ADVERTISEMENT

ಬಂಗಾರಪೇಟೆಯಲ್ಲಿ ಮಸೀದಿ ದರ್ಶನ

ಎಲ್ಲಾ ಧರ್ಮದವರಿಗೆ ಮಸೀದಿ ದರ್ಶನ ನೀಡಿದ ಜಮಾತ್-ಎ-ಇಸ್ಲಾಮಿ ಹಿಂದ್

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 14:37 IST
Last Updated 9 ನವೆಂಬರ್ 2024, 14:37 IST
ಬಂಗಾರಪೇಟೆಯಲ್ಲಿ ಆಯೋಜಿಸಿದ್ದ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರಿಗೆ ಕುರಾನ್ ನೀಡಿ ಸನ್ಮಾನಿಸಲಾಯಿತು
ಬಂಗಾರಪೇಟೆಯಲ್ಲಿ ಆಯೋಜಿಸಿದ್ದ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರಿಗೆ ಕುರಾನ್ ನೀಡಿ ಸನ್ಮಾನಿಸಲಾಯಿತು   

ಬಂಗಾರಪೇಟೆ: ಸೌಹಾರ್ದ, ಸಹಬಾಳ್ವೆ ಹಾಗೂ ಸಮಾನತೆಗಾಗಿ ಪಟ್ಟಣದ ಜಮಾತ್-ಎ-ಇಸ್ಲಾಮಿ ಹಿಂದ್ ಸಮುದಾಯ ಹಾಗೂ ಮಸೀದಿಯ ಸಮಿತಿಯಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ದೊಡ್ಡ ಮಸೀದಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಸೀದಿ ದರ್ಶನ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರ ಸಂಗಮವಾಗಿತ್ತು.

ತಾಲ್ಲೂಕಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎಲ್ಲಾ ಧರ್ಮದ ಪುರುಷರು, ಮಕ್ಕಳು, ಮಹಿಳೆಯರು ಮಸೀದಿಯ ಪ್ರಾರ್ಥನಾ ಆವರಣಕ್ಕೆ ಪ್ರವೇಶ ಮಾಡಿದರು. ಸರತಿ ಸಾಲಿನಲ್ಲಿ ನಿಂತು ಪ್ರಾರ್ಥನೆ ಸಲ್ಲಿಸಿದರು. 

‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಬಿಜೆಪಿ ಜೆಡಿಎಸ್ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರಲ್ಲಿ ತಪ್ಪು ಕಲ್ಪನೆ ಬಿತ್ತುತ್ತಿದ್ದಾರೆ. ರೈತರ, ಮಠ, ಮಂದಿರಗಳ ಆಸ್ತಿಯನ್ನು ವಕ್ಫ್ ಬೋರ್ಡ್ ಹೆಸರಿಗೆ ಬದಲಾಯಿಸಿಕೊಳ್ಳಲು ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ತಾಲೂಕಿನಲ್ಲಿ ಅಂತಹ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ. ಬೇರೆಕಡೆ ವಕ್ಫ್ ಆಸ್ತಿಯನ್ನು ಅಧಿಕೃತ ಮಾಡಿಕೊಳ್ಳಲಾಗುತ್ತಿದೆಯೇ ಹೊರತು ಬೇರೆ ಆಸ್ತಿಯನ್ನಲ್ಲ. ಇದು ಬಿಜೆಪಿಗರ ಆಧಾರರಹಿತ ಆರೋಪ ಎಂದು ಸ್ಪಷ್ಟನೆ ನೀಡಿದರು.

ADVERTISEMENT

ತಾಲ್ಲೂಕಿನ ಇತಿಹಾಸದಲ್ಲಿ‌ ಇದೇ ಮೊದಲು ಮಸೀದಿಗೆ ಪ್ರವೇಶ ಮಾಡಲು ಅವಕಾಶ ಕಲ್ಪಿಸಿರುವುದು ವಿಶೇಷ. ಒಂದು ಧರ್ಮದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಇಂತಹ ಪ್ರಸ್ತುತ ಸನ್ನಿವೇಶದಲ್ಲಿ ಈ ಪ್ರಯತ್ನ ಬಹಳ ಮುಖ್ಯ. ಇಡೀ ದೇಶದಲ್ಲಿ ಮಸೀದಿಗಳಿಗೆ ಮಹಿಳೆಯರು ಸೇರಿದಂತೆ‌‌ ಸರ್ವರಿಗೂ ಪ್ರವೇಶ ಸಿಗುವಂತಾಗಬೇಕು ಎಂದು ಹೇಳಿದರು.

ಆಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಮಾತನಾಡಿ, ಮಸೀದಿಗಳನ್ನು ಕೇವಲ ಪ್ರಾರ್ಥನಾ ಮಂದಿರಗಳು ಎಂದು ತಿಳಿಯಬೇಕು. ಮಸೀದಿಗಳ ಹಾಗೂ ಧರ್ಮಗುರುಗಳ‌ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವುದು ತಪ್ಪು. ದೇವರು ಎಲ್ಲರಿಗೂ ಒಬ್ಬನೆ, ಆದರೆ ಪ್ರಾರ್ಥಿಸುವ ವಿಧಾನ ಮಾತ್ರ ಬೇರೆ. ಮಸೀದಿಗಳ ಬಗ್ಗೆ ಅನ್ಯಧರ್ಮಿಯರಲ್ಲಿ ಹಲವು ಸಂಶಯಗಳಿವೆ. ಅದನ್ನು ಹೋಗಲಾಡಿಸಲು ಮಸೀದಿ ದರ್ಶನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮಸೀದಿಯಲ್ಲಿ ಹೇಗೆ ಪ್ರಾರ್ಥನೆ ಸಲ್ಲಿಸಲಾಗುವುದು, ಏನೇನು ಇದೆ ಎಂಬುದನ್ನು ಸಾರ್ವಜನಿಕರಿಗೆ ತೋರಿಸಲಾಯಿತು. ಪುರಸಭೆ ಅಧ್ಯಕ್ಷ ಗೋವಿಂದ, ಪುರಸಭೆ ಸದಸ್ಯರಾದ ಪ್ರಶಾಂತ್, ಆರೋಕ್ಯ ರಾಜನ್, ಸುಹೇಲ್, ಜಮಾಆತೆ ಟ್ರಸ್ಟ್ ಅಧ್ಯಕ್ಷ ನಿಸಾರ್ ಅಹ್ಮದ್, ಮುಬಾರಕ್ ಭಾಗಬಾನ್, ಇದಾಯಿತ್ತುಲ್ಲಾ, ರಫೀಕ್, ಕಸಾಪ ಅಧ್ಯಕ್ಷ ಸಂಜೀವಪ್ಪ, ಎಸ್.ಎ.ಪಾರ್ಥಸಾರಥಿ ಇದ್ದರು.

ದೊಡ್ಡ ಮಸೀದಿಯಲ್ಲಿ ಆಯೋಜಿಸಿದ್ದ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮದಲ್ಲಿ ನಮಾಜ್ ಮಾಡಿದ ಶಾಸಕ ಎಸ್.ಎನ್. ನಾರಾಯಣಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.