ಕೋಲಾರ: ‘ಬದಲಾದ ಆಧುನಿಕ ಮತ್ತು ಯಾಂತ್ರಿಕ ಜೀವನ ಶೈಲಿಯಿಂದ ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಬಂಜೆತನಕ್ಕೆ ಕಾರಣವಾಗಿದೆ’ ಎಂದು ಎಸ್‌ಎನ್‌ಆರ್ ಜಿಲ್ಲಾ ಆಸ್ಒತ್ರೆಯ ಶಸ್ತ್ರ ಚಿಕಿತ್ಸಾಕ ಡಾ.ಎಸ್.ಜಿ.ನಾರಾಯಣಸ್ವಾಮಿ ತಿಳಿಸಿದರು.
ನಗರದಲ್ಲಿ ಲಯನ್ಸ್ ಸಂಸ್ಥೆ, ನೋವಾ ಐವಿಎಫ್ ಫರ್ಟಿಲಿಟಿ ಸಹಯೋಗದಲ್ಲಿ ಭಾನುವಾರ ನಡೆದ ಉಚಿತ ಬಂಜೆತನ ನಿವಾರಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ‘ಮೂಡನಂಬಿಕೆಗಳಿಂದ ಬಂಜೆತನ ಹೋಗಲಾಡಿಸಲು ಸಾಧ್ಯವಿಲ್ಲ, ವೈಜ್ಞಾನಿಕ ಚಿಕಿತ್ಸೆಯಿಂದ ಮಾತ್ರ ಸಾಧ್ಯ’ ಎಂದರು.
‘ದಂಪತಿಗಳು ಅಮಾವಾಸ್ಯೆ ದಿನ ಪೂಜೆ ಮಾಡುವುದು, ಹರಕೆ ಕಟ್ಟುವುದರಿಂದ ಮಕ್ಕಳಾಗುವುದೆಂಬ ಹಲವು ಮೂಡನಂಬಿಕೆಗಳಿಂದ ಕೂರುವುದರಿಂದ ಪರಿಹಾರವಲ್ಲ. ಮದುವೆಯಾದ ಎರಡು ಮೂರು ವರ್ಷವಾದರು ಮಕ್ಕಳಾಗಲಿಲ್ಲ ಎಂದರೆ ಕೂಡಲೇ ಬಂಜೆತನ ತಜ್ಞರನ್ನು ಸಂರ್ಪಕಿಸಿ ತಪಾಸಣೆ ನಡೆಸಿದರೆ ಸೂಕ್ತ ಚಿಕಿತ್ಸೆ ಪಡೆಯಬೇಕು’ ಎಂದು ಹೇಳಿದರು.
‘ಊಟದ ಶೈಲಿಯಲ್ಲಿ ಬದಲಾವಣೆ ಆಗಿರುವುದರಿಂದ ಇಂದಿನ ಪೀಳಿಗೆಯವರಲ್ಲಿ ತೂಕ ಹೆಚ್ಚಾಗುತ್ತಿರುವುದು, ಗರ್ಭಕೋಶದ ಸೋಂಕು ಉಂಟಾಗುವುದರಿಂದ, ಋತುಚಕ್ರದಲ್ಲಿ ಬದಲಾವಣೆ ಆಗುವುದರಿಂದಲೂ ಬಂಜೆತನ ಕಾಣಿಸಿಕೊಳ್ಳುತ್ತಿದೆ’ ಎಂದು ಹೇಳಿದರು.
‘ದಿನನಿತ್ಯ ಲಘು ವ್ಯಾಯಮ ಅಥವಾ ವಾಕಿಂಗ್ ಮಾಡುವುದರಿಂದ, ಪೌಷ್ಟಿಕ ಆಹಾರ ರೂಡಿ ಮಾಡಿಕೊಳ್ಳುವುದರಿಂದ ಹಾಗೂ ಮದುವೆಯಾದ 1-2 ವರ್ಷದಲ್ಲಿ ಮಕ್ಕಳಾಗದಿದ್ದರೆ ತಕ್ಷಣ ಮಹಿಳೆ ಮತ್ತು ಪುರುಷ ಇಬ್ಬರೂ ವೈದ್ಯರನ್ನು ಕಂಡು ಸರಿಯಾದ ಸಮಯಕ್ಕೆ ತಪಾಸಣೆ ಮಾಡಿಸಿಕೊಳ್ಳುವುದರಿಂದ ಬಂಜೆತನ ತಡೆಗಟ್ಟಬಹುದು’ ಎಂದು ಸಲಹೆ ನೀಡಿದರು.
ವೈದ್ಯರಾದ ಡಾ.ಅಪೂರ್ವ, ಡಾ.ಸಂತೋಷ ಗುಪ್ತ ಬಂಜೆತನ ಶಿಬಿರದಲ್ಲಿ ಭಾಗವಹಿಸಿದವರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಡಿ.ವೆಂಕಟೇಶ್, ಕಾರ್ಯದರ್ಶಿ ರವೀಂದ್ರನಾಥ್, ಖಜಾಂಚಿ ಪ್ರಸನ್ನ ಕುಮಾರ್, ಪದಾಧಿಕಾರಿಗಳಾದ ಅಚ್ಚಯ್ಯ ಶೆಟ್ಟಿ, ಚಿನ್ನಿ ಅನಂತಪ್ಪ, ನೋವಾ ಐವಿಎಫ್ ಸಂಸ್ಥೆಯ ಸಂಪರ್ಕಾಧಿಕಾರಿ ಗಿರೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.