ADVERTISEMENT

ಮಾಲೂರು: ಬಡವರಿಗೆ ಗಗನ ಕುಸುಮವಾದ ನಿವೇಶನ

ವಿ.ರಾಜಗೋಪಾಲ್
Published 14 ಅಕ್ಟೋಬರ್ 2024, 6:32 IST
Last Updated 14 ಅಕ್ಟೋಬರ್ 2024, 6:32 IST
   

ಮಾಲೂರು: ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಕೂಲಿ–ನಾಲಿ ಮಾಡಿ ದಿನದೂಡುವ ಕೂಲಿ ಕಾರ್ಮಿಕರು ಒಂದು ಸೂರು ಹೊಂದಬೇಕೆಂಬ ಕನಸನ್ನು ನನಸು ಮಾಡಿಕೊಳ್ಳಲು ಎರಡು ದಶಕಗಳಿಂದ ಕಾಯುತ್ತಿದ್ದಾರೆ. ಆದರೆ, ಅವರ ಕನಸು ಮಾತ್ರ ಇಂದಿಗೂ ಕನಸಾಗಿಯೇ ಉಳಿದಿದೆ.

2002–03ರಲ್ಲಿ ಅಂದಿನ ಶಾಸಕ ಎ. ನಾಗರಾಜು ಪುರಸಭೆ ಮೂಲಕ ಬಡವರಿಗೆ ನಿವೇಶನ ಕಲ್ಪಿಸುವ ಆಶ್ರಯ ಸಮಿತಿ ಯೋಜನೆಯನ್ನು ಜಾರಿಗೊಳಿಸಿದ್ದರು. ನಿವೇಶನಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಿಗೆ ನಿವೇಶನ ಕಲ್ಪಿಸಲು ₹2,500 ಮತ್ತು ₹5,000 ಡಿ.ಡಿ ನಿಗದಿಪಡಿಸಲಾಗಿತ್ತು. ಇದರಿಂದ ಸಂಗ್ರಹವಾದ ಹಣದಲ್ಲಿ 2.30 ಎಕರೆ ಜಮೀನು ಖರೀದಿಸಲಾಗಿತ್ತು. 2004ರಲ್ಲಿ ಮಾಲೂರಿಗೆ ಭೇಟಿ ನೀಡಿದ್ದ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕೆಲವು ಫಲಾನುಭವಿಗಳಿಗೆ ಹಕ್ಕುಪತ್ರ ಗಳನ್ನೂ ನೀಡಿದ್ದರು.

ಆದರೆ ನಂತರದ ರಾಜಕೀಯ ಬದಲಾವಣೆಗಳಿಂದಾಗಿ 2010ರಲ್ಲಿ ಉಚಿತ ನಿವೇಶನ ಪಡೆಯಲು ಹೆಚ್ಚುವರಿಯಾಗಿ ₹35 ಸಾವಿರ ಕಟ್ಟಬೇಕು ಎಂದು ಸೂಚಿಸಲಾಯಿತು. ಸೂರಿನ ಆಸೆಯಿಂದಾಗಿ 680 ಫಲಾನುಭವಿಗಳು ₹35 ಅನ್ನು ಡಿ.ಡಿ ಮೂಲಕ ಆಶ್ರಯ ಸಮಿತಿಗೆ ಪಾವತಿಸಿದರು. ಆದರೆ, ನಿವೇಶನ ಮಾತ್ರ ಸಿಗಲೇ ಇಲ್ಲ ಎಂದು ಫಲಾನುಭವಿಗಳು ಬೇಸರ ವ್ಯಕ್ತಪಡಿಸಿದರು.

ADVERTISEMENT

ಆಶ್ರಯ ಜಮೀನು ಸರ್ಕಾರಿ ಕಾಲೇಜು ನಿರ್ಮಾಣಕ್ಕೆ ಬಳಕೆ: 2010ರಲ್ಲಿ ಸರ್ವೆ ಸಂಖ್ಯೆ 151ರಲ್ಲಿ 2.37 ಎಕರೆ ಜಮೀನನ್ನು ಪುರಸಭೆಯ ಆಶ್ರಯ ಸಮಿತಿ ಖರೀದಿಸಿತ್ತು. ಆದರೆ, ಈ ಜಮೀನನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ಬಳಸಲಾಗಿತ್ತು. ಇದರಿಂದ ವಸತಿ ರಹಿತ ಬಡವರಿಗೆ ನಿವೇಶನ ಕಲ್ಪಿಸುವ ಯೋಜನೆ ಮತ್ತೆ ನನೆಗುದಿಗೆ ಬೀಳುವಂತಾಗಿತ್ತು.

2012ರಲ್ಲಿ ಶಾಸಕರಾಗಿ ಆಯ್ಕೆಯಾದ ಜೆಡಿಎಸ್‌ನ ಕೆ.ಎಸ್. ಮಂಜುನಾಥ್ ಗೌಡ, ಬಡವರಿಗೆ ನಿವೇಶನ ಕಲ್ಪಿಸಲು ಯತ್ನ ನಡೆಸಿದರು. ಆದರೆ, ಅದು ಕೈಗೂಡಲಿಲ್ಲ. ಇದೀಗ ಮತ್ತೆ ವಸತಿರಹಿತರಿಗೆ ನಿವೇಶನ ಕಲ್ಪಿಸಬೇಕು ಎಂಬ ಕೂಗಿಗೆ ಮತ್ತೆ ಜೀವ ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಆಶ್ರಯ ಸಮಿತಿ ಅಧಿಕಾರಿ ಮಂಜುನಾಥ್, ‘ಶಾಸಕ ಕೆ.ವೈ. ನಂಜೇಗೌಡ ಸೂಚನೆ ಮೇರೆಗೆ ಸಮಿತಿಗೆ ಹಣ ಪಾವತಿ ಮಾಡಿದ್ದ 680 ಫಲಾನುಭವಿಗಳ ಪೈಕಿ ಬಹುತೇತಕರ ಬ್ಯಾಂಕ್ ಖಾತೆಗಳಿಗೆ ಬಡ್ಡಿಸಹಿತವಾಗಿ ಹಣ ಮರುಪಾವತಿ ಮಾಡಲಾಗಿದೆ. ಸಮರ್ಪಕ ದಾಖಲೆ ಸಲ್ಲಿಸದ 35 ಮಂದಿಗೆ ಮಾತ್ರ ಇನ್ನಷ್ಟೇ ಹಣ ಪಾವತಿಸಬೇಕಿದೆ’ ಎಂದು ತಿಳಿಸಿದರು.

ಚಿನ್ನ ಅಡವಿಟ್ಟು ಹಣ ಕಟ್ಟಿದ್ದರು...

‘ಆಶ್ರಯ ಸಮಿತಿ ನಿವೇಶನಕ್ಕಾಗಿ ಬಡ ಹೆಣ್ಣು ಮಕ್ಕಳು ತಮ್ಮ ಕಿವಿ ಹೋಲೆ, ಮೂಗು ಬಟ್ಟುಗಳನ್ನು ಅಡಮಾನ ಇಟ್ಟು ಆಶ್ರಯ ಸಮಿತಿಗೆ ಹಣ ಕಟ್ಟಿದ್ದರು. ಬಡವರ ಹಣದಿಂದ ಖರೀದಿ ಮಾಡಿದ್ದ ಜಮೀನನ್ನು ಸರ್ಕಾರಿ ಕಾಲೇಜು ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿತ್ತು’ ಎಂದು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ದಿನೇಶ್ ಗೌಡ ಬೇಸರ ವ್ಯಕ್ತಪಡಿಸಿದರು.

‘ಅದನ್ನು ಖಂಡಿಸಿ 2018ರಲ್ಲಿ ಪುರಸಭೆ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಆಗಿನ ಜಿಲ್ಲಾಧಿಕಾರಿ ಸತ್ಯವತಿ ಸ್ಥಳಕ್ಕೆ ಆಗಮಿಸಿ, ನಿವೇಶನ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ, ಅಂದಿನಿಂದ ಇಂದಿನವರೆಗೆ ಬಡಜನರು ಅಥವಾ ನಿವೇಶನ ರಹಿತರಿಗೆ ಭರವಸೆ ಬಿಟ್ಟು ಬೇರೇನೂ ಸಿಕ್ಕಿಲ್ಲ. ಇದೀಗ ಕೆ.ವೈ. ನಂಜೇಗೌಡ ಬಡವರಿಗೆ ನಿವೇಶನ ಕಲ್ಪಿಸುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

2–3 ತಿಂಗಳಲ್ಲಿ ಅರ್ಹರಿಗೆ ಸೌಲಭ್ಯ

ಬಡವರಿಗೆ ಆಶ್ರಯ ಸಮಿತಿ ಯೋಜನೆಯಡಿ ಉಚಿತ ನಿವೇಶನ ಕಲ್ಪಿಸಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರಿಂದ ₹35 ಸಾವಿರ ಕಟ್ಟಿಸಿಕೊಳ್ಳಲಾಗಿತ್ತು. ಆ ಹಣವನ್ನು ಬಡ್ಡಿ ಸಹಿತವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ವೈ. ನಂಜೇಗೌಡ ತಿಳಿಸಿದರು.

ಜೊತೆಗೆ ಬಡವರಿಗೆ ನಿವೇಶನ ಕಲ್ಪಿಸಲು ಸರ್ಕಾರದಿಂದ 12 ಎಕರೆ ಜಮೀನು ಮಂಜೂರು ಮಾಡಿಸಿಕೊಂಡಿದ್ದೇನೆ. ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಪುರಸಭೆಯು ಸರ್ಕಾರದಿಂದ ಮಂಜೂರು ಮಾಡಿಸಿಕೊಳ್ಳಲಾದ ಜಮೀನಿನಲ್ಲಿ ಬಡಾವಣೆ ನಿರ್ಮಾಣ ಕಾಮಗಾರಿ ಕೈಗೊಂಡಿದೆ. 2–3 ತಿಂಗಳಲ್ಲಿ ಬಡವರಿಗೆ ಉಚಿತ ನಿವೇಶನದ ಜೊತೆಗೆ ಮನೆ ಕಟ್ಟಿಸಿಕೊಡುವ ಯೋಜನೆಗೆ ಮುಖ್ಯಮಂತ್ರಿಯಿಂದಲೇ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.