ADVERTISEMENT

ಸಂವಿಧಾನಕ್ಕೆ ಮೂಲಭೂತವಾದಿಗಳೇ ಸವಾಲು

ಮತಾಂಧತೆ, ಮೌಢ್ಯತೆ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಠ್ಠಲ್ ವಗ್ಗನ್ ಕಳವಳ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 15:52 IST
Last Updated 24 ನವೆಂಬರ್ 2024, 15:52 IST
ಮಾಲೂರು ಪಟ್ಟಣದಲ್ಲಿ ಭಾನುವಾರ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಸಂವಿಧಾನಕ್ಕೆ ಸವಾಲೊಡ್ಡಿರುವ ಮತಾಂಧತೆ ಮತ್ತು ಮೌಢ್ಯತೆ ವಿಷಯದ ಕುರಿತು ಕಲ್ಬುರ್ಗಿ ವಿಚಾರವಾದಿ, ಚಿಂತಕ ಡಾ. ವಿಠ್ಠಲ್ ವಗ್ಗನ್ ವಿಶೇಷ ಉಪನ್ಯಾಸ ನೀಡಿದರು
ಮಾಲೂರು ಪಟ್ಟಣದಲ್ಲಿ ಭಾನುವಾರ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಸಂವಿಧಾನಕ್ಕೆ ಸವಾಲೊಡ್ಡಿರುವ ಮತಾಂಧತೆ ಮತ್ತು ಮೌಢ್ಯತೆ ವಿಷಯದ ಕುರಿತು ಕಲ್ಬುರ್ಗಿ ವಿಚಾರವಾದಿ, ಚಿಂತಕ ಡಾ. ವಿಠ್ಠಲ್ ವಗ್ಗನ್ ವಿಶೇಷ ಉಪನ್ಯಾಸ ನೀಡಿದರು   

ಮಾಲೂರು: ದಲಿತ ಸಂಘರ್ಷ ಸಮಿತಿ ವತಿಯಿಂದ ಸಂವಿಧಾನಕ್ಕೆ ಸವಾಲೊಡ್ಡಿದ ‘ಮತಾಂಧತೆ ಮತ್ತು ಮೌಢ್ಯತೆ’ ಎಂಬ ವಿಷಯದ ಕುರಿತು ಭಾನುವಾರ ಇಲ್ಲಿ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಯಿತು. 

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಲ್ಬುರ್ಗಿ  ವಿಚಾರವಾದಿ ಮತ್ತು ಚಿಂತಕ ಡಾ. ವಿಠ್ಠಲ್ ವಗ್ಗನ್, ‘ಭಾರತದ ಸಂವಿಧಾನಕ್ಕೆ ಸವಾಲಾಗಿರುವ ಎಲ್ಲ ಧರ್ಮಾಂಧ ಮೂಲಭೂತವಾದಿಗಳನ್ನು ಮಣಿಸಲು ಮೊದಲು ಸಂವಿಧಾನವನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳಬೇಕು’ ಎಂದು ಹೇಳಿದರು. 

‘75 ವರ್ಷಗಳಿಂದ ಜಾರಿಯಲ್ಲಿರುವ ಭಾರತದ ಸಂವಿಧಾನಕ್ಕೆ ಸಾವಿರಾರು ವರ್ಷಗಳಿಂದ ನಮ್ಮನ್ನು ಮೌಡ್ಯತೆ ಮತ್ತು ಅಂಧಕಾರಕ್ಕೆ ತಳ್ಳಿದ್ದ ಬ್ರಾಹ್ಮಣ್ಯ ಮತ್ತು ಸಂಪ್ರದಾಯಗಳು ಸವಾಲು ಒಡ್ಡುತ್ತಿವೆ. ಆದರೆ, ಇಂದಿಗೂ ಭಾರತದ ಸಂವಿಧಾನವನ್ನು ಯಾರು ಸಹ ಅಲುಗಾಡಿಸಲು ಸಾಧ್ಯವಾಗಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿರುವುದೇ ಇದಕ್ಕೆ ಕಾರಣ’ ಎಂದು ಹೇಳಿದರು. 

ADVERTISEMENT

ಆದರೆ, ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿ ಶಿಕ್ಷಣ ಪಡೆದವರು ಮತ್ತು ಉನ್ನತ ಉದ್ಯೋಗದಲ್ಲಿರುವವರು ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳುತ್ತಿಲ್ಲ. ಇದರಿಂದಾಗಿ ಇಂಥವರು ಸಂವಿಧಾನದ ಮಾರ್ಗವನ್ನು ಬಿಟ್ಟು ಹಳೆಯ ಗೊಡ್ಡು ಸಂಪ್ರದಾಯಗಳ ಹಿಂದೆ ಹೋಗುತ್ತಿದ್ದಾರೆ ಎಂದು ಟೀಕಸಿದರು. 

ರಾಮಾಯಣ ಹಾಗೂ ಮಹಾಭಾರತದ 18 ಪರ್ವಗಳಲ್ಲೂ ಶೋಷಣೆ, ಅಸಮಾನತೆ ಹಾಗೂ ಗುಲಾಮಗಿರಿ ಇದೆ. ಭಾರತದ ಸಂವಿಧಾನದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗಿದೆ. ಆದರೆ, ಬಾಬಾ ಸಾಹೇಬರು ದಲಿತರು ಎಂಬ ಕಾರಣಕ್ಕೆ ಅವರು ಬರೆದ ಸಂವಿಧಾನವನ್ನು ಭಾರತೀಯರು ಪ್ರತ್ಯೇಕವಾಗಿ ನೋಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸಾಕ್ಷಿ ಮತ್ತು ಆಧಾರಸಹಿತವಾಗಿ ಸಂವಿಧಾನಕ್ಕೆ ಸವಾಲಾಗಿರುವ ಪ್ರಮುಖ ಘಟನಾವಳಿಗಳನ್ನು ದಿನಾಂಕಗಳ ಸಹಿತವಾಗಿ ನೆರದಿದ್ದವರಿಗೆ ಮನದಟ್ಟಾಗುವಂತೆ ಸರಾಗವಾಗಿ ತಿಳಿಸಿಕೊಟ್ಟರು. ಅಪಾರ ಸಂಖ್ಯೆಯಲ್ಲಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನೆರೆದಿದ್ದರು.

ದಸಂಸ ತಾಲ್ಲೂಕು ಸಂಚಾಲಕ ಎಂ.ಶೇಷಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿ. ಕೃಷ್ಣಪ್ಪ, ಎ. ಅಶ್ವತ್ ರೆಡ್ಡಿ, ತಿಮ್ಮಯ್ಯ, ಕೆ. ವೆಂಕಟೇಶಪ್ಪ, ಎ.ಕೆ. ವೆಂಕಟೇಶಪ್ಪ, ರಾಮಚಂದ್ರಪ್ಪ, ರಾಮಕೃಷ್ಣಪ್ಪ, ಇಂದುಮಂಗಲ ಶ್ರೀನಿವಾಸ್ ಹಾಗೂ ದಲಿತ ಸಮುದಾಯದ ಹಿರಿಯ ಮುಖಂಡರು, ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಹಾಗೂ ದಸಂಸ ಕಾರ್ಯಕರ್ತರು ಭಾಗವಹಿಸಿದ್ದರು.

ಹಿಂದೂ ಪುರಾಣಗಳಲ್ಲಿ ಅರ್ಥವಾಗದ ಮಂತ್ರಗಳನ್ನು ಪಟಿಸಿ, ಮನುಷ್ಯನನ್ನು ಕತ್ತಲಿನಲ್ಲಿಟ್ಟಿದ್ದರೂ, ಅವುಗಳನ್ನೇ ನಂಬಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುವ ಅಭ್ಯಾಸ ಹೆಚ್ಚಾಗುತ್ತಿದೆ.ದಲಿತರಲ್ಲಿನ ಕೆಲವರು ತಮ್ಮ ಗುಲಾಮಗಿರಿ ಬುದ್ಧಿಯನ್ನು ಬಿಡದೆ ತಾವು ಮಾತ್ರ ಮುಂದುವರೆಯುವುದು ಹಾಗೂ ತಮ್ಮ ಮಕ್ಕಳನ್ನು ಚುನಾವಣೆಗಳಿಗೆ ನಿಲ್ಲಿಸುವುದನ್ನು ನಿಲ್ಲಿಸುವವರೆಗೂ ದಲಿತರ ಉದ್ಧಾರ ಸಾಧ್ಯವಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.

ಕೇವಲ ಒಬ್ಬಂಟಿಯಾಗಿ ತನ್ನೆಲ್ಲ ಸಂಸಾರವನ್ನು ದೇಶಕ್ಕಾಗಿ ತ್ಯಾಗ ಮಾಡಿ, ತಮ್ಮ ಮಕ್ಕಳನ್ನು ಸರಿಯಾಗಿ ಪೋಷಿಸಲು ಸಾಧ್ಯವಿಲ್ಲದೆ, ತಮ್ಮ ಜೀವಮಾನವನ್ನೆಲ್ಲ ಭಾರತದ ಬಡವರಿಗೆ ದಲಿತರಿಗೆ ಶೋಷಿತರಿಗೆ ಮೀಸಲಿಟ್ಟು ಸಂವಿಧಾನವೆಂಬ ಮಹಾ ಪರಿಹಾರವನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಆದರೆ ನಾವು ಸಂವಿಧಾನವನ್ನು ಓದದೆ ಅನುಕೂಲ ಹಾಗೂ ಅವಕಾಶಗಳಿಗಾಗಿ ಮಾತ್ರ ಸಂವಿಧಾನವನ್ನು ಬಳಸಿಕೊಂಡು ಅದೇ ಗೊಡ್ಡು ಸಂಪ್ರದಾಯಗಳ ಹಿಂದೆ ಹೋಗುತ್ತಿದ್ದೇವೆ. ನೂರಾರು ವರ್ಷಗಳ ಹಿಂದೆ ಮಾಡುತ್ತಿದ್ದ ತಪ್ಪನ್ನೇ ಮತ್ತೆ ಮಾಡುತ್ತಿದ್ದೇವೆ. ಗುಂಪುಗಾರಿಕೆ, ಜಾತಿಯತೆ ಹಾಗೂ ಧಾರ್ಮಿಕ ಮತಾಂದತೆ ಎಂಬ ಕ್ರೂರಿಯು ಸಂವಿಧಾನವನ್ನು ವ್ಯವಸ್ಥಿತವಾಗಿ ಮರೆಮಾಚಲು ಪ್ರಯತ್ನಿಸಿದರು ಸಹ ಬಾಬಾ ಸಾಹೇಬರು ಬರೆದಿರುವ ಕಾರಣಕ್ಕೆ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ. ಕೆಲವು ಎಡಬಿಡಂಗಿ ರಾಜಕಾರಣಿಗಳು ,ಕೆಲವು ಅಪಪ್ರಬುದ್ಧ ನಾಯಕರು, ಕೆಲವು ಅವಿವೇಕಿ ಕಿಡಿಗೇಡಿಗಳು, ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ಸಂವಿಧಾನದ ಅವಹೇಳನಕ್ಕೆ ಮುಂದಾಗುತ್ತಾರೆ. ಆದರೆ ಪ್ರಪಂಚದ ಬೇರೆ ಬೇರೆ ದೇಶಗಳ ಗಮನವನ್ನು ಸೆಳೆದಿರುವ ಭಾರತದ ಸಂವಿಧಾನವನ್ನು ನಾವು ಅರ್ಥೈಸಿಕೊಳ್ಳದಿರುವುದೇ ದೊಡ್ಡ ದುರಂತ. ಎಲ್ಲಿಯವರೆಗೂ ಹಳೆಯ ಅಗೋಚರ ವಿಷಯಗಳ ಬಗ್ಗೆ ಅವಾಸ್ತವಿಕ ವಿಚಾರಗಳ ಬಗ್ಗೆ ನಮ್ಮ ಗಮನವನವನ್ನು ಕೊಡುತ್ತೇವೆಯೋ ಜೊತೆಗೆ ನಮ್ಮ ಬುದ್ಧಿಯನ್ನು ಅವುಗಳ ಗುಲಾಮರನ್ನಾಗಿ ಮಾಡುತ್ತೇವೆಯೋ ಅಲ್ಲಿಯವರೆಗೂ ನಮ್ಮ ಸಮಸ್ಯೆಗಳಿಗೆ ಪರಿಹಾರಗಳೇ ಸಾಧ್ಯವಿಲ್ಲ. ರಾಮ, ಕೃಷ್ಣ ,ತುಳಸಿ ,ವಿಶ್ವಾಮಿತ್ರ ,ಇಂತಹ ಸಾವಿರಾರು ಪಾತ್ರಗಳನ್ನು ಪೋಷಿಸಿಕೊಂಡು ಬರುತ್ತಿರುವ ಹಿಂದುತ್ವವೆಂಬ ವಿಳಾಸವಿಲ್ಲದ ವಾದವು ಸಂವಿಧಾನವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಎಲ್ಲಿಯವರೆಗೆ ನಾವೆಲ್ಲ ಮಾತನಾಡಲು ಕಲಿಯುವುದಿಲ್ಲವೋ ಅಲ್ಲಿಯವರೆಗೂ ನಮಗೆ ಧೈರ್ಯ ಬರಲು ಸಾಧ್ಯವಿಲ್ಲ ಸಂವಿಧಾನವನ್ನು ಅರ್ಥ ಮಾಡಿಕೊಂಡರೆ ಒಬ್ಬಂಟಿಯಾಗಿ ಎಂತಹ ಸಮಸ್ಯೆಯನ್ನಾದರೂ ಎದುರಿಸಲು ಸಾಧ್ಯವಿದೆ. ಅಂಬೇಡ್ಕರ್ ಅವರ ಶಿಕ್ಷಣ ಸಂಘಟನೆ ಹೋರಾಟ ಇವುಗಳನ್ನು ಮಾತನಾಡುವ ಬದಲು ಭಾಷಣ ಮಾಡುವ ಬದಲು, ಅವುಗಳನ್ನು ಯಥಾವತ್ತಾಗಿ ಅನುಸರಿಸುವ ಮೂಲಕ ಪ್ರಜ್ಞಾವಂತರಾಗಬೇಕಾಗಿದೆ. ಆಗ ಮಾತ್ರ ಬಹುತ್ವ ಭಾರತ ಉಳಿಯಲು ಸಾಧ್ಯಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.