ಮುಳಬಾಗಿಲು: ತಾಲ್ಲೂಕಿನ ಕಗ್ಗಲನತ್ತ ಗ್ರಾಮದ ಬಳಿ ಅರಣ್ಯ ಇಲಾಖೆಯು 306 ಎಕರೆ ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ ಎಂದು ರೈತ ಹಿತರಕ್ಷಣಾ ಸಮತಿಯ ಜಿಲ್ಲಾ ಸಂಚಾಲಕ ಎಂ. ಗೋಪಾಲ್ ಆರೋಪಿಸಿದ್ದಾರೆ.
ಈ ಜಮೀನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಇದೇ 11ರಂದು ಎಚ್.ಗೊಲ್ಲಹಳ್ಳಿ ಗ್ರಾಮದಿಂದ ಕಗ್ಗಲನತ್ತ ಗ್ರಾಮದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಗ್ಗಲನತ್ತ ಗ್ರಾಮದ ಬಳಿಯ ಸರ್ವೆ ಸಂಖ್ಯೆ 79ರಲ್ಲಿ 306 ಎಕರೆ ಗೋಮಾಳ ಜಮೀನಿದ್ದು, ಕಾನೂನಿನ ಪ್ರಕಾರ ಸುತ್ತಮುತ್ತಲಿನ ಜಾನುವಾರುಗಳ ಮೇವು ಮತ್ತಿತರರ ಕೆಲಸಗಳಿಗಾಗಿ ಮೀಸಲಿಡಲಾಗಿತ್ತು. ಆದರೆ ಅದೇ ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಅರಣ್ಯ ಇಲಾಖೆಯು, ಇದು ತನ್ನದು ಎಂದು ವಾದಿಸುತ್ತಿದೆ’ ಎಂದು ಹೇಳಿದರು.
11ರಂದು ನಡೆಯಲಿರುವ ಪಾದಯಾತ್ರೆಗೆ ತಾಲ್ಲೂಕಿನ ಸಾವಿರಾರು ರೈತರು ಭಾಗವಹಿಸಲಿದ್ದು, ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡಬೇಕು. ಕಂದಾಯ ಹಾಗೂ ಸರ್ವೆ ಅಧಿಕಾರಿಗಳು ಒತ್ತುವರಿ ಜಮೀನಿನ ಬಳಿಗೆ ಬಂದು ಜಮೀನು ಸರ್ವೆ ಮಾಡಿ, ಗೋಮಾಳವನ್ನಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿದರು.
ಕೆ.ಸತೀಶ್ ಕುಮಾರ್, ಶ್ರೀರಾಮ್, ಸೀನಪ್ಪ, ಅಮರಪ್ಪ, ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.