ADVERTISEMENT

ದಶಪಥ ಹೈವೆ ಅವೈಜ್ಞಾನಿಕವೆಂದ ಸುಮಲತಾಗೆ ತಾಂತ್ರಿಕ ತಜ್ಞರೆಂದು ಎಚ್‌ಡಿಕೆ ಟಾಂಗ್

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 17:16 IST
Last Updated 18 ಆಗಸ್ಟ್ 2021, 17:16 IST
ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ   

ಕೋಲಾರ: ‘ಮಂಡ್ಯ ಸಂಸದೆ ಸುಮಲತಾ ತಾಂತ್ರಿಕ ತಜ್ಞರಿದ್ದಾರೆ. ಹೀಗಾಗಿ ಅವರಿಗೆ ಬೆಂಗಳೂರು–ಮೈಸೂರು ರಸ್ತೆ ಬಗ್ಗೆ ಮಾಹಿತಿಯಿದೆ. ಅವರು ಬುದ್ಧಿವಂತರಾದ ಕಾರಣ ಮಾತನಾಡುತ್ತಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

ಬೆಂಗಳೂರು–ಮೈಸೂರು ರಸ್ತೆ ವೈಜ್ಞಾನಿಕವಾಗಿಲ್ಲ ಎಂಬ ಸುಮಲತಾ ಅವರ ಹೇಳಿಕೆ ಬಗ್ಗೆ ಇಲ್ಲಿ ಬುಧವಾರ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಉತ್ತರ ನೀಡಲು ನಾನು ತಾಂತ್ರಿಕ ತಜ್ಞನಲ್ಲ. ನಾನು ಸಾಮಾನ್ಯ ಪದವೀಧರ. ರಸ್ತೆ ಅವೈಜ್ಞಾನಿಕವಾಗಿ ಎಂದರೆ ನಾನೇನು ಉತ್ತರ ನೀಡಲಿ. ಆ ಬಗ್ಗೆ ಕೇಂದ್ರ ಸಚಿವರು, ಇಲಾಖೆ ಅಧಿಕಾರಿಗಳು ಮಾತನಾಡಬೇಕು’ ಎಂದರು.

‘ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಎಷ್ಟೇ ಬಲಾಢ್ಯರಾಗಿದ್ದರೂ ಕ್ರಮ ಕೈಗೊಳ್ಳುವಂತೆ ನಾನೇ ಸರ್ಕಾರಕ್ಕೆ ತಿಳಿಸಿದ್ದೇನೆ. ಈ ವಿಚಾರವಾಗಿ ನಾನು ಒಂದು ಹೇಳಿಕೆ ನೀಡುವುದು, ಅದಕ್ಕೆ ಸುಮಲತಾ ಅವರೊಂದು ಕಥೆ ಹೇಳುವುದು, ಪಾಪಾ ಹೆಣ್ಣು ಮಗಳ ಬಗ್ಗೆ ನಾನೇಕೆ ಮಾತನಾಡಲಿ? ನಾನು ಸಂಸ್ಕೃತಿ ಬೇರೆ ಕಲಿಯಬೇಕಾಗಿದೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಸ್ವಾಗತಿಸುವ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಈ ಪ್ರಕರಣ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮುಂದಿನ ದಿನಗಳು ಹೇಗಿರಬಹುದು ಎಂಬ ಬಗ್ಗೆ ಮುನ್ಸೂಚನೆ ನೀಡಿದೆ. ಭವಿಷ್ಯದಲ್ಲಿ ಸಂಸ್ಕೃತಿ ಹೇಗಿರಲಿದೆ ಎಂಬುದನ್ನು ತಿಳಿಸಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.