ವೇಮಗಲ್: ಕೋಲಾರ ತಾಲ್ಲೂಕಿನ ನರಸಾಪುರವು ಪ್ರಮುಖ ಹೋಬಳಿಯಾಗಿದೆ. ಅಲ್ಲದೆ, ಇದು ಶೈಕ್ಷಣಿಕ ಕೇಂದ್ರ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳನ್ನು ಮತ್ತು ಭಾನುವಾರದ ಸಂತೆ ಜೊತೆಗೆ ಕೈಗಾರಿಕಾ ಪ್ರದೇಶವನ್ನೂ ತನ್ನ ಒಡಲೊಳಗೆ ಇಟ್ಟುಕೊಂಡಿದೆ. ಇದರಿಂದಾಗಿ ನರಸಾಪುರ ತನ್ನದೇ ಆದ ಮಹತ್ವ ಹೊಂದಿದೆ.
ವಾಣಿಜ್ಯ, ವ್ಯಾಪಾರ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಹೊರಗಿನಿಂದ ಬಂದ ಸಾಕಷ್ಟು ಮಂದಿ ಇದೇ ಗ್ರಾಮದಲ್ಲಿ ನೆಲೆಸಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಜನಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಆದರೆ, ಸ್ವಚ್ಛತೆ ಮಾತ್ರ ಮರೀಚಿಕೆಯಾಗಿದೆ. ಕಸ, ತ್ಯಾಜ್ಯ ಮತ್ತು ಕೊಳಚೆ ನೀರು ರಸ್ತೆಯನ್ನೂ ವ್ಯಾಪಿಸಿದ್ದು, ದುರ್ನಾತ ಬೀರುತ್ತಿದೆ. ಇದರ ಪರಿಣಾಮ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ.
ಇನ್ನು ಗ್ರಾಮದ ಮುಖ್ಯ ರಸ್ತೆಗಳಲ್ಲಿ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ನೀರು ಹರಿಯಲು ಜಾಗವೇ ಇಲ್ಲದಂತಾಗಿದೆ. ಬೆಂಗಳೂರು ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ ಪಶು ಆಸ್ಪತ್ರೆ ಮುಂದಿನ ರಾಜಕಾಲುವೆಯನ್ನು ಸ್ವಚ್ಛ ಮಾಡಿ, ವರ್ಷಗಳೇ ಕಳೆದಿದೆ. ಈ ಕಲುಷಿತ ನೀರಿನಿಂದಾಗಿ ಸೊಳ್ಳೆಗಳು ಯಥೇಚ್ಛವಾಗಿದ್ದು, ಗ್ರಾಮದ ಜನರು ಡೆಂಗಿ ಭೀತಿಗೆ ಸಿಲುಕಿದ್ದಾರೆ.
ದಿನಕ್ಕೆ ನೂರಾರು ಮಂದಿ ವೈದ್ಯಕೀಯ ಚಿಕಿತ್ಸೆಗಾಗಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿರುವ ಚರಂಡಿಯಲ್ಲೂ ತ್ಯಾಜ್ಯ ತುಂಬಿಕೊಂಡಿದ್ದು, ಸೊಳ್ಳೆಗಳ ಉತ್ಪತ್ತಿ ಕೇಂದ್ರದಂತಾಗಿದೆ. ಹೀಗಾಗಿ, ಚಿಕಿತ್ಸೆಗೆ ಬರುವವರು ಮತ್ತಷ್ಟು ಕಾಯಿಲೆಗೆ ತುತ್ತಾಗುವ ಅಪಾಯ ಎದುರಿಸುವಂತಾಗಿದೆ.
ಗ್ರಾಮದ ಮುಖ್ಯ ರಸ್ತೆಗಳಲ್ಲೂ ಕಸ ಹಂಚಿಹೋಗಿರುತ್ತದೆ. ಸರ್ಕಾರಿ ಪಬ್ಲಿಕ್ ಶಾಲೆ ಎದುರು, ವೇಮಗಲ್ ರಸ್ತೆಯಲ್ಲಿ ಬಿದ್ದಿರುವ ಕಸದ ರಾಶಿ, ಕೊಳಚೆ ನೀರು ನರಸಾಪುರಕ್ಕೆ ಸ್ವಾಗತದಂತಿರುತ್ತದೆ. ತೆರವು ಮಾಡಿದ ಕಟ್ಟಡ ಸಾಮಗ್ರಿಗಳು, ಚರಂಡಿ ಹೂಳು ಮಣ್ಣು, ಬೇಡವಾದ ನಾಡಹೆಂಚು, ಹಾಸಿಗೆ, ಕಲ್ನಾರ್‌ಶೀಟ್, ರುಬ್ಬುವ ಕಲ್ಲು, ಪ್ಯಾಕಿಂಗ್ ಬಳಸುವ ಥರ್ಮಾಕೋಲ್ ಇತರೆ ತ್ಯಾಜ್ಯಗಳನ್ನು ಎಲ್ಲೆಂದರಲ್ಲೇ ಬಿಸಾಡಲಾಗಿದೆ. ಒಟ್ಟಾರೆ ನರಸಾಪುರ ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ಗಲೀಜು, ದುರ್ನಾತವನ್ನು ತಡೆದುಕೊಂಡು ಜನರು ಜೀವನ ನಡೆಸುವಂತಾಗಿದೆ.
ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಎಚ್ಚೆತ್ತುಕೊಂಡು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ನರಸಾಪುರ ಗ್ರಾಮದಲ್ಲಿ ಕಸ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಎಲ್ಲೆಡೆ ಕಸದ ರಾಶಿಯೇ ಕಂಡುಬರುತ್ತಿದೆ. ಕೈಗಾರಿಕಾ ಪ್ರದೇಶವೆಂಬ ಹೆಮ್ಮೆಯಿದ್ದರೂ ಸ್ಥಳೀಯ ಆಡಳಿತ ಸ್ವಚ್ಛತೆಗೆ ಮುಂದಾಗುತ್ತಿಲ್ಲ.-ಕಲ್ವ ಮಂಜಲಿ ರಾಮುಶಿವಣ್ಣ ಯುವ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ
ಎಲ್ಲ ಭಾಗಗಳಲ್ಲಿಯೂ ಪಂಚಾಯಿತಿ ವತಿಯಿಂದಲೇ ಸ್ವಚ್ಛತೆ ಕಾರ್ಯ ಮಾಡಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಎಲ್ಲ ಕಡೆಗಳಲ್ಲಿ ಸ್ವಚ್ಛತೆ ಇದೆ.-ಮುನಿರಾಜು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನರಸಾಪುರ ಗ್ರಾ. ಪಂ
ತಂಗುದಾಣಕ್ಕೂ ವ್ಯಾಪಿಸಿದ ಕಸ
ಗ್ರಾಮದ ಬಸ್ ತಂಗುದಾಣದ ಸ್ಥಿತಿಯಂತೂ ಹೇಳತೀರದಾಗಿದೆ. ಇದು ವೇಮಗಲ್ ಭಾಗದ ಎಲ್ಲರಿಗೂ ಬೆಂಗಳೂರು ಸಂಪರ್ಕಕ್ಕೆ ಇರುವ ಏಕ ಮಾತ್ರ ಬಸ್ ನಿಲ್ದಾಣ. ಆದರೆ ತಂಗುದಾಣದ ಪೂರ್ತಿ ಕಸದ ರಾಶಿ ತುಂಬಿರುತ್ತದೆ. ಈ ನಿಲ್ದಾಣವು ಪ್ರತಿನಿತ್ಯವು ನೂರಾರು ಮಂದಿ ಆಶ್ರಯತಾಣವಾಗಿದೆ. ಹೀಗಾಗಿ ಸಮರ್ಪಕ ನಿಲ್ದಾಣ ನಿರ್ಮಿಸಿಕೊಡುವಂತೆ ಇಲ್ಲಿನ ಜನ ಒತ್ತಾಯಿಸುತ್ತಿದ್ದಾರೆ. ಆದರೆ ಸಂಬಂಧಪಟ್ಟವರು ಮಾತ್ರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.