ADVERTISEMENT

ಶ್ರೀನಿವಾಸಪುರ | ಆನ್‌ಲೈನ್‌ನಲ್ಲಿ ₹1.60 ಕೋಟಿ ಮೌಲ್ಯದ ಮಾವು ಮಾರಾಟ

ಬೆಂಗಳೂರಿನಲ್ಲಿ 100 ಟನ್‌ಗಿಂತಲೂ ಹೆಚ್ಚು ಮಾವು ಮಾರಾಟ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 5:24 IST
Last Updated 7 ಜುಲೈ 2020, 5:24 IST
ಎಚ್‌.ಟಿ.ಬಾಲಕೃಷ್ಣ
ಎಚ್‌.ಟಿ.ಬಾಲಕೃಷ್ಣ   

ಶ್ರೀನಿವಾಸಪುರ: ಈ ಬಾರಿ ಮಾವು ಬೆಳೆಗಾರರು ಆನ್‌ಲೈನ್‌ ವ್ಯಾಪಾರದ ಮೂಲಕ ₹1.60 ಕೋಟಿ ಮೌಲ್ಯದ ಮಾವಿನ ಹಣ್ಣು ಮಾರಾಟ ಮಾಡಿದ್ದಾರೆ ಎಂದು ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕ ಎಚ್‌.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ಕೊರೊನಾ ಆತಂಕದ ನಡುವೆಯೂ ಮಾವು ಬೆಳೆಗಾರರು ಆನ್‌ಲೈನ್‌ ವಹಿವಾಟಿನ ಮೂಲಕ ಉತ್ತಮ ಲಾಭ ಗಳಿಸಿದ್ದಾರೆ. 100 ಟನ್‌ಗಿಂತಲೂ ಹೆಚ್ಚು ಮಾವು ಬೆಂಗಳೂರಿನಲ್ಲಿ ಮಾರಾಟವಾಗಿರುವುದು ವಿಶೇಷ. ರೈತರಿಗೆ ಮಾವಿನ ಹಣ್ಣು ತುಂಬಲು 3 ಕೆ.ಜಿ ಹಣ್ಣು ಹಿಡಿಸುವ 80 ಸಾವಿರ ರಟ್ಟಿನ ಪೆಟ್ಟಿಗೆಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗಿತ್ತು ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಾರಿ 117 ಮಾವು ಬೆಳೆಗಾರರು ಆನ್‌ಲೈನ್‌ ಮಾರಾಟ ಮಾಡಿದ್ದು, ವಹಿವಾಟು ಲಾಭದಾಯಕ ಎನಿಸಿರುವುದರಿಂದ, ಮುಂದಿನ ವರ್ಷ ಹೆಚ್ಚಿನ ಸಂಖ್ಯೆಯ ಮಾವು ಬೆಳೆಗಾರರು ಆನ್‌ಲೈನ್‌ ಮಾರಾಟಕ್ಕೆ ಒಲವು ತೋರುವ ಸಾಧ್ಯತೆ ಇದೆ. ಅಂಥ ಮಾವು ಬೆಳೆಗಾರರಿಗೆ ಅಗತ್ಯವಾದ ನೆರವು ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

ಸಲಹೆ: ಮಾವು ಬೆಳೆಗಾರರು ಕಾಯಿ ಕೊಯ್ಲು ಮುಗಿದ ಮೇಲೆ, ತೋಟಗಲ್ಲಿ ಬೇರೆ ಬೇರೆ ಕಾರಣಗಳಿಂದ ಉದುರಿ ಕೊಳೆಯುತ್ತಿರುವ ಮಾವಿನ ಹಣ್ಣನ್ನು ಆರಿಸಿ ಗುಳಿಯಲ್ಲಿ ಹಾಕಿ ಮಣ್ಣು ಮುಚ್ಚಬೇಕು. ತೊಟವನ್ನು ಚೆನ್ನಾಗಿ ಉಳುಮೆ ಮಾಡಿ ಸ್ವಚ್ಛಗೊಳಿಸಬೇಕು. ಮರಗಳ ವಯಸ್ಸಿಗೆ ತಕ್ಕಂತೆ ಪಾತಿ ಮಾಡಿ, ಸುರುಗನ್ನು ಮಣ್ಣಿಗೆ ಸೇರಿಸ ಬೇಕು. ಮರಗಳ ಆರೋಗ್ಯ ರಕ್ಷಣೆಗೆ ಆಗಸ್ಟ್‌ ಒಳಗೆ ಸವರುವಿಕೆ ಮೂಲಕ ಕೊಂಬೆಗಳನ್ನು ಕತ್ತರಿಸಿ ಬಿಸಿಲು, ಗಾಳಿ ಪ್ರವೇಶಿಸಲು ಅವಕಾಶ ಮಾಡಿ ಕೊಡಬೇಕು ಎಂದು ಸಲಹೆ ಮಾಡಿದ್ದಾರೆ.

ಕತ್ತರಿಸಿದ ಕಾಂಡದ ಕೊಂಬೆಯ ತುದಿಗೆ 50 ಗ್ರಾಂ. ಕಾಪರ್‌ ಆಕ್ಸಿಕ್ಲೋರೈಡ್‌ ಮತ್ತು 5 ಮಿಲಿ ಲೀಟರ್‌ ಕ್ಲೋರೋಪೈರಿ ಪಾಸ್‌ ಅನ್ನು 1 ಲೀಟರ್‌ ನೀರಿ ನಲ್ಲಿ ಬೆರೆಸಿ ಲೇಪಿಸಬೇಕು. ಮರದ ವಯಸ್ಸಿಗೆ ಅನುಗುಣವಾಗಿ ಅರಳಿದ ಸುಣ್ಣ ನೀಡಬೇಕು. ಹಾನಿಕಾರಕ ಕ್ರಿಮಿಕೀಟ ನಿಯಂತ್ರಣಕ್ಕೆ ಪ್ರತಿ ವಯಸ್ಕ ಮರಕ್ಕೆ ಒಂದು ಕೆ.ಜಿ ಪ್ರಮಾಣದಲ್ಲಿ ಬೇವಿನ ಹಿಂಡಿ ನೀಡಬೇಕು. 20ರಿಂದ 30 ಕೆ.ಜಿ.ಯಷ್ಟು ತಿಪ್ಪೆ ಗೊಬ್ಬರ ನೀಡಬೇಕು. ಅಧಿಕ ಫಸಲು ನೀಡಿ ಬಸವಳಿದ ಮರಗಳಿಗೆ 2ರಿಂದ 3 ಕೆ.ಜಿ.ಯಷ್ಟು ಸಂಯುಕ್ತ ಗೊಬ್ಬರ ನೀಡಬೇಕು ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೊಟಗಾರಿಕಾ ಇಲಾಖೆ ಅಧಿಕಾರಿಗಳು ಅಥವಾ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.