ADVERTISEMENT

ಕೋಲಾರ | ಸಕಾಲದಲ್ಲಿ ಮಳೆ ಕೊರತೆ; 35,766 ಹೆಕ್ಟೇರ್‌ ರಾಗಿ ಫಸಲು ಕುಸಿತ?

ಕೆವಿಕೆ ವಿಜ್ಞಾನಿಗಳಿಂದ ಬೆಳೆ ಸಮೀಕ್ಷೆ; ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ

ಕೆ.ಓಂಕಾರ ಮೂರ್ತಿ
Published 23 ಅಕ್ಟೋಬರ್ 2024, 6:04 IST
Last Updated 23 ಅಕ್ಟೋಬರ್ 2024, 6:04 IST
ಕೋಲಾರ ತಾಲ್ಲೂಕಿನ ತೊಟ್ಲಿ ‌ಗ್ರಾಮದ ಬಳಿ ರಾಗಿ ಬೆಳೆ ವೀಕ್ಷಿಸಿದ ರೈತ
ಕೋಲಾರ ತಾಲ್ಲೂಕಿನ ತೊಟ್ಲಿ ‌ಗ್ರಾಮದ ಬಳಿ ರಾಗಿ ಬೆಳೆ ವೀಕ್ಷಿಸಿದ ರೈತ   

ಕೋಲಾರ: ಜಿಲ್ಲೆಯಲ್ಲಿ ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಕಾಲದಲ್ಲಿ ಮಳೆ ಆಗದ ಕಾರಣ 35,766 ಹೆಕ್ಟೇರ್‌ ರಾಗಿ ಫಸಲು ಸೇರಿದಂತೆ ಒಟ್ಟು 42,404 ಹೆಕ್ಟೇರ್‌ ಪ್ರದೇಶದಲ್ಲಿನ ವಿವಿಧ ಬೆಳೆಗಳ ಇಳುವರಿಯಲ್ಲಿ ಕುಸಿತ ಆಗಬಹುದೆಂದು ಅಂದಾಜಿಸಲಾಗಿದೆ.

ಈ ಸಂಬಂಧ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೋಲಾ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ವಿಜ್ಞಾನಿಗಳು ಸಮೀಕ್ಷೆ ನಡೆಸಿದ್ದು, ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರಿಗೆ ಜಂಟಿ ಕೃಷಿ ನಿರ್ದೇಶಕಿ ಎಂ.ಆರ್‌.ಸುಮಾ ವರದಿ ಸಲ್ಲಿಸಿದ್ದಾರೆ.

ರಾಗಿ ಹಾಗೂ ಇತರ ಬೆಳೆಗಳನ್ನು ಬಿತ್ತನೆ ಮಾಡಿದ ಸಮಯದಲ್ಲಿ ಮಳೆ ಕೊಟ್ಟಿದ್ದರಿಂದ ಈ ಬಾರಿ ರೈತರು ತೊಂದರೆ ಅನುಭವಿಸಿದ್ದರು. ಜಿಲ್ಲೆಯ ಪ್ರಮುಖ ಬೆಳೆಯಾದ ರಾಗಿ ಬಹುತೇಕ ಒಣಗಿತ್ತು.

ADVERTISEMENT

ಸುಮಾರು 2,971 ಹೆಕ್ಟೇರ್‌ ಪ್ರದೇಶದಲ್ಲಿನ ನೆಲಗಡಲೆ ಇಳುವರಿ ಕುಸಿಯುವ ಸಂಭವವಿದೆ ಎಂಬುದು ವರದಿಯಲ್ಲಿ ಉಲ್ಲೇಖ ಆಗಿದೆ. ಹಾಗೆಯೇ ತೊಗರಿ, ಅಲಸಂದೆ, ಹುರುಳಿ, ಸಿರಿಧಾನ್ಯದಲ್ಲೂ ಕುಸಿಯುವ ಆತಂಕ ವ್ಯಕ್ತವಾಗಿದೆ.

ಈಗ ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿರುವ ವರದಿ ಅವರಿಂದ ಬರ ಪರಿಹಾರ ವಿಪತ್ತು ವಿಭಾಗಕ್ಕೆ ಹೋಗುತ್ತದೆ. ಎಸ್‌ಡಿಆರ್‌ಎಫ್‌ ಹಾಗೂ ಎನ್‌ಡಿಆರ್‌ಎಫ್‌ ಮಾನದಂಡಗಳನ್ನು ಪರಿಶೀಲಿಸಿದ ಬಳಿಕ ಜಂಟಿ ಸಮೀಕ್ಷೆ ನಡೆಸಲು ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಗೆ ಸೂಚಿಸುವ ಸಾಧ್ಯತೆಗಳಿರುತ್ತವೆ. ಆಗ ಯಾವ ರೈತರಿಗೆ ಎಷ್ಟು ಪರಿಹಾರ ಸಿಗಬೇಕೆಂಬುದು ಗೊತ್ತಾಗುತ್ತದೆ.

‘ಎಸ್‌ಡಿಆರ್‌ಎಫ್‌ ಮಾನದಂಡಗಳ ಪ್ರಕಾರ ಪರಿಹಾರ ನೀಡಲು ಶೇ 60ಕ್ಕೂ ಅಧಿಕ ಮಳೆ ಕೊರತೆ ಇರಬೇಕು. ಆದರೆ, ಅಷ್ಟೊಂದು ಮಳೆ ಕೊರತೆಯಾಗಿಲ್ಲ. ಅಲ್ಲದೇ, ನಂತರ ದಿನಗಳಲ್ಲಿ ಮಳೆ ಬಂದಿದ್ದು, ಬೆಳೆ ಚೇತರಿಕೆ ಕಂಡಿದೆ. ನಾವೀಗ ಸಮೀಕ್ಷೆ ನಡೆಸಿ ಬೆಳೆ ಇಳುವರಿಯಲ್ಲಿ ಕುಸಿತವಾಗುವ ಸಾಧ್ಯತೆ ಬಗ್ಗೆ ವರದಿ ಸಲ್ಲಿಸಿದ್ದೇವೆ. ಎಲ್ಲವನ್ನೂ ಪರಿಶೀಲನೆ ನಡೆಸಿ ರಾಜ್ಯಮಟ್ಟದಲ್ಲಿ ಮೇಲಧಿಕಾರಿಗಳು ಕ್ರಮ ವಹಿಸಲಿದ್ದಾರೆ’ ಎಂದು ಜಂಟಿ ಕೃಷಿ ನಿರ್ದೇಶಕಿ ಎಂ.ಆರ್‌.ಸುಮಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಒಳಗೊಂಡ ಎರಡು ತಂಡಗಳು ಬೆಳೆ ಸಮೀಕ್ಷೆ ನಡೆಸಿದ್ದವು. ಪ್ರತಿ ತಂಡದಲ್ಲಿ ಮೂವರು ವಿಜ್ಞಾನಿಗಳು ಇದ್ದರು. ಅಲ್ಲದೇ, ಕೃಷಿ ಅಧಿಕಾರಿಗಳು ಕೂಡ ಸಮೀಕ್ಷೆ ನಡೆಸಿದ್ದರು.

ಈ ಬಾರಿ ತೊಗರಿ, ನೆಲಗಡಲೆ ಬಿತ್ತನೆಯೂ ತೀರ ಕಡಿಮೆ ಆಗಿತ್ತು. ಇದಕ್ಕೆ ಕಾರಣ ಈ ಬೆಳೆಗಳ ಬಿತ್ತನೆ ಅವಧಿಯಲ್ಲಿ ಮಳೆ ಕೊಟ್ಟಿತು. ಮತ್ತೆ ಮಳೆ ಬಂದಿತಾದರೂ ಅಷ್ಟರಲ್ಲಿ ಈ ಬೆಳೆಗಳ ಬೀಜ ಬಿತ್ತನೆಗೆ ಸಮಯವೂ ಮುಗಿದಿತ್ತು.

‘ನಾವು ಆರಂಭದಲ್ಲಿ ರಾಗಿ ಬಿತ್ತನೆ ಮಾಡಿದ್ದೆವು. ಆಗ ಮುಂಗಾರು ಮಳೆ ಕೊರತೆ ಕಾರಣ ಮೊಳಕೆ ಸರಿಯಾಗಿ ಬರಲಿಲ್ಲ. ನಂತರ ಆಗಸ್ಟ್‌ನಲ್ಲಿ ಮಳೆ ಬಂದಾಗ ಮತ್ತೊಮ್ಮೆ ಬಿತ್ತನೆ ಮಾಡಿದೆವು. ಮಳೆ ನಂಬಿ ಈಗ ರಾಗಿ ಬೆಳೆಯುವುದು ಭಾರಿ ಕಷ್ಟಕರವಾಗಿದೆ. ಒಂದು ಎಕರೆ ರಾಗಿ ಬಿತ್ತನೆ ಮಾಡಿ ಮನೆ ತುಂಬಿಸಿಕೊಳ್ಳಲು ₹35 ಸಾವಿರ ಖರ್ಚು ಬರುತ್ತದೆ’ ಎಂದು ತೊಟ್ಲಿ ಗ್ರಾಮದ ಟಿ.ವಿ.ರಮೇಶ್‌ ತಿಳಿಸಿದರು.

ಸಮೀಕ್ಷೆಗೆ ಸೂಚಿಸಿದ್ದ ಉಸ್ತುವಾರಿ ಸಚಿವ

ಜಿಲ್ಲೆಯಲ್ಲಿ ರಾಗಿ ಬೆಳೆ ಒಣಗಿದ್ದು ಶೀಘ್ರವೇ ಪರಿಹಾರ ನೀಡುವಂತೆ ಕೆಡಿಪಿ ಸಭೆಯಲ್ಲಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಗಮನ ಸೆಳೆದಿದ್ದ ಹಿನ್ನೆಲೆಯಲ್ಲಿ ರಾಗಿ ಹಾಗೂ ಇನ್ನಿತರ ಬೆಳೆ ಸಮೀಕ್ಷೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ರಾಗಿ ಬೆಳೆ ಒಣಗಿದ್ದು ರೈತರಿಗೆ ಪರಿಹಾರ ನೀಡುವಂತೆ ರೈತ ಸಂಘಟನೆಗಳು ಕೂಡ ಒತ್ತಾಯಿಸಿದ್ದವು. ‘ಮಳೆ ಇಲ್ಲದೆ ರಾಗಿ ಜೋಳ ನೆಲಗಡಲೆ ತೊಗರಿ ಬೆಳೆಗಳು ರೈತರ ಕಣ್ಣು ಮುಂದೆಯೇ ಒಣಗಿ ಹೋಗುತ್ತಿವೆ. ಬೆಳೆ ಸಮೀಕ್ಷೆ ಮಾಡಿ ಪರಿಹಾರ ಕೊಡಿ. ಬರಪೀಡಿತ ಜಿಲ್ಲೆಯೆಂದು ಘೋಷಿಸಿ’ ಎಂದು ಆಗ್ರಹಿಸಿದ್ದವು.

ಈ ಬಾರಿ ಶೇ 90.76 ಬಿತ್ತನೆ

ಆರು ತಾಲ್ಲೂಕುಗಳಿಂದ ಸೇರಿ ಜಿಲ್ಲೆಯಲ್ಲಿ ಈ ವರ್ಷ 95448 ಹೆಕ್ಟೇರ್‌ ಕೃಷಿ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಒಟ್ಟು 86630 ಹೆಕ್ಟೇರ್‌ನಲ್ಲಿ ‌ಬಿತ್ತನೆ ಮಾಡಲಾಗಿದೆ. ಈ ಮೂಲಕ ಶೇ 90.76 ಗುರಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ರಾಗಿ ಬಿತ್ತನೆ ಗುರಿಯೇ 60973 ಹೆಕ್ಟೇರ್‌ ಪ್ರದೇಶವಿದೆ. ಆದರೆ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ರಾಗಿ ಸೇರಿದಂತೆ ಹಲವು ಬೆಳೆಗಳಿಗೆ ತೊಂದರೆ ಉಂಟಾಯಿತು. ಈಗ ಬಿಡದೆ ಮಳೆ ಸುರಿಯುತ್ತಿದ್ದ ಪ್ರಯೋಜನಕ್ಕೆ ಬಾರದಾಗಿದೆ. ಬದಲಾಗಿ ಇರುವ ಬೆಳೆ ನಾಶವಾಗುತ್ತಿದೆ.

ಕೃಷಿ ಇಲಾಖೆ ಹಾಗೂ ಕೆವಿಕೆ ವಿಜ್ಞಾನಿಗಳು ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ನೀಡಿದ್ದೇವೆ. ಸಕಾಲದಲ್ಲಿ ಮಳೆ ಆಗದಿದ್ದರಿಂದ ಎಷ್ಟು ಫಸಲು ಕಡಿಮೆ ಆಗಬಹುದೆಂದು ಅಂದಾಜಿಸಿ ವರದಿ ತಯಾರಿಸಿದ್ದೇವೆ
-ಎಂ.ಆರ್‌.ಸುಮಾ, ಜಂಟಿ ಕೃಷಿ ನಿರ್ದೇಶಕಿ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.