ADVERTISEMENT

ಇಪ್ಪತೈದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಗುರುಭವನ ಕಾಮಗಾರಿಗೆ ಚುರುಕು

ಕಾಮಗಾರಿ ಮತ್ತೆ ಆರಂಭ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 7:27 IST
Last Updated 20 ಅಕ್ಟೋಬರ್ 2024, 7:27 IST
ಮಾಲೂರಿನ ಮಾರುತಿ ಬಡಾವಣೆಯಲ್ಲಿ ಭೋವಿ ಸಂಘದ ವಸತಿ ನಿಲಯದ ಪಕ್ಕದಲ್ಲಿ ಸುಮಾರು 20 ಗುಂಟೆ ವಿಸ್ತೀರ್ಣದಲ್ಲಿ ಆರಂಭವಾಗಿರುವ ಗುರುಭವನ ಕಟ್ಟಡ ಕಾಮಗಾರಿ
ಮಾಲೂರಿನ ಮಾರುತಿ ಬಡಾವಣೆಯಲ್ಲಿ ಭೋವಿ ಸಂಘದ ವಸತಿ ನಿಲಯದ ಪಕ್ಕದಲ್ಲಿ ಸುಮಾರು 20 ಗುಂಟೆ ವಿಸ್ತೀರ್ಣದಲ್ಲಿ ಆರಂಭವಾಗಿರುವ ಗುರುಭವನ ಕಟ್ಟಡ ಕಾಮಗಾರಿ   

ಮಾಲೂರು: ಪಟ್ಟಣದಲ್ಲಿ ಸುಮಾರು ಇಪ್ಪತೈದು ವರ್ಷಗಳ ಸುದೀರ್ಘಾವಧಿಯಿಂದ ನನೆಗುದಿಗೆ ಬಿದ್ದಿದ್ದ ಗುರುಭವನ ಕಟ್ಟಡ ಕಾಮಗಾರಿಯು ಕೊನೆಗೂ ಆರಂಭವಾಗಿದೆ. ಅಲ್ಲದೆ, ಕಟ್ಟಡ ನಿರ್ಮಾಣ ಕಾಮಗಾರಿಯು ಮೊದಲ ಮಹಡಿಯ ಹಂತಕ್ಕೆ ತಲುಪಿರುವುದು ಶಿಕ್ಷರಲ್ಲಿ ಸಂತಸ ಮೂಡಿಸಿದೆ.

ಪಟ್ಟಣದ ಮಾರುತಿ ಬಡಾವಣೆಯಲ್ಲಿರುವ ಭೋವಿ ಸಂಘದ ವಸತಿ ನಿಲಯದ ಪಕ್ಕದಲ್ಲಿ ಸುಮಾರು 45 ವರ್ಷಗಳ ಹಿಂದೆ ಬಿಇಒ ವಸತಿ ನಿಲಯ ನಿರ್ಮಾಣಕ್ಕಾಗಿ 20 ಗುಂಟೆ ಜಾಗವನ್ನು ಸರ್ಕಾರ ಮಂಜೂರು ಮಾಡಿತ್ತು. ನಂತರ ವಸತಿ ನಿಲಯದ ಸ್ಥಳವನ್ನು ಅಂದಿನ ಬಿಇಒ ಆಗಿದ್ದ ಕುಬೇರಪ್ಪ ಅವರ ನೇತೃತ್ವದಲ್ಲಿ ಆಗ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದ ವೇಳಪ್ಪ ಅವರು ವಸತಿ ನಿಲಯದ ಜಾಗವನ್ನು ಶಿಕ್ಷಕರ ಅನುಕೂಲಕ್ಕಾಗಿ ಗುರುಭವನ ನಿರ್ಮಾಣಕ್ಕೆ ವರ್ಗಾಯಿಸಿದರು. 

ಗುರುಭವನ ನಿರ್ಮಾಣಕ್ಕೆ ನಿವೇಶನ ಕಲ್ಪಿಸಿ 25 ವರ್ಷ ಕಳೆದರೂ ಇಲ್ಲಿಯವರೆಗೆ ಗುರುಭವನ ನಿರ್ಮಾಣ ಮಾಡಲು ಅಧಿಕಾರಿಗಳು ಅಥವಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಮುಂದಾಗಲೇ ಇಲ್ಲ. ಇದರಿಂದ ಶಿಕ್ಷಕರು ಅಸಮಾಧಾನಗೊಂಡಿದ್ದರು. 

ADVERTISEMENT

2010ರಲ್ಲಿ ಅಂದಿನ ಶಾಸಕ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ನೇತೃತ್ವದಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ  ಮಾಲೂರು ಪಟ್ಟಣಕ್ಕೆ ಆಗಮಿಸಿದ್ದಾಗ ಗುರುಭವನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದರೆ ಇಲ್ಲಿವರೆಗೆ ಗುರುಭವನ ಕಟ್ಟಡ ಕಾಮಗಾರಿ ಮಾತ್ರ ಆರಂಭವಾಗಿರಲಿಲ್ಲ. 2017ರಲ್ಲಿ ಅಂದಿನ ಶಾಸಕ ಕೆ.ಎಸ್. ಮಂಜುನಾಥಗೌಡ ಚುನಾವಣೆ ವರ್ಷದಲ್ಲಿ ಗುರುಭವನ ನಿರ್ಮಾಣಕ್ಕೆ ಮುಂದಾಗಿ ಗುರುಭವನ ಕಟ್ಟಡಕ್ಕೆ ತಳಪಾಯ ಮತ್ತು ಪಿಲ್ಲರ್‌ಗಳನ್ನು ನಿಲ್ಲಿಸಿದರು. ಆದರೆ, ಅವರು ಚುನಾವಣೆ ಸೋಲಿನೊಂದಿಗೆ ಗುರುಭವನ ನಿರ್ಮಾಣ ಕಾಮಗಾರಿಯು ಮತ್ತೆ ನನೆಗುದಿಗೆ ಬಿದ್ದಿತ್ತು.

ಗುರುಭವನ ನಿರ್ಮಾಣ ಕಾಮಗಾರಿ ವಿಳಂಬದ ಕುರಿತು ‘ಪ್ರಜಾವಾಣಿ’ಯು ಆಗ್ಗಾಗ್ಗೆ ವರದಿ ಬಿತ್ತರಿಸುವ ಮೂಲಕ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಿತ್ತು. 

ಇದರ ಪರಿಣಾಮ ಶಾಸಕ ಕೆ.ವೈ. ನಂಜೇಗೌಡ ಅವರು 2ನೇ ಮಹಡಿಯ ಗುರುಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನಗಳ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ. ಕಟ್ಟಡ ಕಾಮಗಾರಿ ಬರದಿಂದ ಸಾಗಿದೆ. ಗುರುಭವನ ಕಾಮಗಾರಿಯನ್ನು ಶೀಘ್ರವೇ ಮುಗಿಸಲು ಶಾಸಕರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಇದರಲ್ಲಿ ತಹಶೀಲ್ದಾರ್ ರಮೇಶ್, ಬಿಇಒ ಚಂದ್ರಕಲಾ, ಇಒ ಕೃಷ್ಣಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನೇಗೌಡ, ಶಿಕ್ಷಕರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸದಸ್ಯರಾಗಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿದ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮತ್ತು ಗುರುಭವನ ನಿರ್ಮಾಣ ಸಮಿತಿ ಮೇಲ್ವಿಚಾರಕ ಮುನೇಗೌಡ, ‘ಗುರುಭವನ ನಿರ್ಮಾಣಕ್ಕೆ ಶಾಸಕ ನಂಜೇಗೌಡ ₹50 ಲಕ್ಷ ಅಲ್ಲದೆ, ಒಂದು ವರ್ಷದ ಶಾಸಕರ ವೇತನ ನೀಡುತ್ತಿದ್ದಾರೆ. ತಾಲ್ಲೂಕು ಪಂಚಾಯಿತಿ ವತಿಯಿಂದ ₹25 ಲಕ್ಷ, ಪುರಸಭೆಯು ₹10 ಲಕ್ಷ ನೀಡಿದೆ’ ಎಂದರು. 

ಗುರುಭವನ ಕಟ್ಟಡ ನಿರ್ಮಾಣ ವಿಳಂಬದ ಬಗ್ಗೆ ಪ್ರಜಾವಾಣಿ ಪತ್ರಿಕೆ ಹಲವಾರು ಭಾರಿ ಸುದ್ದಿ ಮಾಡಿತ್ತು. ಇದು ಪ್ರಜಾವಾಣಿ ಫಲಶೃತಿ

6 ತಿಂಗಳಲ್ಲಿ ಕಾಮಗಾರಿ ಪೂರ್ಣ

ಶಿಕ್ಷಕರು ತಾಲ್ಲೂಕು ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನ ನೀಡಲು ಮುಂದಾಗಿದ್ದಾರೆ. ದಾನಿಗಳು ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಕಂಬಿ ಸಿಮೆಂಟ್ ನೀಡುತ್ತಿದ್ದಾರೆ. ಮೊದಲ ಮಹಡಿ ಕಟ್ಟಡ ಕಾಮಗಾರಿ ಮುಗಿದ ನಂತರ ಸರ್ಕಾರದಿಂದ ₹25 ಲಕ್ಷ ಬಿಡುಗಡೆಯಾಗಲಿದೆ. ಜಲ್ಲಿ ಕ್ರಷರ್ ಮಾಲೀಕರಿಂದ ಕಟ್ಟಡಕ್ಕೆ ಅವಶ್ಯಕತೆ ಇರುವಷ್ಟು ಜಲ್ಲಿ ಪೌಡರ್ ಮತ್ತು ಜಲ್ಲಿ ನೀಡುತ್ತಿದ್ದಾರೆ. ಆರು ತಿಂಗಳಲ್ಲಿ ಗುರುಭವನ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಗುರುಭವನ ನಿರ್ಮಾಣ ಸಮಿತಿ ಮೆಲ್ವಿಚಾರಕ ಮುನೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.