ADVERTISEMENT

ಮಾಲೂರು: ಪುರಸಭೆ 25ನೇ ವಾರ್ಡ್‌ನಲ್ಲಿ ಮೂಲ ಸೌಕರ್ಯ ಕೊರತೆ

ವಿ.ರಾಜಗೋಪಾಲ್
Published 17 ಜೂನ್ 2024, 7:52 IST
Last Updated 17 ಜೂನ್ 2024, 7:52 IST
ಮಾಲೂರು ಪಟ್ಟಣದ 25 ನೇ ವಾರ್ಡಿನ ಸಭಾಷ್ ನಗರದಲ್ಲಿ ಚರಂಡಿ ಸ್ವಚ್ಛತೆ ಇಲ್ಲದೆ ಕೊಳಚೆ ನೀರಿನ ದುರ್ವಾಸನೆ ಬೀರುತ್ತಿರುವುದು
ಮಾಲೂರು ಪಟ್ಟಣದ 25 ನೇ ವಾರ್ಡಿನ ಸಭಾಷ್ ನಗರದಲ್ಲಿ ಚರಂಡಿ ಸ್ವಚ್ಛತೆ ಇಲ್ಲದೆ ಕೊಳಚೆ ನೀರಿನ ದುರ್ವಾಸನೆ ಬೀರುತ್ತಿರುವುದು   

ಮಾಲೂರು: ಕುಡಿಯುವ ನೀರು ಸೇರಿದಂತೆ ಸ್ವಚ್ಛತೆ ಇಲ್ಲದೆ ಸೊಳ್ಳೆಗಳ ಕಾಟದಿಂದ ನಲುಗಿರುವ ಪುರಸಭೆ 25ನೇ ವಾರ್ಡ್‌ನ ಜನರು ಹೈರಾಣಾಗಿದ್ದಾರೆ.

ಈ ವಾರ್ಡ್‌ನಲ್ಲಿ ಸುಮಾರು 1900 ಮತದಾರರು ಇದ್ದು 800 ಕುಟುಂಬಗಳು ವಾಸ ಮಾಡುತ್ತಿವೆ. ವಾರ್ಡ್‌ನಲ್ಲಿ ಎಸ್‌.ಸಿ ಸಮುದಾಯದಕ್ಕೆ ಸೇರಿದ ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಆದರೆ, ಮೂಲ ಸೌಲಭ್ಯ ಕೊರತೆಯಿಂದ ಹೈರಾಣರಾಗಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ: 25ನೇ ವಾರ್ಡ್‌ನ ಜನರಿಗೆ ಪುರಸಭೆಯು ಕೊಳವೆಬಾವಿ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿದೆ. 10ದಿನಕ್ಕೊಮ್ಮೆ ಅರ್ಧ ಗಂಟೆ ಮಾತ್ರ ನೀರು ಸರಬರಾಜು ಮಾಡುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ.

ADVERTISEMENT

ನೀರಿನ ಬವಣೆ ನೀಗಿಸಿಕೊಳ್ಳಲು ಟ್ಯಾಂಕರ್‌ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಒಂದು ಟ್ಯಾಂಕರ್‌ ನೀರಿಗೆ ₹500ರಂತೆ ಖರೀದಿಸಬೇಕಾಗಿದೆ. ನೀರು ಸರಬರಾಜು ಮಾಡುವ ಪೈಪ್ ಹಾಳಾದರೆ ಪ್ರತಿ ಮನೆಯಿಂದ ಹಣ ಸಂಗ್ರಹಿಸಿ ದುರಸ್ತಿ ಮಾಡಬೇಕಾದ ಪರಿಸ್ಥಿತಿ ಇದೆ. ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಮಾಡಲು ವಿಫಲವಾಗಿರುವ ಪುರಸಭೆ ನೀರಿನ ತೆರಿಗೆ ಮಾತ್ರ ಪ್ರತಿ ತಿಂಗಳು ಕ್ರಮಬದ್ಧವಾಗಿ ಸಂಗ್ರಹಿಸುತ್ತಿದೆ. ನೀರಿನ ತೆರಿಗೆ ಕಟ್ಟುವುದು ವಿಳಂಬವಾದರೆ ಬಡ್ಡಿ ಹಾಕಿ ವಸೂಲಿ ಮಾಡಲಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.

ಸ್ವಚ್ಛತೆ: ಈ ವಾರ್ಡ್‌ನಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಇರುವ ಕೆಲವು ಚರಂಡಿಗಳಲ್ಲಿ ಸ್ವಚ್ಛತೆ ಇಲ್ಲದೆ ಸೊಳ್ಳೆ ಕಾಟ ಹೆಚ್ಚಾಗಿದ್ದು ದುರ್ವಾಸನೆಯಿಂದ ಕೂಡಿದೆ. ಮನೆಗಳ ಬಾಗಿಲು ಮುಚ್ಚಿಕೊಂಡು ಜೀವನ ದೂಡುವಂತಾಗಿದೆ. ಈ ಭಾಗದಲ್ಲಿ ಚರಂಡಿ ಸ್ವಚ್ಛ ಮಾಡಿ ವರ್ಷಗಳೇ ಕಳೆದಿದೆ. ಮನೆಗಳ ಮುಂದೆ ಹಳ್ಳ ನಿರ್ಮಿಸಿಕೊಂಡು ಕೊಳಚೆ ನೀರು ತುಂಬಿಸಿ ನಂತರ ಅದರಲ್ಲೇ ಇಂಗಿಸುವ ಕೆಲಸ ಮಾಡಲಾಗುತ್ತಿದೆ.

ಪುರಸಭೆ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬಂದಿದ್ದ ಈ ವಾರ್ಡ್‌ನ ಪುರಸಭೆ ಸದಸ್ಯರು ಇಲ್ಲಿವರೆಗೂ ಈ ಕಡೆ ಮುಖ ಮಾಡಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ರಸ್ತೆ ಬದಿ ವಿದ್ಯುತ್ ದೀಪ ಕೊರತೆ: ಈ ವಾರ್ಡ್‌ನ ಮಹಿಳೆಯರು ವೈಟ್ ಫೀಲ್ಡ್ ಸೇರಿದಂತೆ ಬೆಂಗಳೂರು ನಗರದಲ್ಲಿ ಮನೆ ಕೆಲಸ ಮಾಡಲು ಪತ್ರಿದಿನ ರೈಲು ಮೂಲಕ ಸುಮಾರು 100 ರಿಂದ 150 ಮಂದಿ ಮಹಿಳೆಯರು ಹೋಗುತ್ತಾರೆ. ರೈಲು ನಿಲ್ದಾಣ ತಲುಪುವ ರಸ್ತೆಯಲ್ಲಿ ನಾಯಿಗಳ ಕಾಟ ವಿಪರೀತ ಇದೆ.

ಪಟ್ಟಣದ ರೈಲ್ವೆ ಸ್ಟೇಷನ್ ಬಳಿ ಇರುವ ಪುರಸಭೆ 25,26 ಮತ್ತು 27 ವಾರ್ಡ್‌ಗಳು ಕೈಗಾರಿಕಾ ಪ್ರಾಂಗಣ ವ್ಯಾಪ್ತಿಯಲ್ಲಿ ಇರುವುದರಿಂದ ಈ ಮೂರು ವಾರ್ಡ್‌ಗಳಲ್ಲಿ ಸ್ಥಳೀಯರ ಜತೆ ವಿವಿಧ ರಾಜ್ಯಗಳಿಂದ ಕಾರ್ಮಿಕರು ಬಂದು ನಲೆಸಿದ್ದಾರೆ. ಜನಸಂಖ್ಯೆ ಕೂಡ ಹೆಚ್ಚಾಗಿದೆ. ಇಲ್ಲಿನ ಪುರಸಭೆ ಈ ಮೂರು ವಾರ್ಡ್‌ಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಈ ಭಾಗದ ಜನರಿಗೆ ಮೂಲ ಸೌಕರ್ಯ ಕಲ್ಪಿಸಬೇಕೆಂದು ಇಲ್ಲಿನ ನಾಗರಿಕರು ಒತ್ತಾಯಿಸಿದ್ದಾರೆ.

ಮನೆ ಮುಂದಿನ ಹಳ್ಳದಲ್ಲಿ ನೀರು ಹಿಂಗಿಸುತ್ತಿರುವುದು
ಸಸ
ಒಂದರೆಡು ವರ್ಷಗಳಿಂದ ಚರಂಡಿ ಸ್ವಚ್ಛತೆ ಮಾಡಿಲ್ಲ. ಸೊಳ್ಳೆ ಕಾಟ ಹೆಚ್ಚಾಗಿದೆ. ವಾರ್ಡ್‌ ಸಮಸ್ಯೆಗಳ ಬಗ್ಗೆ ಕೇಳುವವರು ಇಲ್ಲ
ಸರೋಜಮ್ಮ ಸುಭಾಷ್ ನಗರ ನಿವಾಸಿ
ಸುಭಾಷ್ ನಗರದಿಂದ ಸ್ಟೇಷನ್‌ ಒಂದು ಕಿ.ಮೀ ನಡೆದು ಹೋಗಬೇಕು. ರಸ್ತೆಬದಿ ಅಳವಡಿಸಿರುವ ದೀಪಗಳು ಬೆಳಗುತ್ತಿಲ್ಲ. ನಾಯಿ ಮತ್ತು ಕಳ್ಳರ ಕಾಟ ಹೆಚ್ಚಾಗಿದೆ
ಸುಜಾತ ಶುಭಾಷ್ ನಗರದ ನಿವಾಸಿ
12 ದಿನಕ್ಕೊಮ್ಮೆ ಪುರಸಭೆ ವತಿಯಿಂದ ನೀರು ಸರಬರಾಜು ಮಾಡಲಾಗುತ್ತದೆ. ಪ್ರತಿ ತಿಂಗಳು ನೀರಿನ ತೆರಿಗೆ ಪಾವತಿಸಬೇಕಿದೆ. ಆದರೆ ಸಮರ್ಪಕವಾಗಿ ಸರಬರಾಜು ಮಾಡುತ್ತಿಲ್ಲ
ಜಯಮ್ಮ ಶುಭಾಷ್ ನಗರದ ನಿವಾಸಿ
ರಸ್ತೆಗಳಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಮನೆಗೆಳಿಂದ ಹೊರಗೆ ಬಂದರೆ ಮುಗು ಮುಚ್ಚಿಕೊಂಡು ಸಂಚಾರ ಮಾಡಬೇಕಾಗಿದೆ
ಕೃಷ್ಣಪ್ಪ ಸುಭಾಷ್ ನಗರದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.