ಕೋಲಾರ: ಗುಜರಾತ್‌ನ ಸೋನು ಡಂಗಾರ್ ಎಂಬ ಮಹಿಳೆಯು ಮುಸ್ಲಿಮರ ಧಾರ್ಮಿಕ ಗ್ರಂಥ ಕುರಾನ್‌ನ ಪ್ರತಿಯನ್ನು ಕಾಲಿನಿಂದ ತುಳಿದು ಸುಟ್ಟಿರುವ ಪ್ರಕರಣ ಖಂಡಿಸಿ ಮುಸ್ಲಿಂ ಧರ್ಮೀಯರು ಹಾಗೂ ವರ್ತಕರು ನಗರದಲ್ಲಿ ಬುಧವಾರ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದರು.
ಅಮ್ಮವಾರಿಪೇಟೆ ವೃತ್ತ, ಬಿಇಒ ಕಚೇರಿ ಹಿಂಭಾಗ, ಕ್ಲಾಕ್ ಟವರ್, ಎಂ.ಜಿ ರಸ್ತೆ, ಬೆಂಗಳೂರು ರಸ್ತೆಯ ಈದ್ಗಾ ಮೈದಾನ ಸೇರಿದಂತೆ ಹಲವೆಡೆ ಪ್ರತಿಭಟನಾಕಾರರು ಸೋನು ಅವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದರು. ಅಲ್ಲದೇ, ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಎಂ.ಜಿ ರಸ್ತೆ, ಎಂ.ಬಿ ರಸ್ತೆ, ಅಮ್ಮವಾರಿಪೇಟೆ, ರಹಮತ್‌ನಗರ ಹಾಗೂ ಕ್ಲಾಕ್ ಟವರ್ ಸುತ್ತಮುತ್ತ ಮುಸ್ಲಿಂ ವರ್ತಕರು ದಿನನಿತ್ಯದಂತೆ ಅಂಗಡಿಗಳನ್ನು ತೆರೆದಿದ್ದರು. ನಂತರ ಧಾರ್ಮಿಕ ಮುಖಂಡರು ಪ್ರತಿಭಟನೆಗೆ ಕರೆ ನೀಡಿದ್ದರಿಂದ ವರ್ತಕರು ಅಂಗಡಿಗಳ ಬಾಗಿಲು ಮುಚ್ಚಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಇದರಿಂದ ನಗರದಲ್ಲಿ ಅಘೋಷಿತ ಬಂದ್ ವಾತಾವರಣವಿತ್ತು.
ಗಾಂಧಿವನದ ಬಳಿ ಸಮಾವೇಶ ನಡೆಸಿದ ಮೌಲ್ವಿಗಳು, ‘ಗುಜರಾತ್‌ನಲ್ಲಿ ನವೆಂಬರ್ ತಿಂಗಳಲ್ಲಿ ಸೋನು ಡಂಗಾರ್ ದುರುದ್ದೇಶಪೂರ್ವಕವಾಗಿ ಕುರಾನ್ ಪ್ರತಿ ಸುಟ್ಟಿದ್ದಾರೆ. ಈ ಹಿಂದೆ ಅವರು ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಕೋಮುವಾದಿ ಮನಸ್ಥಿತಿಯ ಅವರು ಕೋಮುಸೌಹಾರ್ದ ಕದಡಲು ಯತ್ನಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.
ಸಮುದಾಯಕ್ಕೆ ನೋವು: ‘ಜಾತ್ಯಾತೀತ ಭಾರತದಲ್ಲಿ ಎಲ್ಲಾ ಧರ್ಮೀಯರಿಗೂ ಸಮನಾಗಿ ಬದುಕುವ ಸ್ವಾತಂತ್ರ್ಯವಿದೆ. ದೇಶದಲ್ಲಿ ಹಿಂದೂಗಳು ಹಾಗೂ ಮುಸ್ಲಿಮರು ಪರಸ್ಪರ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದರೆ, ಸೋನು ಅವರು ಕೋಮು ಸೌಹಾರ್ದಕ್ಕೆ ಧಕ್ಕೆ ತಂದಿದ್ದಾರೆ’ ಎಂದು ದರ್ಗಾ ಶಾಹಿ ಮಸೀದಿ ಮೌಲ್ವಿ ಇಸ್ರಾಯಿಲ್ ಮಿಸ್ಬಾಯಿ ದೂರಿದರು.
‘ಸೋನು ಅವರು 2017ರಲ್ಲಿ ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಅಲ್ಲದೇ, ಅಶ್ಲೀಲ ಸಂದೇಶವುಳ್ಳ ದೃಶ್ಯ ತುಣುಕುಗಳನ್ನು ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದೀಗ ಕುರಾನ್‌ಗೆ ಅಗೌರವ ತೋರಿದ್ದು, ಅವರ ವರ್ತನೆಯಿಂದ ಮುಸ್ಲಿಂ ಸಮುದಾಯಕ್ಕೆ ನೋವಾಗಿದೆ’ ಎಂದು ಬಿಲಾಲ್ ಮಸೀದಿ ಮೌಲ್ವಿ ಖಲೀಲ್ ಅಹಮ್ಮದ್ ಹೇಳಿದರು.
ಗಡಿಪಾರು ಮಾಡಿ: ‘ಸೋನು ಅವರನ್ನು ಬಂಧಿಸುವಂತೆ ಸಾಕಷ್ಟು ಬಾರಿ ಹೋರಾಟ ಮಾಡಿದ್ದೇವೆ. ಆದರೆ, ಗುಜರಾತ್ ಸರ್ಕಾರ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದೆ. ಸೋನು ತಮ್ಮ ತಪ್ಪು ಅರಿತು ಮುಸ್ಲಿಂ ಸಮುದಾಯದ ಕ್ಷಮೆ ಕೇಳಬೇಕು. ಪೊಲೀಸರು ಅವರನ್ನು ಶೀಘ್ರವೇ ಬಂಧಿಸಿ ದೇಶದಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಎಂ.ಜಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಅಂಜುಮಾನ್ ಇಸ್ಲಾಮಿಯಾ ಸಂಘಟನೆ ಅಧ್ಯಕ್ಷ ಜಮೀರ್ ಅಹಮ್ಮದ್, ಕಾರ್ಯದರ್ಶಿ ಸೈಫುಲ್ಲಾ ಹಾಗೂ ಮುಸ್ಲಿಂ ಸಮುದಾಯದ ಹಲವು ಮೌಲ್ವಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.