ADVERTISEMENT

ಐ–ಫೋನ್‌ ತಯಾರಿಕಾ ಕಂಪನಿ ವಿಸ್ಟ್ರಾನ್‌ನಲ್ಲಿ ವೇತನ ನೀಡದ್ದಕ್ಕೆ ಕಾರ್ಮಿಕರ ದಾಂದಲೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 7:39 IST
Last Updated 12 ಡಿಸೆಂಬರ್ 2020, 7:39 IST
   

ಕೋಲಾರ: ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಪ್ರತಿಷ್ಠಿತ ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರು ದಾಂದಲೆ ನಡೆಸಿದ್ದು, ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಪುಡಿಪುಡಿ‌ ಮಾಡಿದ್ದಾರೆ.

ಕಂಪನಿಯು ನಾಲ್ಕೈದು ತಿಂಗಳಿನಿಂದ ವೇತನ ನೀಡದಿದ್ದರಿಂದ ಆಕ್ರೋಶಗೊಂಡಿದ್ದ ಕಾರ್ಮಿಕರು ಶನಿವಾರ ಬೆಳಗಿನ ಜಾವ ಏಕಾಏಕಿ ಪ್ರತಿಭಟನೆ ನಡಸಿದ್ದಾರೆ. ಈ ವೇಳೆ ಕಂಪನಿ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಮತ್ತು ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಕಂಪ್ಯೂಟರ್, ಪೀಠೋಪಕರಣ, ಯಂತ್ರೋಪಕರಣ ಜಖಂಗೊಳಿಸಿದ್ದಾರೆ.

ADVERTISEMENT

ಅಲ್ಲದೇ, ಕಂಪನಿಯ 2 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಕಂಪನಿ ಆವರಣದಲ್ಲಿದ್ದ 4 ಕಾರುಗಳನ್ನು ಜಖಂಗೊಳಿಸಿದ್ದಾರೆ. ಕಂಪನಿ‌ ಮೇಲೆ ಕಲ್ಲು ತೂರಾಟ‌‌ ನಡೆಸಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ.

ತೈವಾನ್‌ ಮೂಲದ ವಿಸ್ಟ್ರಾನ್‌ ಇನ್ಫೋಕಾಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ನರಸಾಪುರ ಕೈಗಾರಿಕಾ ಪ್ರದೇಶದ ಮೊಬೈಲ್ ಉತ್ಪಾದನಾ ಘಟಕಕ್ಕೆ ಸುಮಾರು ₹ 3 ಸಾವಿರ ಕೋಟಿ ಹೂಡಿಕೆ ಮಾಡಿದೆ. 43 ಎಕರೆ ವಿಸ್ತಾರವಾಗಿರುವ ಘಟಕದಲ್ಲಿ 10 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಜಿಲ್ಲೆ ಸೇರಿದಂತೆ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಸಾವಿರಾರು ನಿರುದ್ಯೋಗಿಗಳಿಗೆ ಕಂಪನಿಯು ಉದ್ಯೋಗಾವಕಾಶ ಕಲ್ಪಿಸಿದೆ. ಇಲ್ಲಿ ಆಪಲ್ ಕಂಪನಿಯ ಐ–ಫೋನ್‌ ಮತ್ತು‌ ಮೊಬೈಲ್ ಬಿಡಿ ಭಾಗಗಳನ್ನು ಉತ್ಪಾದಿಸಲಾಗುತ್ತಿದೆ. ಕಂಪನಿಯು ಬೆಂಗಳೂರಿನ ಪೀಣ್ಯದಲ್ಲಿ ಐ–ಪೋನ್ ಜೋಡಣೆ ಘಟಕ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.