ಕೋಲಾರ: ‘ಕೋಲಾರ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ನನಗೇನೂ 75, 80 ವರ್ಷ ಆಗಿಲ್ಲ. ಟಿಕೆಟ್ ಉಳಿಸಿಕೊಳ್ಳುವ ವಿಶ್ವಾಸವಿದೆ. ಈ ಕ್ಷೇತ್ರದಲ್ಲಿ ಮತ್ತೆ ನಾವೇ ಗೆಲ್ಲಲಿದ್ದೇವೆ’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಯಾರಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ವರಿಷ್ಠರು 3–4 ಸಮೀಕ್ಷೆ ನಡೆಸಿದ್ದಾರೆ. ಐದು ವರ್ಷಗಳಿಂದ ಕೋಲಾರ ಕ್ಷೇತ್ರದಲ್ಲಿ ಏನೆಲ್ಲ ಅಭಿವೃದ್ಧಿ ಕೆಲಸ ನಡೆದಿದೆ ಎಂಬುದು ರಾಜ್ಯ, ರಾಷ್ಟ್ರ ವರಿಷ್ಠರಿಗೆ ಮಾಹಿತಿ ಇದೆ’ ಎಂದರು.
‘ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೆಲ ಮಾಧ್ಯಮಗಳು ‘ಬಿ’ ಫಾರಂ ಬಂದಂತೆ ಸುದ್ದಿ ಪ್ರಕಟಿಸುತ್ತಿವೆ. ನನ್ನ ಅವಧಿಯೇ ಇನ್ನೂ ಪೂರ್ಣಗೊಂಡಿಲ್ಲ. ಆದರೆ, ಕೆಲವರು ತಮಗೆ ಟಿಕೆಟ್ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ. ನನ್ನ ಬಳಿ ಯಾರೂ ಟಿಕೆಟ್ ಕುರಿತು ಚರ್ಚಿಸಿಲ್ಲ. ಆದರೆ, ರಾಮಭಕ್ತರಿಗೆ ಅನ್ಯಾಯ ಆಗುವುದಿಲ್ಲ’ ಎಂದು ಹೇಳಿದರು.
‘ಲೋಕಸಭೆ ಚುನಾವಣೆ ಸಂಬಂಧ ಈವರೆಗೆ ದೊಡ್ಡ ದೊಡ್ಡ ನಾಯಕರಿಗೇ ಇನ್ನೂ ಟಿಕೆಟ್ ಖಚಿತವಾಗಿಲ್ಲ. ಊಹಾಪೋಹಗಳಿಗೆ ಯಾರು ಕಿವಿಗೊಡಬಾರದು’ ಎಂದರು.
‘ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸುವುದು ಬಿಜೆಪಿಯ ಉದ್ದೇಶ. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ವರಿಷ್ಠರು ತೀರ್ಮಾನಕೈಗೊಳ್ಳಲಿದ್ದು, ಇದಕ್ಕೆ ಎಲ್ಲರೂ ಬದ್ಧರಾಗಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.