ADVERTISEMENT

ಮಾಲೂರು: ರೈತರಿಗೆ ಆದಾಯದ ಮೂಲವಾದ ಗುಲಾಬಿ

ವಿ.ರಾಜಗೋಪಾಲ್
Published 28 ಆಗಸ್ಟ್ 2024, 6:42 IST
Last Updated 28 ಆಗಸ್ಟ್ 2024, 6:42 IST
ಪುರ ಗ್ರಾಮದ ರೈತ ರಾಜಣ್ಣ ತಮ್ಮ ಕೃಷಿ ಭೂಮಿಯಲ್ಲಿ ಗುಲಾಬಿ ನಾಟಿ ಮಾಡಿರುವುದು
ಪುರ ಗ್ರಾಮದ ರೈತ ರಾಜಣ್ಣ ತಮ್ಮ ಕೃಷಿ ಭೂಮಿಯಲ್ಲಿ ಗುಲಾಬಿ ನಾಟಿ ಮಾಡಿರುವುದು   

ಮಾಲೂರು: ಮಳೆಯ ಆಶ್ರಯದಲ್ಲಿ ಸಾಂಪ್ರದಾಯಿಕ ಕೃಷಿ ನಡೆಸುವುದು ಈಗ ನಷ್ಟದ ಬಾಬತ್ತು. ಉತ್ತು, ಬಿತ್ತು ಮಳೆಗಾಗಿ ಕಾಯುವುದು ಕಷ್ಟವೂ ಹೌದು. ಹನಿ ನೀರಾವರಿ ಅನುಸರಿಸಿ ವಾಣಿಜ್ಯೇತರ ಬೆಳೆ ಬೆಳೆಯುವುದರಿಂದಲೂ ಪ್ರಯೋಜನ ಕಡಿಮೆ ಎಂಬುದು ರೈತರ ನಿಲುವು. ಇದೇ ಕಾರಣಕ್ಕಾಗಿ ಹಲವು ರೈತರು ಹನಿ ನೀರಾವರಿ ಪದ್ಧತಿಯನ್ನೇ ಅನುಸರಿಸಿಕೊಂಡು ವಾಣಿಜ್ಯಾತ್ಮಕ ಹೂವಿನ ಬೆಳೆಯ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ.

ತಾಲ್ಲೂಕಿನ ಲಕ್ಕೂರು, ಪುರ, ಕೋಡಹಳ್ಳಿ, ಕೊಡುರು, ಜಗದೇನಹಳ್ಳಿ, ಜಯಮಂಗಲ, ಸಂಪಂಗೆರೆ, ಮಾಸ್ತಿ ಚೊಕ್ಕಂಡಹಳ್ಳಿ, ಯಶವಂತಪುರ, ಕಡತೂರು, ಬರಗೂರು ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಹಲವು ರೈತರು ವಿವಿಧ ಬಗೆಯ ಹೂವಿನ ಬೆಳೆಯ ಮೊರೆ ಹೋಗಿದ್ದಾರೆ. ನಗರ ಪ್ರದೇಶದ ಜನರು ಶುಭ ಕಾರ್ಯಕ್ರಮಗಳ ಸಂದರ್ಭದಲ್ಲಿ ಅಲಂಕಾರಗಳಿಗೆ ಬಳಸುವ ಹೂವುಗಳನ್ನು ತಾಲ್ಲೂಕಿನಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. 

ಗುಲಾಬಿ (ಡಚ್ ರೋಸ್ ಎಂದು ಕರೆಯಲಾಗುವ ಈ ಗುಲಾಬಿಯಲ್ಲಿ ಪರಿಮಳ ಕಡಿಮೆ. ಆದರೆ ಬೇಡಿಕೆ ಹೆಚ್ಚು). ಆಸ್ಟರ್, ಸೇವಂತಿಗೆ, ಸುಗಂಧರಾಜ, ಗ್ಲಾಡಿಯಸ್ ಹೂವುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಅದರ ಜೊತೆಗೆ ಕನಕಾಂಬರ, ಮಲ್ಲಿಗೆ, ಚೆಂಡು ಮಲ್ಲಿಗೆ ಬೆಳೆಯುವ ರೈತರೂ ಇದ್ದಾರೆ. ಈ ಹೂವುಗಳಿಗೂ ಬೇಡಿಕೆ ಹೆಚ್ಚು. ಎಲ್ಲ ಕಾರ್ಯಕ್ರಮಗಳಿಗೆ ಬಳಸುವ ಈ ಹೂವುಗಳಿಗೆ ಹೆಚ್ಚು ಬೇಡಿಕೆ ಇರಲಿದೆ.

ADVERTISEMENT

ಇದೇ ಕಾರಣಕ್ಕಾಗಿ ತಾಲ್ಲೂಕಿನ ಅತಿಹೆಚ್ಚು 642 ಹೆಕ್ಟೇರ್ ಪ್ರದೇಶದಲ್ಲಿ ಬಟನ್ ರೋಸ್, ಡಚ್ ರೋಸ್ ಹೂವನ್ನು ಬೆಳೆಯಲಾಗಿದೆ. ಇನ್ನು 500 ಹೆಕ್ಟೇರ್ ಪ್ರದೇಶದಲ್ಲಿ ಚೆಂಡು ಮಲ್ಲಿಗೆ ಬೆಳೆಯಲಾಗಿದೆ. ಈ ಭಾಗದಲ್ಲಿನ ಹೂವುಗಳಿಗೆ ಬೆಂಗಳೂರು ನಗರವೇ ಮಾರುಕಟ್ಟೆಯಾಗಿದ್ದು, ರೈತರು ಹೂವನ್ನು ಬೆಂಗಳೂರಿಗೆ ತಂದು ಮಾರುತ್ತಾರೆ. ಕೆಲವೊಮ್ಮೆ ವ್ಯಾಪಾರಿಗಳೇ ಇಲ್ಲಿಗೆ ಬಂದು ಕೊಂಡೊಯ್ಯುತ್ತಾರೆ. 

ಗುಲಾಬಿ ಹೂವು ಒಂದು ರೀತಿಯ ಪ್ರೇಮ ಸಂದೇಶ ರವಾನಿಸುವ ಸಾಧನವಿದ್ದಂತೆ. ಹೀಗಾಗಿ ಈ ಹೂವಿಗೆ ಪ್ರೇಮಿಗಳ ದಿನಾಚರಣೆ ಬರುವ ಫೆಬ್ರುವರಿ ತಿಂಗಳಲ್ಲಿ ಭಾರಿ ಬೇಡಿಕೆ ಬರುತ್ತದೆ. ಅದರಲ್ಲೂ ತಾಜ್​ಮಹಲ್​ ತಳಿಯ ಕೆಂಪು ಗುಲಾಬಿಗೆ ಎಲ್ಲಿಲ್ಲದ ಬೇಡಿಕೆ. ಇದರಿಂದಾಗಿ ಒಂದು ಹೂವಿಗೆ ₹5–₹10ರವರೆಗೆ ಮಾರಾಟವಾಗುತ್ತದೆ.

ಪಾಲಿಹೌಸ್​ಗಳಲ್ಲಿ ಬೆಳೆದ ಗುಲಾಬಿ ಹೂವಿಗಂತೂ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಜೊತೆಗೆ ಈ ಹೂವು ಬೇರೆ ದೇಶಗಳಿಗೂ ರಫ್ತಾಗುತ್ತದೆ. ಗುಲಾಬಿ ಹೂವನ್ನು ನಂಬಿದ ರೈತರಿಗೆ ಹೂವು ಎಂದೂ ಕೈ ಬಿಟ್ಟಿಲ್ಲ. ಸಣ್ಣಪುಟ್ಟ ಸಮಸ್ಯೆಗಳು ಬಂದರೂ ಎಂದಿಗೂ ಹೂ ಬೆಳೆದ ರೈತರನ್ನು ಮುಳ್ಳಿನ ಮೇಲೆ ತಳ್ಳದ ಗುಲಾಬಿ ಇಂದಿಗೂ ರೈತರ ಪಾಲಿಗೆ ಒಳ್ಳೆಯ ಆದಾಯದ ಮೂಲವಾಗಿದೆ.

ಕೆಂಪು ಗುಲಾಬಿ
ಪುರ ಗ್ರಾಮದ ರೈತ ರಾಜಣ್ಣ ಬೆಳಿದಿರುವ ಕೆಂಪು ಗುಲಾಬಿ
ಕಳೆದ ಮೂರು ವರ್ಷದಿಂದ ಡಚ್ ರೋಸ್ ಬೆಳೆಯುತ್ತಿದ್ದೇನೆ. ಒಂದೂ ಕಾಲು ಎಕರೆ ಜಮೀನಿನಲ್ಲಿ ನೀರು ಗೊಬ್ಬರ ಸೇರಿ ನಿರ್ವಹಣೆಗಾಗಿ ಪ್ರತಿ ತಿಂಗಳಿಗೆ ₹15–₹20 ಸಾವಿರ ಖರ್ಚು ಬರುತ್ತದೆ. ಪ್ರತಿ 20 ಹೂವು ₹25ರಿಂದ ₹40ಕ್ಕೆ ಸಿಗುತ್ತಿದೆ. ಪ್ರತಿ ತಿಂಗಳು 4 ಸಾವಿರ ಕಟ್ಟು ಮಾರುತ್ತೇವೆ.
ಚಂದ್ರಪ್ಪ ಲಕ್ಕೂರಿನ ರೈತ
ಪ್ರಸ್ತುತ ಹೂವಿಗಿರುವ ಬೆಲೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡುತ್ತಿದೆ. ನೇರವಾಗಿ ಮಾರಾಟ ಮಾಡುವ ಅವಕಾಶ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ಜಾಣ್ಮೆಯೂ ಮೂಡಿದೆ. ಪ್ರಮಾಣ ಎಷ್ಟೇ ಇದ್ದರೂ ರೈತರು ಹೂವನ್ನು ಮಾರುಕಟ್ಟೆಯಲ್ಲೇ ಮಾರುವುದು ಹೆಚ್ಚಿದೆ. ಹೂವು ಬೆಳೆಯುವುದು ಇಷ್ಟದ ವಿಚಾರವಾಗಿದೆ.
ರಾಜಣ್ಣ ಪುರ ಗ್ರಾಮದ ರೈತ 
ಮಾಲೂರು ಬೆಂಗಳೂರಿಗೆ ಹತ್ತಿರವಿದೆ. ಹೂವಿನಿಂದ ಪ್ರತಿದಿನ ಆದಾಯ ಸಿಗುತ್ತದೆ. ತರಕಾರಿ ಬೆಳೆಗಳಿಗೆ ಹೋಲಿಸಿದರೆ ಹೂವಿನ ಬೆಲೆ ಹೆಚ್ಚು ಇರುತ್ತದೆ. ಸಾಗಣೆ ವೆಚ್ಚವೂ ಕಡಿಮೆ. ವರ್ಷದಿಂದ ವರ್ಷಕ್ಕೆ ಬಹಳ ರೈತರು ಹೂವಿನ ಬೆಳೆಯತ್ತ ಗಮನ ಹರಿಸಿದ್ದಾರೆ
ದಿವ್ಯಾ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.