ADVERTISEMENT

ಮಾಸ್ತಿ– ಡಿವಿಜಿ ಜಿಲ್ಲೆಯ 2 ಕಣ್ಣು: ರಂಗನಾಥ್

​ಪ್ರಜಾವಾಣಿ ವಾರ್ತೆ
Published 11 ಮೇ 2019, 11:23 IST
Last Updated 11 ಮೇ 2019, 11:23 IST
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಕೋಲಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮಾಸ್ತಿ ಕವಿತೆಗಳ ಓದು’ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಅಧ್ಯಕ್ಷ ರಂಗನಾಥ್ ಮಾತನಾಡಿದರು.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಕೋಲಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮಾಸ್ತಿ ಕವಿತೆಗಳ ಓದು’ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಅಧ್ಯಕ್ಷ ರಂಗನಾಥ್ ಮಾತನಾಡಿದರು.   

ಕೋಲಾರ: ‘ಶಿಕ್ಷಣದಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯವೆಂದು ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ತೋರಿಸಿಕೊಟ್ಟಿದ್ದಾರೆ’ ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್‌ ಅಧ್ಯಕ್ಷ ರಂಗನಾಥ್ ಅಭಿಪ್ರಾಯಪಟ್ಟರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮಾಸ್ತಿ ಕವಿತೆಗಳ ಓದು’ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮಾಸ್ತಿಯವರು ಓದು ಮತ್ತು ಬುದ್ಧಿವಂತಿಕೆಯಿಂದ ಉತ್ತಮ ವಿದ್ಯಾರ್ಥಿಯಾದರು. ನಂತರ ಸತತ ಪ್ರಯತ್ನದಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದರು’ ಎಂದರು.

‘ಮಾಸ್ತಿ ಮತ್ತು ಡಿವಿಜಿ ಜಿಲ್ಲೆಯ 2 ಕಣ್ಣುಗಳಿದ್ದಂತೆ. ಇಂಗ್ಲಿಷ್ ಮತ್ತು ತಾಯಿ ನಾಡಿನ ಭಾಷೆ ಕನ್ನಡವನ್ನು ಹೇಗೆ ಬಳಕೆ ಮಾಡಬೇಕೆಂದು ಇವರು ತೋರಿಸಿಕೊಟ್ಟಿದ್ದಾರೆ. ಕಲೆ, ನಾಟಕ, ಸಂಪಾದಕೀಯ, ಕಾವ್ಯ ರಚನೆ ಸೇರಿದಂತೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಮಾಸ್ತಿಯವರ ಪರಿಶ್ರಮವಿದೆ. ಅವರು ಕನ್ನಡ ಭಾಷೆಯನ್ನು ಸೃಜನಶೀಲ ಅಭಿವ್ಯಕ್ತಿಗೆ ಒಳಪಡಿಸಿದ್ದು ಮಹತ್ವದ ಘಟನೆ’ ಎಂದು ಹೇಳಿದರು.

ADVERTISEMENT

‘ಮಾಸ್ತಿ ಬರಹಗಾರರು ಹೇಗೆ ಬರೆಯಬೇಕೆಂದು ಮಾರ್ಗದರ್ಶನ ನೀಡಿ 122 ಪುಸ್ತಕ, 100 ಕಥೆ ಬರೆದಿದ್ದಾರೆ. ಸಾಧಾರಣ ಮನುಷ್ಯ ಜೀವನವನ್ನು ಕಥೆಯ ರೂಪದಲ್ಲಿ ರಚಿಸಿ ಜೀವನಾನುಭವ ಹಂಚಿಕೊಂಡಿದ್ದಾರೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಸ್ಥಾನಮಾನ ಕುರಿತು ಚಿತ್ರಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ಇವರು ಸಹ ಒಬ್ಬರು. ಇವರ ಸಾಹಿತ್ಯದ ಓದಿನಿಂದ ಜ್ಞಾನ ವಿಸ್ತಾರವಾಗುತ್ತದೆ’ ಎಂದು ಸಲಹೆ ನೀಡಿದರು.

ಹುಟ್ಟೂರು ಮರೆಯಲಿಲ್ಲ: ‘ಮಾಸ್ತಿಯವರು ಅಂತಃಕರಣದ ಚಿತ್ರಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಅನ್ಯಾಯ ವಿರೋಧಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು’ ಎಂದು ಸಾಹಿತಿ ಸ.ರಘುನಾಥ್ ಕಿವಿಮಾತು ಹೇಳಿದರು.

‘ಮಾಸ್ತಿಯವರ ತಂದೆ ಕಂದಾಯ ವಸೂಲಿ ಮಾಡಿ ಆ ಹಣದಲ್ಲಿ ಗ್ರಾಮದ ಅಭಿವೃದ್ಧಿಗೊಳಿಸಿದರು. ಆದರೆ, ಪೊಲೀಸರು ಬಂಧಿಸಿದಾಗ ಯಾರೊಬ್ಬರೂ ಮಾಸ್ತಿಯವರಿಗೆ ಸಹಾಯ ಮಾಡಲಿಲ್ಲ. ಇದರಿಂದ ಬೇಸರಗೊಂಡ ಅವರು ಆ ಗ್ರಾಮದಲ್ಲಿ ಒಂದು ಲೋಟ ನೀರು ಸಹ ಕುಡಿಯಲಿಲ್ಲ. ಗ್ರಾಮಸ್ಥರು ಅಷ್ಟು ನೋವುಂಟು ಮಾಡಿದ್ದರೂ ಅವರು ಹುಟ್ಟೂರು ಮರೆಯಲಿಲ್ಲ’ ಎಂದರು.

‘ಸಾಮಾಜಿಕವಾಗಿ ಮಾಸ್ತಿಯರಿಂದ ಕಲಿಯಬೇಕಾದ ಗುಣಗಳು ಹೆಚ್ಚಿವೆ. ಅವರು ಪದ್ಯ, ಕಥೆ ಓದುವಾಗ ತಿಳಿ ಕನ್ನಡ ಕಲಿಯಬಹುದು. ವ್ಯಕ್ತಿ, ಸ್ಥಳಗಳ ಆಧಾರದ ಮೇಲೆ ರಾಮನವಮಿ, ರಾಮ ಪಟ್ಟಾಭಿಷೇಕ ಕಥೆ ರಚನೆ ಮಾಡಿದ್ದಾರೆ. ಇದನ್ನು ನಾಟಕದ ರೂಪಕ್ಕೆ ತರಲು ಸಾಧ್ಯವಿದೆ’ ಎಂದು ತಿಳಿಸಿದರು.

ಸಮನ್ವಯ ಭಾವ

‘ಮಾಸ್ತಿಯವರ ಕಾವ್ಯದಲ್ಲಿ ಧ್ವನಿ ಕುಸಿಯುತ್ತದೆ. ಬೇಂದ್ರೆ ಮತ್ತು ಕುವೆಂಪುರ ಕಾವ್ಯದಲ್ಲಿ ಬಹಳ ದೊಡ್ಡ ಧ್ವನಿಯಿದೆ. ಮಾಸ್ತಿ ಬದುಕಿನ ಸ್ತರದ ಕೆಳಗೆ ಬೇರೆಯವರ ಬದುಕಿನ ಸ್ತರಗಳಲ್ಲಿರುವ ಮಾನವೀಯತೆ ಎತ್ತಿ ತೋರಿಸಿದರು. ಪು.ತಿ.ನರಸಿಂಹಾಚಾರ್‌ ಮತ್ತು ಮಾಸ್ತಿಯವರ ಬದುಕಿನಲ್ಲಿ ಸಮನ್ವಯಗೊಂಡ ಭಾವ ಕಾಣಬಹುದು’ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಧ್ಯಾಪಕರಾದ ಸಿ.ಎ.ರಮೇಶ್, ಜಿ.ಶಿವಪ್ಪ ಅರಿವು, ರುದ್ರೇಶ್, ಹರೀಶ್, ಎಸ್.ರವೀಂದ್ರ ಮಾಸ್ತಿಯವರ ರಚನೆಯ ಕವಿತೆ ವಾಚಿಸಿದರು. ಪ್ರಾಂಶುಪಾಲ ಪ್ರೊ.ರಾಜೇಂದ್ರ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.