ADVERTISEMENT

ಮುಳಬಾಗಿಲು | ಐಐಟಿ ಕಾಲೇಜು ಸ್ಥಳಾಂತರಕ್ಕೆ ಆಕ್ಷೇಪ

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 18 ನವೆಂಬರ್ 2024, 6:56 IST
Last Updated 18 ನವೆಂಬರ್ 2024, 6:56 IST
ಮುಳಬಾಗಿಲು ನಗರದಲ್ಲಿ ಇದ್ದ ಐಐಟಿ ಕಾಲೇಜು ವರ್ಗಾವಣೆಗಾಗಿ ದೇವರಾಯ ಸಮುದ್ರದ ಬಸ್ ಗೇಟ್ ಸಮೀಪ ನಿರ್ಮಿಸಿಲಾದ ಕಟ್ಟಡ
ಮುಳಬಾಗಿಲು ನಗರದಲ್ಲಿ ಇದ್ದ ಐಐಟಿ ಕಾಲೇಜು ವರ್ಗಾವಣೆಗಾಗಿ ದೇವರಾಯ ಸಮುದ್ರದ ಬಸ್ ಗೇಟ್ ಸಮೀಪ ನಿರ್ಮಿಸಿಲಾದ ಕಟ್ಟಡ   

ಮುಳಬಾಗಿಲು: ಮುಳಬಾಗಿಲು ನಗರದಲ್ಲಿರುವ ಸರ್ಕಾರಿ ತರಬೇತಿ ಸಂಸ್ಥೆಯನ್ನು ಸ್ಥಳದ ಅಭಾವದಿಂದಾಗಿ ಹೊಸ ಕಟ್ಟಡ ನಿರ್ಮಾಣವಾಗುತ್ತಿರುವ ದೇವರಾಯ ಸಮುದ್ರ ಎಂಬಲ್ಲಿಗೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ. ಆದರೆ, ಇದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ನಗರದಿಂದ 10–15 ಕಿ.ಮೀ ದೂರದಲ್ಲಿರುವ ದೇವರಾಯ ಸಮುದ್ರಕ್ಕೆ ಕೈಗಾರಿಕಾ ತರಬೇತಿ ಸಂಸ್ಥೆಯ ವರ್ಗಾವಣೆಯು ಅವೈಜ್ಞಾನಿಕವಾಗಿದ್ದು, ಆ ಸ್ಥಳಕ್ಕೆ ಸಮರ್ಪಕವಾದ ಸಾರಿಗೆ ಸೌಲಭ್ಯವೂ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಅನನುಕೂಲವಾಗಿದೆ ಎಂದು ಜನರು ಆರೋಪಿಸಿದ್ದಾರೆ. 

ಮುಳಬಾಗಿಲು ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಸ್ವಂತ ಕಟ್ಟಡ ಇಲ್ಲ. ಹೀಗಾಗಿ ನಗರದ ಹಳೆಯ ರೇಷ್ಮೆ ಮೊಟ್ಟೆ ಮಾರುಕಟ್ಟೆ ಪ್ರಾಂಗಣದಲ್ಲಿ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರ ನಿಗದಿಪಡಿಸಿದಷ್ಟು ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ. ನಗರಕ್ಕೆ ವಿವಿಧ ಭಾಗಗಳಿಂದ ಸಾರಿಗೆ ಸಂಪರ್ಕವಿರುವ ಕಾರಣ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಸಂಸ್ಥೆಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಮುಳಬಾಗಿಲು ನಗರದಿಂದ ದೂರದ ದೇವರಾಯ ಸಮುದ್ರದ ಬಸ್ ಗೇಟ್ ಬಳಿ ನಿರ್ಮಿಸಲಾಗುತ್ತಿರುವ ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಆದರೆ, ಇಲ್ಲಿಗೆ ತೆರಳಲು ಸಾರಿಗೆ ಸೌಲಭ್ಯ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ವಿದ್ಯಾರ್ಥಿಗಳು ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ADVERTISEMENT

ಮುಳಬಾಗಿಲು ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಫಿಟ್ಟರ್, ಟರ್ನರ್, ವೆಲ್ಡರ್, ಮೆಕಾನಿಕ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಸೇರಿದಂತೆ ಎಲ್ಲ ವಿಭಾಗದ ತರಬೇತಿ ಘಟನೆಗಳಿದ್ದು, 350 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಮುಳಬಾಗಿಲು ನಗರದಲ್ಲಿರುವ ಐಟಿಐ ಕಾಲೇಜಿನಲ್ಲೇ ತಮ್ಮ ಸಂಪೂರ್ಣ ವಿದ್ಯಾಭ್ಯಾಸ  ಪೂರ್ಣಗೊಳಿಸುವ ಆಕಾಂಕ್ಷೆಯಲ್ಲಿದ್ದರು.

ಇತ್ತೀಚೆಗೆ ಮುಳಬಾಗಿಲು–ಕೋಲಾರ ಮಧ್ಯೆ ಭಾಗದಲ್ಲಿರುವ ದೇವರಾಯ ಸಮುದ್ರದ ಬಳಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಐಟಿಐ ಕಾಲೇಜು ಸ್ಥಳಾಂತರ ಮಾಡುತ್ತಿರುವುದಕ್ಕೆ ಬಹುತೇಕ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನ ದೇವರಾಯ ಸಮುದ್ರದಲ್ಲಿ 20 ವರ್ಷಗಳಿಂದಲೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಹೀಗಿರುವಾಗ ನಗರದ ಕೈಗಾರಿಕಾ ತರಬೇತಿ ಸಂಸ್ಥೆಯನ್ನೂ ಅಲ್ಲಿಗೇ ವರ್ಗಾಯಿಸುತ್ತಿರುವುದು ಅವೈಜ್ಞಾನಿಕ ಎಂಬುದು ವಿದ್ಯಾರ್ಥಿಗಳ ವಾದ. 

ಜೊತೆಗೆ ತಾಲ್ಲೂಕಿನ ಗಡಿ ಭಾಗದ ತಾಯಲೂರು, ನಂಗಲಿ, ಬೈರಕೂರು, ಹೆಬ್ಬಣಿ, ಎನ್.ವಡ್ಡಹಳ್ಳಿ, ಕೆ.ಬೈಯಪ್ಪನಹಳ್ಳಿ, ತಿಮ್ಮರಾವುತ್ತನಹಳ್ಳಿ, ಗೂಕುಂಟೆ, ದುಗ್ಗಸಂದ್ರ, ಮಲ್ಲನಾಯಕನಹಳ್ಳಿ, ಆಲಂಗೂರು ಮತ್ತಿತರರ ಹೋಬಳಿ ಹಾಗೂ ಗಡಿ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಅಲ್ಲದೆ, ಐಟಿಐ ಕಾಲೇಜು ದೇವರಾಯ ಸಮುದ್ರಕ್ಕೆ ಸ್ಥಳಾಂತರಗೊಂಡಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳು ಎರಡು ಅಥವಾ ಮೂರು ಬಸ್ ಬದಲಿಸಬೇಕಿದೆ ಎಂದು ವಿದ್ಯಾರ್ಥಿಗಳು ದೂರಿದರು. 

ನಂಗಲಿ ಅಥವಾ ಎನ್.ವಡ್ಡಹಳ್ಳಿಗೆ ಸ್ಥಳಾಂತರಿಸಲು ಒತ್ತಾಯ
ಮುಳಬಾಗಿಲು ನಗರದ ಸರ್ಕಾರಿ ಕೈಗಾರಿಕಾ ಸಂಸ್ಥೆಯನ್ನು ನಗರದಲ್ಲೇ ಉಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಎನ್.ವಡ್ಡಹಳ್ಳಿ ಅಥವಾ ನಂಗಲಿ ಗ್ರಾಮಗಳ ಬಳಿಗೆ ವರ್ಗಾಯಿಸಬೇಕು
ಪ್ರಭಾಕರ್ ಯಲುವಹಳ್ಳಿ ವಿದ್ಯಾರ್ಥಿ ಪೋಷಕ
ಮುಳಬಾಗಿಲು ನಗರಕ್ಕೆ ದಿನ ಪೂರ್ತಿ ಸಾರಿಗೆ ಸೌಲಭ್ಯವಿದೆ ಎಂಬ ಕಾರಣಕ್ಕೆ ನಗರದ ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದೇವೆ. ಕಾಲೇಜು ಸ್ಥಳಾಂತರಗೊಂಡರೆ ವೆಚ್ಚಗಳು ಹೆಚ್ಚಲಿದೆ
ಸೋಮಶೇಖರ್ ವಿದ್ಯಾರ್ಥಿ ನಂಗಲಿ
ಐಟಿಐ ಕಾಲೇಜು ಸ್ಥಳಾಂತರ ಅವೈಜ್ಞಾನಿಕ
ನಂಗಲಿ ಮತ್ತು ಎನ್. ವಡ್ಡಹಳ್ಳಿಯು ಮುಳಬಾಗಿಲು ನಗರದ ನಂತರದಲ್ಲಿ ಅತಿಹೆಚ್ಚು ಜನಸಂಖ್ಯೆ ವ್ಯಾಪಾರ ವಹಿವಾಟು ಮತ್ತು ಜನದಟ್ಟಣೆ ಹೊಂದಿದ ಕೇಂದ್ರಗಳಾಗಿವೆ. ಹೀಗಾಗಿ ದೇವರಾಯ ಸಮುದ್ರಕ್ಕೆ ಸ್ಥಳಾಂತರಿಸಲು ಮುಂದಾಗಿರುವ ಐಟಿಐ ಕಾಲೇಜನ್ನು ನಂಗಲಿ ಅಥವಾ ಎನ್.ವಡ್ಡಹಳ್ಳಿಗೆ ಸ್ಥಳಾಂತರಿಸಿದ್ದರೆ ಅನುಕೂಲವಾಗುತ್ತಿತ್ತು. ಆದರೆ ಏಕಾಏಕಿ ಈಗಾಗಲೇ ಇರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇರುವ ದೇವರಾಯ ಸಮುದ್ರದ ಪಕ್ಕದಲ್ಲೇ ಮತ್ತೊಂದು ಸಂಸ್ಥೆ ಆರಂಭಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ದಾಖಲಾತಿ ಕುಸಿಯುವ ಭೀತಿ ದೇವರಾಯ ಸಮುದ್ರಕ್ಕೆ ಮುಳಬಾಗಿಲಿನಲ್ಲಿರುವ ಸಂಸ್ಥೆಯನ್ನು ಸ್ಥಳಾಂತರ ಮಾಡುವುದರಿಂದ ಕೆಜಿಎಫ್ ಬಂಗಾರಪೇಟೆ ಕೋಲಾರ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ವಿದ್ಯಾರ್ಥಿಗಳು ಇನ್ನು ಮುಂದೆ ಕೋಲಾರ ಅಥವಾ ಕೆಜಿಎಫ್ ಸರ್ಕಾರಿ ಸಂಸ್ಥೆಗೆ ದಾಖಲಾತಿ ಪಡೆಯಬಹುದು. ಇದರಿಂದ ಮುಳಬಾಗಿಲು ತಾಲ್ಲೂಕಿನ ಎರಡೂ ಸರ್ಕಾರಿ ಕೈಗಾರಿಕಾ ಸಂಸ್ಥೆಗಳಿಗೆ ದಾಖಲಾತಿ ಕುಸಿಯಬಹುದು ಎಂದು ವಿದ್ಯಾರ್ಥಿಗಳ ಪೋಷಕರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.