ADVERTISEMENT

ಮಾಲೂರು | ದನದ ಕೊಟ್ಟಿಗೆಯಾದ ಸರ್ಕಾರಿ ಶಾಲೆ!

ಮಾಲೂರು ತಾಲ್ಲೂಕಿನ ಚೆನ್ನಿಗರಾಯಪುರ ಗ್ರಾಮದ ಶಾಲೆ ದುರಾವಸ್ಥೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 7:26 IST
Last Updated 22 ಅಕ್ಟೋಬರ್ 2024, 7:26 IST
ಮಾಲೂರು ತಾಲ್ಲೂಕಿನ ಚೆನ್ನಿಗರಾಯಪುರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ದನದ ಕೊಟ್ಟಿಗೆಯಂತಾಗಿರುವುದು
ಮಾಲೂರು ತಾಲ್ಲೂಕಿನ ಚೆನ್ನಿಗರಾಯಪುರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ದನದ ಕೊಟ್ಟಿಗೆಯಂತಾಗಿರುವುದು   

ಮಾಲೂರುರಸ್ತೆಯ ಬದಿಯಲ್ಲಿ ದುರ್ವಾಸನೆ ಬೀರುವ ಚರಂಡಿಗಳು, ಮಧ್ಯೆ ತಿಪ್ಪೆಗಳು, ಎಲ್ಲೆಡೆ ಬಿದ್ದಿರುವ ಕಸ ಮತ್ತು ಕಟ್ಟಿಹಾಕಲಾಗಿರುವ ದನಕರುಗಳು–ಈ ದೃಶ್ಯಾವಳಿ ಮಾಲೂರು ತಾಲ್ಲೂಕಿನ ಚೆನ್ನಿಗರಾಯಪುರ ಗ್ರಾಮದಲ್ಲಿರುವ ಸರ್ಕಾರಿ ಶಾಲಾ ಆವರಣದಲ್ಲಿ ಕಾಣಬಹುದು. ಹೌದು, ಮೂಲಸೌಕರ್ಯಗಳಿಂದ ವಂಚಿತಗೊಂಡ ಈ ಗಡಿ ಗ್ರಾಮದಲ್ಲಿ ಸರ್ಕಾರಿ ಶಾಲಾ ಕಟ್ಟಡ ಮತ್ತು ಆವರಣವು ದನಕರುಗಳ ಕೊಟ್ಟಿಗೆಯಾಗಿ ಬಳಕೆಯಾಗುತ್ತಿದೆ. ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಹೀಗಾಗಿ, ಗ್ರಾಮಸ್ಥರು ಈ ಕಟ್ಟಡವನ್ನು ದನಕರು ಕಟ್ಟಲು ಬಳಸುತ್ತಿದ್ದಾರೆ. ಇನ್ನೊಂದು ಕಟ್ಟಡದಲ್ಲಿ ಒಂದು ಕುಟುಂಬ ವಾಸಿಸುತ್ತಿದೆ. ಹೀಗಾಗಿ, ಗ್ರಾಮದಲ್ಲಿರುವ ಮಕ್ಕಳಿಗೆ ಕಲಿಕೆಯ ಅವಕಾಶವೇ ಇಲ್ಲ. ಇನ್ನು ಗ್ರಾಮದ ಮಕ್ಕಳು 3 ಕಿ.ಮೀ ದೂರದಲ್ಲಿರುವ ಚಿಕ್ಕತಗ್ಗಲಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಹೋಗಿ ಬರುತ್ತಿದ್ದಾರೆ. ಚಿಕ್ಕತಗ್ಗಲಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯು ಚೆನ್ನಿಗರಾಯಪುರದಿಂದ 3 ಕಿ.ಮೀ ದೂರ ಇರುವ ಕಾರಣ, ಗ್ರಾಮಸ್ಥರು ತಮ್ಮ ಮಕ್ಕಳನ್ನು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಶಾಲೆಗೆ ಬಿಟ್ಟು ಮತ್ತೆ ಕರೆತರಬೇಕಾಗಿದೆ. ಚಿಕ್ಕತಗ್ಗಲಿ–ಚೆನ್ನಿಗರಾಯಪುರ ಮಾರ್ಗದ ರಸ್ತೆಯು ಡಾಂಬರೀಕರಣ ಪೂರ್ತಿಯಾಗಿ ಕಿತ್ತುಹೋಗಿದ್ದು, ಉಬ್ಬು–ತಗ್ಗುಗಳೇ ತುಂಬಿವೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಮಳೆ ಬಂದರೆ ಶಾಲಾ ಮಕ್ಕಳು ಮತ್ತು ಪೋಷಕರ ಸ್ಥಿತಿ ಹೇಳತೀರದಾಗಿದೆ. ಹೀಗಾಗಿ, ‘ಗ್ರಾಮದಲ್ಲಿ ಸ್ಥಗಿತಗೊಂಡ ಪ್ರಾಥಮಿಕ ಶಾಲೆಯನ್ನು ಪುನರಾರಂಭಿಸಬೇಕು. ನಮ್ಮ ಮಕ್ಕಳ ಕಲಿಕೆಗೆ ಅನುಕೂಲ ಕಲ್ಪಿಸಬೇಕು’ ಎಂದು ಗ್ರಾಮಸ್ಥರ ಒತ್ತಾಯವಾಗಿದೆ. ಚೆನ್ನಿಗರಾಯಪುರ ಗ್ರಾಮದಲ್ಲಿ 40 ಕುಟುಂಬಗಳಿದ್ದು, 200 ಮತದಾರರನ್ನು ಒಳಗೊಂಡಿದೆ. ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಭಾಗವಾಗಿ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ ಆ ನಲ್ಲಿಗಳಲ್ಲಿ ಇದುವರೆಗೆ ನೀರು ಬಂದಿಲ್ಲ. ಗ್ರಾಮದಲ್ಲಿನ ರಸ್ತೆಗಳು ಮಳೆ ಬಂದರೆ ಕೆಸರುಗದ್ದೆಯಂತಾಗುತ್ತವೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ‘ಗ್ರಾಮದಲ್ಲಿ ಹೊಸದಾಗಿ ಚರಂಡಿ ನಿರ್ಮಿಸಲಾಗಿದೆ. ಗ್ರಾಮದಲ್ಲಿರುವ ತಿಪ್ಪೆ ತೆರವಿಗೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಗ್ರಾಮಸ್ಥರ ಸಮಸ್ಯೆಗಳನ್ನು ಪಂಚಾಯಿತಿ ಸಭೆಗಳಲ್ಲಿ ಚರ್ಚೆಗೆ ಒಳಪಡಿಸಬೇಕು. ಆದರೆ ಪಂಚಾಯತಿಯಲ್ಲಿ ಸರ್ವ ಸದಸ್ಯರ ಸಭೆ ನಡೆದು 4 ತಿಂಗಳು ಕಳೆದಿದೆ. ಪಿಡಿಒಗಳು ಸಭೆಗಳನ್ನೇ ಕರೆಯುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಶ್ರೀನಿವಾಸ ರೆಡ್ಡಿ ಆರೋಪಿಸಿದರು. ಮಡಿವಾಳ ಪಂಚಾಯಿತಿ ಪಿಡಿಒ ಕಾಶಿ ಅವರನ್ನು ಸಂಪರ್ಕಿಸಲಾಯಿತು. ಆದರೆ, ಅವರು ಕರೆಗೆ ಉತ್ತರಿಸಲಿಲ್ಲ. ಜನ ಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ- ಚೆನ್ನಿಗರಾಯಪುರ ಗ್ರಾಮದಲ್ಲಿ ಸುಮಾರು 40 ಕುಟುಂಬಗಳು ವಾಸ ಮಾಡುತ್ತಿದ್ದು, 200 ಮತದಾರರನ್ನು ಒಳಗೊಂಡಿದೆ. ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕೇಂದ್ರ ಸರ್ಕಾರದ ಜೆಜೆಎಂ ಯೋಜನೆ ಅಡಿಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಸರಬರಾಜು ಮಾಡಲು ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ ಇನ್ನು ನೀರು ಸರಬರಾಜು ಆಗುತ್ತಿಲ್ಲ. ಪಂಚಾಯತಿ ವತಿಯಿಂದ ಕೊಳವೆ ಬಾವಿ ಕೊರೆಯಿಸಿ ಪೈಪ್ ಲೈನ್ ಮೂಲಕ ಎರಡು-ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಕರೆಂಟ್ ಸಮಸ್ಯೆಯಿಂದ ವಾರಗಳು ಕಳೆದರೂ ನೀರು ಬರುತ್ತಿಲ್ಲ. ಇದರಿಂದ ನೀರಿನ ಸಮಸ್ಯೆ ಏಳುತ್ತಿದೆ. ಇನ್ನು ಗ್ರಾಮದಲ್ಲಿ ರಸ್ತೆಗಳೇ ಇಲ್ಲ. ಮಳೆ ಬಂದರೆ ಸಾಕು, ರಸ್ತೆಗಳು ಕೆಸರು ಗದ್ದೆಗಳಾಗುತ್ತವೆ. ಸ್ವಚ್ಛತೆ ಕೊರತೆ: ಗ್ರಾಮದಲ್ಲಿ ಚರಂಡಿಗಳೇ ಇಲ್ಲ, ಇರುವ ಏಕೈಕ ಚರಂಡಿ ಸ್ವಚ್ಛತೆಯಿಲ್ಲದೆ ಕೊಳಚೆ ನೀರು ನಿಂತು ದುರ್ವಾಸನೆಯಿಂದ ಗ್ರಾಮಸ್ಥರು ಮುಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವು ಮನೆಗಳ ಮುಂದೆ ಚರಂಡಿಯಲ್ಲಿ ಕಾಲೋನಿಯಿಂದ ಬರುವ ಕೊಳಚೆ ನೀರು ಹರಿಯಬಾರದು ಎಂದು ಹೇಳಿ, ಚರಂಡಿಗೆ ಅಡ್ಡ ಹಾಕುವವರಿಂದ ಗ್ರಾಮಸ್ಥರು ತೊಂದರೆ ಪಡುತ್ತಿದ್ದಾರೆ. ಚೆನ್ನಿಗರಾಯಪುರ ಗ್ರಾಮದ ಮಕ್ಕಳಿಗೆ ಕಲಿಕೆಗೆ ತೊಂದರೆ: ಗ್ರಾಮದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲವಾಗಿದೆ ಎಂದು ಹೇಳಿ ದನದ ಕೊಟ್ಟಿಗೆ ಮಾಡಿಕೊಳ್ಳಲಾಗಿದೆ. ಇನ್ನೊಂದು ಕಟ್ಟಡದಲ್ಲಿ ಒಂದು ಕುಟುಂಬ ವಾಸ ಮಾಡುತ್ತಿದೆ. ಗ್ರಾಮದ ಮಕ್ಕಳಿಗೆ ಕಲಿಕೆಯ ಅವಕಾಶ ಇಲ್ಲ. ಗ್ರಾಮದಲ್ಲಿ ಉಳ್ಳವರು ತಮ್ಮ ಮಕ್ಕಳನ್ನು ಮಾಲೂರು-ಹೊಸಕೋಟೆ ರಸ್ತೆಯ ಬಳಿ ಇರುವ ಕಾನ್ವೆಂಟ್ ಶಾಲೆಗೆ ದಾಖಲಿಸಿದ್ದಾರೆ. ಬಡ ಕುಟುಂಬಗಳ ಮಕ್ಕಳಲ್ಲಿ ಸುಮಾರು 8 ರಿಂದ 10 ಮಕ್ಕಳು ನೆರೆಯ ಹೊಸಕೋಟೆ ತಾಲೂಕಿನ ಚಿಕ್ಕತಗ್ಗಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ದಾಖಲಾಗಿದ್ದಾರೆ. ಪ್ರತಿದಿನ ಮೂರು ಕಿಮೀ ದೂರದಲ್ಲಿರುವ ಚಿಕ್ಕತಗ್ಗಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಪೋಷಕರು ದ್ವಿ ಚಕ್ರ ವಾಹನ ಅಥವಾ ಸೈಕಲ್‌ನಲ್ಲಿ ಕರೆದುಕೊಂಡು ಹೋಗಬೇಕು. ಡಾಂಬರ್ ಕಂಡುಬರುವ ರಸ್ತೆಗಳಲ್ಲಿ ಅಳ್ಳ ಕೊಳ್ಳಗಳು ಬಿದ್ದಿರುವುದರಿಂದ, ಮಳೆ ಬಂದರೆ ರಸ್ತೆಗಳು ಕೆಸರು ಗದ್ದೆಗಳಾಗುತ್ತವೆ. ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಆರಂಭ ಮಾಡಬೇಕು. ನಮ್ಮ ಮಕ್ಕಳ ಕಲಿಕೆ ಅನುಕೂಲ ಕಲ್ಪಿಸಬೇಕು ಎಂಬ ಒತ್ತಾಯ ಇಲ್ಲಿನ ಬಡ ಕುಟುಂಬಗಳದ್ದು.

ಶಾಲೆ ಆರಂಭವಾದರೆ ಅನುಕೂಲ ಪ್ರಸ್ತುತ ಗ್ರಾಮದಲ್ಲಿರುವ ಶಾಲೆ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಪ್ರತಿನಿತ್ಯ ಹೊಸಕೋಟೆ ತಾಲ್ಲೂಕಿನ ಚಿಕ್ಕತಗ್ಗಲಿ ಗ್ರಾಮದ ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದೇವೆ. ಮೂರು ಕಿ.ಮೀ ದೂರ ಇರುವ ಕಾರಣ ಪ್ರತಿದಿನವೂ ಮಕ್ಕಳನ್ನು ಶಾಲೆಗೆ ಬಿಡಲು ಮತ್ತು ಮನೆಗೆ ಕರೆದುಕೊಂಡು ಬರಲು ನಾವೇ ಹೋಗಬೇಕಿದೆ. ಗಂಡಸರು ಕೆಲಸಕ್ಕೆ ಹೋಗುವುದರಿಂದ ಪ್ರತಿನಿತ್ಯವು ನಾವೇ ನಡೆದುಹೋಗಿ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದೇವೆ. ಇದರಿಂದ ತುಂಬಾ ತೊಂದರೆಯಾಗಿದೆ. ಹೀಗಾಗಿ ಗ್ರಾಮದಲ್ಲಿ ಶೀಘ್ರವೇ ಶಾಲೆ ಆರಂಭವಾಗಬೇಕು.  ಶ್ರಾವಣಿ ಗ್ರಾಮದ ನಿವಾಸಿ

ಸ್ವಚ್ಛತೆ ಮರೀಚಿಕೆ  ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ. ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು ಚರಂಡಿಗಳು ಸೊಳ್ಳೆಗಳ ಆವಾಸ ಸ್ಥಾನವಾಗಿವೆ. ಇನ್ನು ಕೆಲವು ಕಡೆ ಚರಂಡಿಗಳೇ ಇಲ್ಲದೆ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿವೆ. ಇದರಿಂದ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ.  ನಾರಾಯಣರೆಡ್ಡಿ ಗ್ರಾಮಸ್ಥ ಚರಂಡಿಗೆ ಕೆಲವರ ಅಡ್ಡಿ ಗ್ರಾಮದಲ್ಲಿ ಚರಂಡಿಗಳ ಸ್ವಚ್ಛತೆ ಇಲ್ಲದೆ ತುಂಬ ತೊಂದರೆಯಾಗಿದೆ. ಪರಿಶಿಷ್ಟ ಜಾತಿ ಸಮುದಾಯ ವಾಸಿಸುವ ಕಾಲೊನಿ ಕಡೆಯಿಂದ ಬರುವ ನೀರು ಮನೆಯ ಮುಂದೆ ಹರಿಯಬಾರದು ಎಂಬ ಕಾರಣಕ್ಕೆ ಇರುವ ಚರಂಡಿಗಳನ್ನು ಇತರ ಸಮುದಾಯದವರು ಅಡ್ಡಗಟ್ಟುತ್ತಿದ್ದಾರೆ. ಈ ಕುರಿತು ಹಲವು ಬಾರಿ ಪಂಚಾಯಿತಿ ಕಚೇರಿಗೆ ದೂರು ನೀಡಲಾಗಿದೆ. ಆದರೆ ಏನೂ ಪ್ರಯೋಜನವಾಗಿಲ್ಲ.  ರತ್ನಮ್ಮ ಸ್ಥಳೀಯ ನಿವಾಸಿ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.