ಮಾಲೂರು: ತಾಲ್ಲೂಕಿನ ಹುಂಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚವೇನಹಳ್ಳಿ ಗ್ರಾಮದ ಕೆರೆಯಂಗಳದಲ್ಲಿ ಬೆಳೆದಿರುವ ದಟ್ಟವಾದ ಬಿದುರುಗಳಿಂದಾಗಿ ಕೆರೆಯಂಗಳ ಪ್ರದೇಶವು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ, ಗ್ರಾಮದಲ್ಲಿರುವ ಚರಂಡಿಗಳು ಸ್ವಚ್ಛಗೊಳಿಸದ ಕಾರಣ ಕಲುಷಿತ ನೀರು ತುಂಬಿಕೊಂಡು ದುರ್ನಾತ ಬೀರುತ್ತಿವೆ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಚವೇನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಸುಮಾರು ಆರು ಎಕರೆ ವಿಸ್ತೀರ್ಣದ ಕೆರೆಯ ಅಂಗಳದಲ್ಲಿ ಅರಣ್ಯ ಇಲಾಖೆಯು ಬಿದಿರು ನಾಟಿ ಮಾಡಿತ್ತು. ಅದು ಈಗಾಗಲೇ ದಟ್ಟವಾಗಿ ಬೆಳೆದು ನಿಂತಿದ್ದು, ದೊಡ್ಡ ಪೊದೆಗಳಾಗಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಬಿದಿರನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಕಾರು, ಬೈಕ್‌ಗಳಲ್ಲಿ ಬರುವ ಯುವಕ ಮತ್ತು ಯುವತಿಯರು ತಮ್ಮ ಸಂಗಾತಿಯೊಡನೆ ಕಾಲ ಕಳೆಯುತ್ತಾರೆ. ಅಲ್ಲದೆ, ಪೋಕರಿ ಹುಡುಗರು ಇಲ್ಲಿಗೆ ಬಂದು ಜೂಜು, ಕುಡಿತ, ಗಾಂಜಾ ಸೇವನೆಯಲ್ಲಿ ತೊಡಗುತ್ತಾರೆ. ಇದನ್ನು ಪ್ರಶ್ನಿಸುವ ಗ್ರಾಮಸ್ಥರೊಂದಿಗೆ ಜಗಳ ಮಾಡಿ, ಹಲ್ಲೆಯನ್ನೂ ನಡೆಸುತ್ತಾರೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.
ದುರ್ನಾತ ಬೀರುತ್ತಿರುವ ಚರಂಡಿಗಳು: ಚವೇನಹಳ್ಳಿಯಲ್ಲಿ ಸುಮಾರು 110 ಕುಟುಂಬಗಳು ವಾಸವಾಗಿದ್ದು, ಶೇ 90ರಷ್ಟು ಅಲ್ಪ ಸಂಖ್ಯಾತ ಕುಟುಂಬಗಳೇ ಇವೆ. 10 ಮನೆಗಳು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಆದರೆ, ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಇರುವ ಕೆಲವು ಚರಂಡಿಗಳಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ಚರಂಡಿಗಳು ಗಬ್ಬು ನಾರುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದಲ್ಲಿ ಚರಂಡಿಗಳೇ ಇಲ್ಲ. ಇರುವ ಚರಂಡಿಗಳ ಸ್ವಚ್ಛತೆ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಳು ಬಿದ್ದಿರುವ ಮನೆ ಬಳಿ ಸ್ವಚ್ಛ ಮಾಡಲು ಸಹ ಮುಂದಾಗುತ್ತಿಲ್ಲ.ಇಮ್ತಿಯಾಜ್ ಗ್ರಾ.ಪಂ.ಸದಸ್ಯ ಚವೇನಹಳ್ಳಿ ಕ್ಷೇತ್ರ
ಕೆರೆ ಅಂಗಳದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೆರೆ ಅಂಗಳದಲ್ಲಿರುವ ಬಿದಿರನ್ನೂ ತೆರವುಗೊಳಿಸಿಲ್ಲ.- ರೆಹಮತ್ತುಲ್ಲಾ ಅಧ್ಯಕ್ಷ ಕೆರೆ ಅಭಿವೃದ್ಧಿ ಸಮಿತಿ
ನನಗೆ ಯಾವ ಕೆರೆ ಎಂದು ನೆನಪಿಗೆ ಬರುತ್ತಿಲ್ಲ. ಚವೇನಹಳ್ಳಿ ಗ್ರಾಮಸ್ತರು ಬಿದಿರು ತೆರುವುಗೊಳಿಸಿ ಎಂದು ಕೊಟ್ಟಿರುವ ಮನವಿ ಬಗ್ಗೆ ಕಚೇರಿಯಲ್ಲಿ ವಿಚಾರಿಸಿ ನಾಳೆ ನಿಮ್ಮಗೆ ಮಾಹಿತಿ ತಿಳಿಸುತ್ತೇನೆಧನಲಕ್ಷ್ಮಿ ಅರಣ್ಯ ಇಲಾಖೆ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.