ADVERTISEMENT

ರಾಜ್ಯದಲ್ಲಿ ಬಿಹಾರ ಮೀರಿಸುವ ಭ್ರಷ್ಟಾಚಾರ: ಸದಾನಂದಗೌಡ

ಸ್ಟಾಲಿನ್ ಮೆಚ್ಚಿಸಲು ತಮಿಳುನಾಡಿಗೆ ಕಾವೇರಿ ನೀರು–ಸದಾನಂದಗೌಡ ಟೀಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 16:08 IST
Last Updated 17 ಸೆಪ್ಟೆಂಬರ್ 2023, 16:08 IST
<div class="paragraphs"><p>ಸದಾನಂದಗೌಡ&nbsp;&nbsp;</p></div>

ಸದಾನಂದಗೌಡ  

   

ಕೋಲಾರ: ‘ಬಿಹಾರ ರಾಜ್ಯ ಭ್ರಷ್ಟಾಚಾರಕ್ಕೆ ಹೆಸರಾಗಿತ್ತು. ಆದರೆ, ಈಗ ಅದನ್ನೂ ಮೀರಿಸಿ ಕರ್ನಾಟಕ ಭ್ರಷ್ಟ ರಾಜ್ಯವಾಗಿದೆ. ವರ್ಗಾವಣೆ ದಂಧೆ ಮಿತಿ ಮೀರಿದೆ, ಅಧಿಕಾರಿಗಳಿಗೆ ಜಾಗವೇ ತೋರಿಸಿಲ್ಲ. ಗುತ್ತಿಗೆದಾರರಿಗೆ ಹಣ ನೀಡದೇ ಕಮಿಷನ್‍ಗಾಗಿ ಕಾಯುತ್ತಿದ್ದಾರೆ’ ಎಂದು ಸಂಸದ ಡಿ.ವಿ.ಸದಾನಂದಗೌಡ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜಕೀಯ ಲಾಭಕ್ಕಾಗಿ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಮೆಚ್ಚಿಸಲು ಕಾವೇರಿ ನೀರು ಬಿಟ್ಟಿದ್ದು, ಡಿಸೆಂಬರ್ ವೇಳೆಗೆ ಬೆಂಗಳೂರು ನಗರಕ್ಕೆ ಕುಡಿಯಲು ನೀರು ಇರಲ್ಲ’ ಎಂದು ಎಚ್ಚರಿಸಿದರು.

ADVERTISEMENT

‘ಕಾವೇರಿ ನ್ಯಾಯ ಮಂಡಳಿ ಮುಂದೆ ವಾದ ಮಂಡಿಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ತನ್ನ ಮಿತ್ರ ಸ್ಟಾಲಿನ್‌ ಮೆಚ್ಚಿಸಲು ರಾಜ್ಯದ ರೈತರ ಹಿತ ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸಿದೆ’ ಎಂದು ದೂರಿದರು.

‘ಮೆಟ್ಟೂರು ಜಲಾಶಯದಲ್ಲಿ 60 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಈ ನೀರು ಕಾವೇರಿಯಿಂದ ಹರಿದದ್ದೇ ಆಗಿತ್ತು. ಈ ವಿಷಯವನ್ನು ನ್ಯಾಯ ಮಂಡಳಿ ಮುಂದೆ ಪ್ರಸ್ತಾಪವೇ ಮಾಡಲಿಲ್ಲ. ಏಕೆಂದರೆ ಸ್ಟಾಲಿನ್‍ ಅವರಿಗೆ ಬೇಸರವಾಗುತ್ತದೆ’ ಎಂದು ವ್ಯಂಗ್ಯಮಾಡಿದರು.

‘ಮೊದಲೇ ನೀರು ಬಿಟ್ಟು ಈಗ ರಾಜ್ಯದ ಜನರ ವಿರೋಧ ವ್ಯಕ್ತವಾಗುತ್ತಿದ್ದಂತೆ ನೀರು ಬಿಡುವುದಿಲ್ಲ ಎಂದು ನಾಟಕವಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಇವರಿಗೆ ರಾಜ್ಯದ ಹಿತ ಬೇಕಾಗಿಲ್ಲ. ನೀರಿನಲ್ಲಿ ಬಿದ್ದ ಕೋಣದಂತೆ ನಿದ್ರಿಸುತ್ತಿದ್ದಾರೆ, ಇವರನ್ನು ಎಚ್ಚರಿಸಲು ಹೋರಾಟ ಅನಿವಾರ್ಯವಾಗಿದೆ’ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಮುಖಂಡರಾದ ಚಿ.ನಾ.ರಾಮು, ವೆಂಕಟೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.