ಮಾಲೂರು (ಕೋಲಾರ): ‘ಯಾವುದೇ ರೀತಿ ಪಕ್ಷ ವಿರೋಧಿ ಹೇಳಿಕೆ ಕೊಡುವುದು, ಅದರಲ್ಲೂ ವಿರೋಧ ಪಕ್ಷದವರನ್ನು ಜೊತೆಯಲ್ಲಿಟ್ಟುಕೊಂಡು ಪಕ್ಷದ ವಿರುದ್ಧವಾಗಿ ಮಾತನಾಡುವುದು ತಪ್ಪು’ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ ತಿರುಗೇಟು ನೀಡಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹರಿಪ್ರಸಾದ್ ಮಾತಿಗೆ ಏಕೆ ಮಹತ್ವ ಕೊಡಬೇಕು? ನಮಗೆ ಹೈಕಮಾಂಡ್ ಇದೆ, ಎಐಸಿಸಿ ಅಧ್ಯಕ್ಷರಿದ್ದಾರೆ. ಈಗಾಗಲೇ ಷೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಏನು ಮಾಡಬೇಕೆಂದು ಅವರೇ ತೀರ್ಮಾನ ಮಾಡುತ್ತಾರೆ’ ಎಂದರು.
‘ನಮಗೆ ಹೈಕಮಾಂಡ್ ದೊಡ್ಡದು. ಅದನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಮತ್ತೊಬ್ಬರು ದೊಡ್ಡವರು ಇಲ್ಲ. ಯಾವುದೇ ವ್ಯಕ್ತಿ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯ ಅಲ್ಲ’ ಎಂದು ಹೇಳಿದರು.
‘ಚೈತ್ರಾ ಕುಂದಾಪುರ ಎಂಬ ಹೆಣ್ಣುಮಗಳು ಪ್ರಚೋದನಕಾರಿಯಾಗಿ ಮಾತನಾಡುತ್ತಾ ವಿಷಜಂತು ರೀತಿ ಕೆಲಸ ಮಾಡುತ್ತಿದ್ದಳು. ಜಾತಿ, ಜನಾಂಗಗಳ ಮಧ್ಯೆ ತಂದಿಡುತ್ತಿದ್ದಳು. ಯಾವುದೇ ಪಕ್ಷದವರಾಗಿರಲಿ ಸಮಾಜಕ್ಕೆ ಮೋಸ, ದ್ರೋಹ ಬಗೆಯುವವರು ಒಂದಲ್ಲ ಒಂದು ದಿನ ಜೈಲಿಗೆ ಹೋಗುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.