ADVERTISEMENT

ಮಾವು ಕಟಾವು–ಮಾಗಿಸುವಿಕೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 16 ಮೇ 2021, 16:44 IST
Last Updated 16 ಮೇ 2021, 16:44 IST

ಕೋಲಾರ: ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ‘ಮಾವಿನ ಬೆಳೆಯ ಕಟಾವು ಮತ್ತು ಮಾಗಿಸುವಿಕೆ’ ಕುರಿತು ಇಲ್ಲಿ ಶನಿವಾರ ಆನ್‌ಲೈನ್‌ ಮೂಲಕ ರೈತರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

‘ಮಾವು ಕಟಾವಿನ ಹಂತ, ತೊಟ್ಟು ಹಾಗೂ ಕಾಯಿಯ ಬಣ್ಣ ನೋಡಿ ಕೊಯ್ಲು ಮಾಡಬೇಕು’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಎಚ್.ಸಿ.ಕೃಷ್ಣ ತಿಳಿಸಿದರು.

‘ಕಟಾವು ಮಾಡುವಾಗ 8ರಿಂದ -10 ಸೆಂ.ಮೀ ಉದ್ದದ ತೊಟ್ಟು ಬಿಟ್ಟು ಕೊಯ್ಲು ಮಾಡಬೇಕು. ಬಳಿಕ ಕಾಯಿಗಳನ್ನು ನೆರಳು ಇರುವ ಜಾಗದಲ್ಲಿ ಸುರಿದು 0.6ರಿಂದ 1 ಸೆಂ.ಮೀ ಉದ್ದಕ್ಕೆ ತೊಟ್ಟು ಕತ್ತರಿಸಬೇಕು. ನಂತರ ಕಾಯಿಯನ್ನು 30ರಿಂದ -45 ನಿಮಿಷದವರೆಗೆ ಕೆಳ ಮುಖವಾಗಿಟ್ಟು ಸೊನೆ ಇಳಿಯಲು ಬಿಡಬೇಕು’ ಎಂದು ಮಾಹಿತಿ ನೀಡಿದರು.

ADVERTISEMENT

‘ಪ್ರತಿ ಲೀಟರ್ ನೀರಿಗೆ 2-4 ಮಿ.ಲೀ ಸೋಡಿಯಂ ಹೈಪೊಕ್ಲೋರೈಟ್ ಬೆರೆಸಿ ಸೊನೆ ಇಳಿದ ಕಾಯಿಗಳನ್ನು ತೊಳೆದು ನೆರಳಿನಲ್ಲಿ ಆರಿಸಬೇಕು. ನೆರಳಿನಲ್ಲಿ ಆರಿದ ಮಾವಿನ ಕಾಯಿಗಳನ್ನು ಕ್ರೇಟ್‌ಗಳಲ್ಲಿ ತುಂಬಬೇಕು. ಈ ಕ್ರೇಟ್‌ಗಳನ್ನು ಗಾಳಿಯಾಡದ ಕೊಠಡಿಯಲ್ಲಿಟ್ಟು ಎಥಲಿನ್‌ ದ್ರಾವಣ ಸಿಂಪಡಿಸಿ ಕೊಠಡಿ ಬಾಗಿಲು ಮುಚ್ಚಬೇಕು’ ಎಂದು ವಿವರಿಸಿದರು.

ರಾಸಾಯನಿಕ ಬಳಸಬೇಡಿ: ‘24 ತಾಸಿನ ನಂತರ ಕೊಠಡಿಯ ಬಾಗಿಲು ತೆಗೆದು ಹಣ್ಣುಗಳನ್ನು ಗಾಳಿಯಾಡುವ ಜಾಗದಲ್ಲಿ ಇಟ್ಟರೆ 4ರಿಂದ 5 ದಿನದಲ್ಲಿ ಹಣ್ಣುಗಳು ಸವಿಯಲು ಸಿದ್ಧವಾಗುತ್ತವೆ. ಹಣ್ಣುಗಳನ್ನು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್‌ ಸೇರಿದಂತೆ ಯಾವುದೇ ರಾಸಾಯನಿಕ ಬಳಸಬಾರದು’ ಎಂದು ಕಿವಿಮಾತು ಹೇಳಿದರು.

‘ಹಣ್ಣು ಮಾಗಿಸುವಿಕೆ ಸಂಬಂಧ ಹೆಚ್ಚಿನ ಮಾಹಿತಿಗೆ ರೈತರು 9900202969ಕ್ಕೆ ಮತ್ತು ಮಾರುಕಟ್ಟೆ ವಿಷಯಕ್ಕೆ ಸಂಬಂಧಿಸಿದಂತೆ 9448999215 ಮೊಬೈಲ್‌ ಸಂಖ್ಯೆಗೆ ಕರೆ ಮಾಡಬಹುದು’ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ, ಕಾರ್ಯಾಗಾರದ ಸಂಯೋಜಕಿ ಜ್ಯೋತಿ, ಮಾವು ಬೆಳೆಗಾರರು, ತೋಟಗಾರಿಕೆ ಇಲಾಖೆ ವಿಸ್ತರಣಾಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭಾಗವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.