ADVERTISEMENT

ಮುಳಬಾಗಿಲು: ಇದ್ದೂ ಇಲ್ಲದಂತಾದ ಕಸ ವಿಲೇವಾರಿ ಘಟಕ

​ಪ್ರಜಾವಾಣಿ ವಾರ್ತೆ
Published 2 ಮೇ 2024, 5:14 IST
Last Updated 2 ಮೇ 2024, 5:14 IST
ಮುಳಬಾಗಿಲು ತಾಲ್ಲೂಕಿನ ಗಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಘಟಕ 
ಮುಳಬಾಗಿಲು ತಾಲ್ಲೂಕಿನ ಗಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಘಟಕ    

ಮುಳಬಾಗಿಲು: ತಾಲ್ಲೂಕಿನ ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಳುವ ಕಸ ಹಾಕಲು ಸುಸಜ್ಜಿತವಾಗಿ ಕಸ ವಿಲೇವಾರಿ ಘಟಕ ನಿರ್ಮಿಸಿದ್ದರೂ, ಘಟಕ ಪಂಚಾಯಿತಿ ಕೇಂದ್ರದಿಂದ ಸುಮಾರು ದೂರವಿರುವುದರಿಂದ ಕಸ ಕೊಂಡೊಯ್ಯಲು ಹೆಣಗಾಡುವಂತಾಗಿದೆ. ಇದರಿಂದ ಪಂಚಾಯಿತಿ ವ್ಯಾಪ್ತಿ ಗ್ರಾಮಗಳಲ್ಲಿ ಕಸ ತೆರವು ಮಾಡಲಾಗದೆ ಎಲ್ಲೆಂದರಲ್ಲೇ ಕಸದ ರಾಶಿಗಳಿವೆ.

ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವ ಪಂಚಾಯಿತಿ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು ಎಂಟು ಗ್ರಾಮಗಳಿವೆ. ಎಲ್ಲಾ ಗ್ರಾಮದ ಕಸ ತೆರವಿಗೆ ಒಂದು ವಾಹನವಿದ್ದು, ಕಸವನ್ನು ತುಂಬಿಸಿಕೊಂಡು ದೂರದಲ್ಲಿರುವ ಕಸ ವಿಲೇವಾರಿ ಘಟಕದ ಬಳಿ ಹೋಗಲು ಸಮಸ್ಯೆ ಎದುರಾಗುವ ಕಾರಣದಿಂದ ಕಸವನ್ನು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಸುರಿಯುತ್ತಿದ್ದಾರೆ.

ಪಂಚಾಯಿತಿ ಕಚೇರಿ ಇರುವ ಗಡ್ಡೂರು ಬಳಿಯ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತೆ ಸುಮಾರು ಹೋಟೆಲ್‌, ಟೀ ಅಂಗಡಿ ಹಾಗೂ ಸಣ್ಣ ಪುಟ್ಟ ವ್ಯಾಪಾರ ವಹಿವಾಟು ನಡೆಯುವ ಅಂಗಡಿಗಳಿದ್ದು, ಪ್ರತಿನಿತ್ಯ ಸುಮಾರು ಪ್ಲಾಸ್ಟಿಕ್, ಪೇಪರ್ ಹಾಗೂ ತ್ಯಾಜ್ಯ ಬೀಳುತ್ತಿದೆ. ದಿನ ಬೀಳುವ ಕಸವನ್ನು ಘಟಕ ದೂರವಿರುವ ಕಾರಣ ವಾಹನದಲ್ಲಿ ಸಾಗಿಸಲು ಪರದಾಡುವಂತಾಗಿದೆ.

ADVERTISEMENT

ಕಸ ವಿಲೇವಾರಿ ಘಟಕ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಕಾಮದೊಡ್ಡಿ ಸಮೀಪದಲ್ಲಿ ನಿರ್ಮಾಣವಾಗಿದ್ದು, ಕಸದ ವಾಹನಕ್ಕೆ ಮಹಿಳಾ ಚಾಲಕರು ಇರುವ ಕಾರಣದಿಂದ ಒಬ್ಬರೇ ದೂರ ಹೋಗಲು ಸಾಧ್ಯವಾಗದೆ ಘಟಕ ಇದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ.

ಪಂಚಾಯಿತಿ ಕಚೇರಿಗಿಲ್ಲ ಸುಸಜ್ಜಿತ ಕಟ್ಟಡ: ಇನ್ನು ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ ನರೇಗಾ ಹಾಗೂ ಸರ್ಕಾರದಿಂದ ಅನುದಾನವಿದ್ದರೂ ಪಂಚಾಯಿತಿಗೆ ಇದುವರೆಗೂ ಸ್ವಂತ ಹಾಗೂ ಸುಸಜ್ಜಿತ ಕಟ್ಟಡ ಇಲ್ಲ. ಹಾಗಾಗಿ ಪಂಚಾಯಿತಿ ಕೆಲಸಗಳನ್ನು ಎರಡು ಕಡೆ ನಡೆಸಲಾಗುತ್ತಿದೆ. ಸಾಮಾನ್ಯ ಕೆಲಸಗಳನ್ನು ಪಂಚಾಯಿತಿ ಕಟ್ಟಡಲ್ಲಿ ನಿರ್ವಹಿಸಿದರೆ, ಗಣಕ ಯಂತ್ರದ ವ್ಯವಹಾರಗಳನ್ನು ಸಮೀಪದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲಿ ನಿರ್ವಹಿಸಲಾಗುತ್ತಿದೆ.ಇದರಿಂದ ಕಚೇರಿಯ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಪರದಾಡುವಂತಹ ಸ್ಥಿತಿ ಏರ್ಪಟ್ಟಿದೆ.

ರಸ್ತೆ ಬದಿಯಲ್ಲಿ ಕಸದ ರಾಶಿ: ಇನ್ನೂ ಕಸ ವಿಲೇವಾರಿ ಘಟಕ ಪಂಚಾಯಿತಿ ಕೇಂದ್ರದಿಂದ ದೂರವಿರುವ ಕಾರಣದಿಂದ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿವೆ. ಹಾಗಾಗಿ ಕಸ ಗಾಳಿಗೆ ರಸ್ತೆಗೆ ಬಂದು ಬೀಳುತ್ತಿದೆ. ಇದರಿಂದ ಗಡ್ಡೂರು ಪಂಚಾಯಿತಿ ಕೇಂದ್ರಕ್ಕೆ ಸಮೀಪದಲ್ಲೇ ಕಸ ವಿಲೇವಾರಿ ಘಟಕ ನಿರ್ಮಾಣವಾಗಿದ್ದರೆ ಅನುಕೂಲವಾಗುತ್ತಿತ್ತು ಎಂಬುದು ಗ್ರಾಮಸ್ಥರ ಮಾತಾಗಿದೆ.

ರಸ್ತೆ ಬದಿಯಲ್ಲಿ ಬಿದ್ದಿರುವ ಕಸದ ರಾಶಿ

ಶೀಘ್ರ ಕಸ ವಿಲೇವಾರಿ

ಟಿ.ಕುರುಬರಹಳ್ಳಿ ಸಮೀಪದ ರಾಜ್ಯ ಗಡಿಯಲ್ಲಿ ಸರ್ಕಾರಿ ಜಮೀನು ವಿಸ್ತಾರವಾಗಿ ಇರುವ ಕಾರಣದಿಂದ ಕಸ ವಿಲೇವಾರಿ ಘಟಕಕ್ಕೆ ವಿಶಾಲವಾದ ಜಾಗದಲ್ಲಿ ಹಿಂದಿನ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಭೂಮಿ ಗುರುತಿಸಿದ್ದಾರೆ. ಮಹಿಳಾ ಚಾಲಕಿ ಇದ್ದರೂ ಹಗಲಿನಲ್ಲಿ ಕಸ ಸುರಿದು ಬರುತ್ತಾರೆ. ಯಾವುದೇ ಸಮಸ್ಯೆ ಇಲ್ಲ. ನಾನು ಹೊಸದಾಗಿ ಬಂದಿದ್ದೇನೆ. ಈ ಬಗ್ಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ಎಲ್ಲೇ ಕಸದ ಸಮಸ್ಯೆ ಇದ್ದರೂ ಶೀಘ್ರವಾಗಿ ವಿಲೇವಾರಿ ಮಾಡಿಸಲಾಗುವುದು. ಸರಿತಾ ಪಿಡಿಒ ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.