ಕೋಲಾರ: ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆದು ತಿಂಗಳು ಕಳೆದಿದ್ದು, ರಾಜ್ಯದ ಬೇರೆ ಜಿಲ್ಲೆಗಳ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿ, ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಕೋಲಾರ ಜಿಲ್ಲೆಯಲ್ಲಿ ಕೆಡಿಪಿ ಸಭೆಯೂ ಇಲ್ಲ, ಜನತಾ ದರ್ಶನವೂ ಇಲ್ಲವೆಂದು ಕೆಲ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಜಿಲ್ಲೆಗೆ ಬಂದು ಸಭೆ ನಡೆಸುವುದು ಬದಿಗಿರಲಿ; ಚುನಾವಣೆ ನಂತರ ಅವರ ದರ್ಶನವೇ ಇಲ್ಲವಾಗಿದೆ ಎಂಬುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಹೆಚ್ಚುತ್ತಿರುವ ಡೆಂಗಿ ಆತಂಕ ಇರಬಹುದು, ಶಿಥಿಲಗೊಂಡಿರುವ ಶಾಲಾ ಕಟ್ಟಡ ಸಂಬಂಧದ ಆತಂಕ ಆಗಿರಬಹುದು, ನಗರಸಭೆ ಅವ್ಯವಸ್ಥೆ, ಮುಂಗಾರು ಹಂಗಾಮು ಸಂಬಂಧ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಯ ಕುರಿತು ಪರಿಶೀಲನೆ ನಡೆಸುವುದಾಗಲಿ, ಬೆಳೆ ವಿಮೆ, ಸಾಲದ ಸಮಸ್ಯೆಯಾಗಲಿ, ಹಾಲಿನ ದರ ಕಡಿತದಿಂದ ಹೈನುಗಾರರಿಗೆ ಆಗಿರುವ ತೊಂದರೆಯಾಗಲಿ, ಅಕ್ರಮ ಗಣಿಗಾರಿಕೆ ಸೇರಿದಂತೆ ಯಾವೊಂದು ಸಮಸ್ಯೆಗೂ ಸ್ಪಂದಿಸುವವರು ಇಲ್ಲವಾಗಿದ್ದಾರೆ ಎಂಬುದು ಸಾರ್ವಜನಿಕರ ದೂರು.
ಜಿಲ್ಲೆಯ ಪ್ರಮುಖ ಬೆಳೆ ಟೊಮೆಟೊವನ್ನು ವಿವಿಧ ರೋಗಗಳು ಬಾಧಿಸುತ್ತಿವೆ. ಈ ಬಾರಿ ಟೊಮೆಟೊ ಫಸಲಿನ ಪ್ರಮಾಣವೂ ಕಡಿಮೆಯಾಗಿದೆ. ಕಳಪೆ ಬಿತ್ತನೆ ಬೀಜದ ಬಗ್ಗೆ ದೂರುಗಳು ಕೇಳಿ ಬರುತ್ತಿವೆ, ನರ್ಸರಿ ಮೇಲಿನ ಹಿಡಿತದ ಬಗ್ಗೆ ಸಮಸ್ಯೆ ಬಗೆಹರಿದಿಲ್ಲ. ಇತ್ತ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕಾರ್ಯದರ್ಶಿ ಹಾಗೂ ಮಂಡಿ ಮಾಲೀಕರ ನಡುವೆ ಜಗಳ ನಡೆದು ಕಾರ್ಯದರ್ಶಿಯ ವರ್ಗಾವಣೆಯೂ ಆಗಿದೆ. ಎಪಿಎಂಸಿ ಜಾಗದ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ಜಿಲ್ಲೆಯಲ್ಲಿ ಕೊನೆಯ ಬಾರಿ ಕೆಡಿಪಿ (ಕರ್ನಾಟಕ ಅಭಿವೃದ್ಧಿ ಪ್ರಗತಿ ಪರಿಶೀಲನೆ) ಸಭೆ ನಡೆದಿದ್ದು ಫೆಬ್ರುವರಿ 5ರಂದು. ಅದಾಗಿ ಬರೋಬ್ಬರಿ ಐದು ತಿಂಗಳು ಕಳೆದಿದೆ.
‘ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳು ಆಗಾಗ ನಡೆಯಬೇಕು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕು. ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಈ ಸಭೆ ಬಹಳ ಮುಖ್ಯವಾಗಿದೆ. ಕೆಡಿಪಿ ಸಭೆ ನಡೆಯದೇ ಇರುವುದರಿಂದ ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳ ಬಳಿ ಕೆಲಸಗಳನ್ನು ಮಾಡಿಸಲು ಸಾಧ್ಯವಾಗುವುದಿಲ್ಲ’ ಎಂಬುದು ಕೆಲ ಶಾಸಕರ ದೂರು.
ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವಧಿಯಲ್ಲೂ ಇದೇ ಪರಿಸ್ಥಿತಿ ಇತ್ತು. ಈ ಸಂಪ್ರದಾಯ ಈಗಲೂ ಮುಂದುವರಿದಿದೆ. ಈಚೆಗೆ ಕೆ.ಸಿ.ವ್ಯಾಲಿ ನೀರಿನ ವಿಚಾರವಾಗಿ ಬೈರತಿ ಸುರೇಶ್ ಬೆಂಗಳೂರಿನಲ್ಲೇ ಸಭೆ ನಡೆಸಿದ್ದು ಬಿಟ್ಟರೆ ಮತ್ತೊಂದು ಸಭೆ ನಡೆದಿಲ್ಲ. ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿಲ್ಲ.
ಹಾಗೆಯೇ, ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕೋಲಾರದಲ್ಲಿ ಜನತಾ ದರ್ಶನ ನಡೆದು ವರ್ಷವಾಗುತ್ತಾ ಬಂತು. ಕಳೆದ ಸೆಪ್ಟೆಂಬರ್ 25ರಂದು ನಡೆದಿದ್ದ ಆ ಸಭೆಯೂ ಶಾಸಕ–ಸಂಸದರ ಜಗಳದಲ್ಲಿ ಗೊಂದಲದ ಗೂಡಾಗಿತ್ತು. ತಾಲ್ಲೂಕುಮಟ್ಟದಲ್ಲಿ ಆಯಾಯ ಶಾಸಕರ ನೇತೃತ್ವದಲ್ಲಿ ಜನತಾ ದರ್ಶನ ನಡೆದಿದೆ ಅಷ್ಟೆ. ಅದರಲ್ಲೂ ಅಧಿಕಾರಿಗಳು ಪೂರ್ಣಪ್ರಮಾಣದಲ್ಲಿ ಭಾಗಿಯಾಗದ ಕಾರಣ ಸಮಸ್ಯೆ ಹೊತ್ತು ಬಂದ ಜನರಿಗೆ ನ್ಯಾಯ ಸಿಕ್ಕಿಲ್ಲ.
ಜಿಲ್ಲಾ ಮಟ್ಟದಲ್ಲಿ ಪ್ರತಿ ತಿಂಗಳು ಹಾಗೂ ತಾಲ್ಲೂಕು ಕೇಂದ್ರದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಜನತಾ ದರ್ಶನ ನಡೆಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆಯೇ ಸೂಚನೆ ನೀಡಿದ್ದಾರೆ. ತಮ್ಮ ಬಳಿಗೆ ಹೆಚ್ಚು ಮಂದಿ ದೂರು ಹೊತ್ತು ಬರುತ್ತಿರುವ ಕಾರಣ ಅವರು ಈ ನಿರ್ದೇಶನ ನೀಡಿದ್ದಾರೆ. ತಮಗೆ ನೀಡುವ ಅಹವಾಲುಗಳನ್ನು ಸ್ಥಳೀಯವಾಗಿಯೇ ಸಂಬಂಧಿತ ಶಾಸಕರು ಅಥವಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಬಹುದು ಎಂಬುದು ಅವರ ಉದ್ದೇಶ.
ಜವಾಬ್ದಾರಿ ಇರುವವರು ಕೆಡಿಪಿ ಸಭೆ ಕರೆದು ಸರ್ಕಾರದ ಯೋಜನೆಗಳು ಜನರಿಗೆ ತಲುಪಿದೆಯೇ ಇಲ್ಲವೇ ಜನರಿಗೆ ಏನೆಲ್ಲಾ ಸಮಸ್ಯೆಗಳಿವೆ ಎಂಬುದನ್ನು ಪರಿಶೀಲಿಸಬೇಕು. ಅದಕ್ಕೆ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು. ಅದನ್ನು ಬಿಟ್ಟು ಬರೀ ಐದು ಗ್ಯಾರಂಟಿ ಇಟ್ಟುಕೊಂಡು ಎಲ್ಲವೂ ಚೆನ್ನಾಗಿದೆ ಅಂದುಕೊಳ್ಳುವುದು ಮೂರ್ಖತನವಾಗುತ್ತದೆ.
ಈಗಾಗಲೇ ಪೆಟ್ರೋಲ್ ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ಹಾಲಿನ ಮಾರಾಟ ದರ ಏರಿಸಲಾಗಿದೆ ಇತ್ತ ಉತ್ಪಾದಕರಿಗೆ ನೀಡುವ ದರ ಕಡಿ ಮಾಡಲಾಗಿದೆ. ಸದ್ಯದಲ್ಲೇ ನಾನು ‘ದಿಶಾ’ ಸಭೆ ಕರೆದು ಕೇಂದ್ರ ಪುರಸ್ಕೃತ ಯೋಜನೆಗಳನ್ನು ಪರಿಶೀಲಿಸಿ ಸಾಧ್ಯವಾದಷ್ಟು ಸಮಸ್ಯೆ ಬಗೆಹರಿಸುತ್ತೇನೆ ಎಂ.ಮಲ್ಲೇಶ್ ಬಾಬು ಸಂಸದ ಕೋಲಾರ
ಬೈರತಿ ಸುರೇಶ್ ಶೋಕಿಗೆ ಉಸ್ತುವಾರಿ ಸಚಿವರಾಗಿದ್ದಾರೆ. ಜನರ ಸಮಸ್ಯೆಗಳು ಪರಿಹಾರ ಆಗುವುದು ಈ ಸರ್ಕಾರಕ್ಕೆ ಬೇಕಾಗಿಲ್ಲ. ಹಿಂದಿನ ಕೆಡಿಪಿ ಸಭೆ ಕಾಟಾಚಾರಕ್ಕೆ ಎನ್ನುವಂತಿತ್ತು. ಕೋಲಾರ ತಮ್ಮದು ಎಂದು ಒಪ್ಪಿಕೊಳ್ಳಲಾಗದು ಮನಸ್ಥಿತಿ ಅವರದ್ದು. ಜಿಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸುವವರೂ ಇಲ್ಲ. ಕೆಲ ಇಲಾಖೆಗಳಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಜನರ ಕಷ್ಟ ಆಲಿಸಲು ಇಷ್ಟವಿಲ್ಲವೆಂದರೆ ಉಸ್ತುವಾರಿ ಜವಾಬ್ದಾರಿಯನ್ನು ಬೇರೆಯವರಿಗೆ ಬಿಟ್ಟುಕೊಡಲಿ. ಅದನ್ನು ಬಿಟ್ಟು ಕೋಲಾರ ಜನತೆಗೆ ಮೋಸ ಮಾಡಬಾರದು. ಜನತಾ ದರ್ಶನ ನಡೆಸದೇ ಇರುವುದೂ ದ್ರೋಹ ಎಂದು ಜೆಡಿಎಸ್ ಗೋವಿಂದರಾಜು ವಿಧಾನ ಪರಿಷತ್ ಸದಸ್ಯ ಇಂಚರ ಹೇಳಿದರು.
ಲೋಕಸಭೆ ಚುನಾವಣೆ ಕಾರಣ ಕೆಡಿಪಿ ಸಭೆ ನಡೆಸಲು ಸಾಧ್ಯವಾಗಿಲ್ಲ. ಚಿಕ್ಕಬಳ್ಳಾಪುರದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ನಾನು ಭಾಗಿಯಾಗಿದ್ದೆ. ಕೋಲಾರದಲ್ಲೂ ಸಭೆ ನಡೆಯಲಿದ್ದು ಈಗಾಗಲೇ ನಾವೆಲ್ಲಾ ಜನರ ಸಮಸ್ಯೆ ಆಲಿಸುತ್ತಿದ್ದೇವೆ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆಎಂ.ಎಲ್.ಅನಿಲ್ ಕುಮಾರ್ ವಿಧಾನ ಪರಿಷತ್ ಸದಸ್ಯ
ಸ್ಥಳೀಯ ಸಮಸ್ಯೆ ಆಲಿಸುವ ಕೆಲಸವನ್ನು ಉಸ್ತುವಾರಿ ಸಚಿವರು ಮಾಡುತ್ತಿಲ್ಲ. ಯಾವುದೇ ಸಂಘ ಸಂಸ್ಥೆ ಜೊತೆ ಸಭೆ ನಡೆಸಿಲ್ಲ. ಕೈಗೆ ಸಿಗದ ಉಸ್ತುವಾರಿ ಸಚಿವರಾಗಿದ್ದಾರೆ. ಬೆಂಗಳೂರಿನಲ್ಲೇ ಇರುವ ಅವರು 70 ಕಿ.ಮೀ ಸಮೀಪದ ಜಿಲ್ಲೆಗೆ ಬರುತ್ತಿಲ್ಲ. ಉಸ್ತುವಾರಿ ಕಾರ್ಯದರ್ಶಿಯೂ ಸಭೆ ನಡೆಸುತ್ತಿಲ್ಲ. ಜಮೀನು ಸಂಬಂಧ ಕೆಲಸಗಳಿಗೆ ತಾಲ್ಲೂಕು ಕಚೇರಿಗಳಲ್ಲಿ ಜನರು ನಿತ್ಯ ಅಲೆಯುತ್ತಿದ್ದಾರೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಲಂಚದ ಹಾವಳಿ ಹೆಚ್ಚಾಗಿದೆ. ಅಧಿಕಾರಿಗಳನ್ನು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಉಸ್ತುವಾರಿ ಸಚಿವರನ್ನು ಬದಲಾಯಿಸಿ ಕೆಲಸ ಮಾಡುವವರನ್ನು ಹಾಕಿಅಬ್ಬಣಿ ಶಿವಪ್ಪ ರೈತ ಮುಖಂಡ ಕೋಲಾರ
ಕೆಡಿಪಿ ಸಭೆ ನಡೆಸಿ ಪ್ರಗತಿ ಪರಿಶೀಲದ ಕಾರಣ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳದ್ದೇ ಕಾರುಬಾರು ನಡೆದಿದೆ ಎಂಬುದು ಸಾರ್ವಜನಿಕರ ಆರೋಪ. ಜಿಲ್ಲೆಗೆ ವಿವಿಧ ಇಲಾಖೆಗಳಿಗೆ ಎಷ್ಟು ಅನುದಾನ ಬಂದಿದೆ ಸಮರ್ಪಕವಾಗಿ ಬಳಕೆಯಾಗಿದೆಯೇ ಎಷ್ಟು ಅನುದಾನಕ್ಕೆ ಬೇಡಿಕೆ ಇತ್ತು ಫಲಾನುಭವಿಗಳಿಗೆ ತಲುಪಿದೆಯೇ ಅಥವಾ ಅಧಿಕಾರಿಗಳು ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳ ಹಿಂಬಾಲಕರ ಪಾಲಾಯಿತೇ ಬಳಕೆಯಾಗದೇ ಸರ್ಕಾರಕ್ಕೆ ಮರಳಿ ಹೋಯಿತೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗದಾಗಿದೆ ಎಂದು ಜನಪ್ರತಿನಿಧಿಗಳು ಹೇಳುತ್ತಾರೆ. ಜಿಲ್ಲಾಧಿಕಾರಿ ಅಕ್ರಂ ಪಾಷಾ ವಿವಿಧ ಇಲಾಖೆಗಳ ಸಭೆ ನಡೆಸಿ ಒಂದಿಷ್ಟು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.