ ವಿರುದ್ಧ ಗುಡುಗುತ್ತಾ ಮೋದಿ ನಾಮ ಜಪಿಸುತ್ತಾ ಪ್ರಚಾರ ನಡೆಸಿದ್ದಾರೆ.

ಸಚಿವ ಕೆ.ಎಚ್‌.ಮುನಿಯಪ್ಪ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಇರುವುದು ಕಾಂಗ್ರೆಸ್‌ಗೆ ಒಂದಿಷ್ಟು ಹೊಡೆತ ನೀಡಿದ್ದರೆ, ಬಿಜೆಪಿ ಮುಖಂಡರಲ್ಲಿನ ಮನಸ್ತಾಪ ಸಹಜವಾಗಿಯೇ ಜೆಡಿಎಸ್‌ ಅಭ್ಯರ್ಥಿಗೆ ಒಳೇಟು ನೀಡಿರುತ್ತದೆ.

ಎಂ.ಮಲ್ಲೇಶ್‌ ಬಾಬು
ಬಾಜಿ ಭರಾಟೆಯೂ ಜೋರು
ಕೋಲಾರ ಕ್ಷೇತ್ರದ ಕೆಲ ಹಳ್ಳಿ ಹಾಗೂ ನಗರಗಳಲ್ಲಿ ಬೆಟ್ಟಿಂಗ್‌ ಭರಾಟೆಯೂ ನಡೆಯುತ್ತಿದೆ. ಕೇವಲ ಗೆಲುವು ಸೋಲಿನ ಮೇಲಷ್ಟೇ ಅಲ್ಲ; ಯಾವ ಕ್ಷೇತ್ರದಲ್ಲಿ ಯಾರು ಮುನ್ನಡೆ ಪಡೆಯಲಿದ್ದಾರೆ ಎಂಬುದರ ಮೇಲೂ ಬಾಜಿ ಕಟ್ಟುತ್ತಿದ್ದಾರೆ. ಹಣ ಕುರಿ ಮೇಕೆ ಹಸುಗಳನ್ನು ಬಾಜಿಗೆ ಇಡುತ್ತಿದ್ದಾರೆ. ಫಲಿತಾಂಶದ ದಿನ ಹತ್ತಿರ ಬರುತ್ತಿರುವಂತೆ ಇದು ಹೆಚ್ಚಾಗುವ ಸಾಧ್ಯತೆಯೂ ಇದೆ.
2019ರಲ್ಲಿ ಏಳು ಕ್ಷೇತ್ರದಲ್ಲಿ ಬಿಜೆಪಿ ಲೀಡ್‌!
2019ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ಎಸ್‌.ಮುನಿಸ್ವಾಮಿ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಏಳರಲ್ಲಿ ಲೀಡ್‌ ಪಡೆದುಕೊಂಡಿದ್ದರು. ಕೆಜಿಎಫ್‌ ಕ್ಷೇತ್ರದಲ್ಲಿ ಮಾತ್ರ ಹಿನ್ನಡೆ ಉಂಟಾಗಿತ್ತು. ಮುಳಬಾಗಿಲು ಕ್ಷೇತ್ರದಲ್ಲಿ ಸುಮಾರು 56 ಸಾವಿರ ಮತಗಳ ಲೀಡ್‌ ಗಿಟ್ಟಿಸಿಕೊಂಡಿದ್ದರು. ಈ ಕ್ಷೇತ್ರದಲ್ಲಿ ಮುನಿಸ್ವಾಮಿ 104700 ಮತ ಪಡೆದಿದ್ದರೆ ಕೆ.ಎಚ್‌.ಮುನಿಯಪ್ಪ ಕೇವಲ 48772 ಮತ ಗಳಿಸಿದ್ದರು. ಶ್ರೀನಿವಾಸಪುರ ಹಾಗೂ ಮಾಲೂರು ಕ್ಷೇತ್ರದಲ್ಲಿ ಉತ್ತಮ ಲೀಡ್‌ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.