ಕೋಲಾರ: ವಿದ್ಯುತ್ ಸಮಸ್ಯೆ ಕುರಿತು ಇಂಧನ ಸಚಿವ ಕೆ.ಜೆ.ಜಾರ್ಜ್ ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸುವಾಗಲೇ ಪದೇಪದೇ ವಿದ್ಯುತ್ ಕೈಕೊಟ್ಟಿತು.
ಪದೇಪದೇ ವಿದ್ಯುತ್ ಕೈಕೊಟ್ಟ ಕಾರಣ ಕಿರಿಕಿರಿ ಅನುಭವಿಸಿದ ಅವರು ಕೆಲ ನಿಮಿಷ ಕತ್ತಲಲ್ಲಿಯೇ ಕುಳಿತರು. ಇದರಿಂದ ಮುಜುಗರಕ್ಕೆ ಒಳಗಾದ ಅವರು, ‘ಏಕೆ ಪವರ್ ಕಟ್ ಮಾಡುತ್ತೀರಿ’ ಎಂದು ಸಿಬ್ಬಂದಿಯನ್ನು ಸಿಟ್ಟಿನಿಂದ ಪ್ರಶ್ನಿಸಿದರು.
ಬೆಂಗಳೂರಿಗೆ ತೆರಳುವ ಮುನ್ನ ಸಚಿವರು ವಿದ್ಯುತ್ ಅಡಚಣೆಗಾಗಿ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಶುಭಾ ಅವರನ್ನು ತರಾಟೆ ತೆಗೆದುಕೊಂಡರು. ಮುಖ್ಯಮಂತ್ರಿ ಬಂದಾಗ ಈ ರೀತಿ ಆಗಬಾರದು ಎಂದು ಎಚ್ಚರಿಸಿದರು. ಆಗ ಅಧಿಕಾರಿ ಕಣ್ಣೀರಿಟ್ಟರು. ಸ್ಥಳದಲ್ಲೇ ಇದ್ದ ಇತರ ಅಧಿಕಾರಿಗಳು ಅವರನ್ನು ಸಮಾಧಾನಪಡಿಸಿದರು.
‘ವಿದ್ಯುತ್ ಸಚಿವರು ಸಭೆ ನಡೆಸುತ್ತಿದ್ದಾಗಲೇ ವಿದ್ಯುತ್ ಅಡಚಣೆ ಎಂದು ನೀವು ವರದಿ ಮಾಡುತ್ತೀರಿ. ನಾವು ಅಡ್ಜಸ್ಟ್ ಮಾಡಿಕೊಳ್ಳುತ್ತೇವೆ. ನೀವೂ ಅಡ್ಜಸ್ಟ್ ಮಾಡಿಕೊಳ್ಳಿ’ ಎಂದು ಸಭೆಯಲ್ಲಿದ್ದ ಮಾಧ್ಯಮದವರಿಗೆ ಹೇಳಿದರು.
ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಸಚಿವರು, ‘ಇದು ಬೆಸ್ಕಾಂನಿಂದ ಆಗಿರುವ ಸಮಸ್ಯೆ ಅಲ್ಲ. ಜಿಲ್ಲಾ ಪಂಚಾಯಿತಿಯಲ್ಲಿರುವ ಜನರೇಟರ್ ಕೈಕೊಟ್ಟಿದ್ದರಿಂದ ವಿದ್ಯುತ್ ಸ್ಥಗಿತಗೊಂಡಿದೆ’ ಎಂದು ಸ್ಪಷ್ಟಪಡಿಸಿದರು.
‘ಇಂಧನ ಸಚಿವರು ಬಂದಿದ್ದಾರೆಂದು ಮುನ್ನೆಚ್ಚರಿಕೆ ಕ್ರಮವಾಗಿ ಜನರೇಟರ್ ಮೂಲಕ ವಿದ್ಯುತ್ ಪೂರೈಕೆ ಮಾಡಿದ್ದಾರೆ. ಜನರೇಟರ್ ಮೇಲೆ ಒತ್ತಡ ಹೆಚ್ಚಾಗಿದ್ದರಿಂದ ಅದು ಟ್ರಿಪ್ ಆಗಿ ಪೂರೈಕೆ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದ್ದು, ಪೂರೈಕೆಯಲ್ಲೂ ಯಾವುದೇ ಕೊರತೆ ಇಲ್ಲ’ ಎಂದರು.
‘ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ರಾಜ್ಯದಲ್ಲಿ ಕುಸುಮ್ ಬಿ ಮತ್ತು ಕುಸುಮ್ ಸಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಇನ್ನು ನಾಲ್ಕು ತಿಂಗಳಲ್ಲಿ ಕೇಂದ್ರ ಸರ್ಕಾರ ಪತನವಾಗಿ ಮೋದಿ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಮುಂದಿನ 15 ವರ್ಷ ರಾಹುಲ್ ಗಾಂಧಿ ಅವರಿಗೆ ಒಳ್ಳೆಯ ಕಾಲ ಬರಲಿದೆ.ಕೆ.ಜೆ.ಜಾರ್ಜ್ ಇಂಧನ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.