ADVERTISEMENT

ಕೋಲಾರ | ಜಿಲ್ಲಾ ಕ್ರೀಡಾಂಗಣದ ಕಾಮಗಾರಿಯಲ್ಲಿ ಲೋಪ: ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆ

ಕೆ.ಓಂಕಾರ ಮೂರ್ತಿ
Published 18 ಜುಲೈ 2024, 7:04 IST
Last Updated 18 ಜುಲೈ 2024, 7:04 IST
ಕೋಲಾರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಅಳವಡಿಸಿರುವ ಸಿಂಥೆಟಿಕ್‌ ಟ್ರ್ಯಾಕ್‌
ಕೋಲಾರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಅಳವಡಿಸಿರುವ ಸಿಂಥೆಟಿಕ್‌ ಟ್ರ್ಯಾಕ್‌   

ಕೋಲಾರ: ಕೋಲಾರ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಅಳವಡಿಸಿರುವ ಸಿಂಥೆಟಿಕ್‌ ಟ್ರ್ಯಾಕ್‌ ಬಹಳಷ್ಟು ಕಡೆ ಅವೈಜ್ಞಾನಿಕವಾಗಿದ್ದು, ಲೋಪ ಹಾಗೂ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಕ್ರೀಡಾ ಪರಿಣತರು, ಕ್ರೀಡಾ ಸಂಸ್ಥೆ ಪದಾಧಿಕಾರಿಗಳು ಹಾಗೂ ಕ್ರೀಡಾಪಟುಗಳು ಆಕ್ಷೇಪ ಎತ್ತಿದ್ದಾರೆ.

ಕಾಮಗಾರಿ ಆರಂಭವಾಗಿ ಒಂದೂವರೆ ವರ್ಷ ಕಳೆದಿದ್ದರೂ ಅಪೂರ್ಣವಾಗಿದೆ. ಉದ್ಘಾಟನೆ ಆಗದೇ ಕ್ರೀಡಾಪಟುಗಳಿಗೆ ಲಭ್ಯವೂ ಆಗುತ್ತಿಲ್ಲ.

ಡಿಸ್ಕಸ್‌ ಥ್ರೋ, ಹ್ಯಾಮರ್‌ ಥ್ರೋ ಹಾಗೂ ಷಾಟ್‌ಪಟ್‌ (ಗುಂಡು ಎಸೆತ) ಚಟುವಟಿಕೆಗಳಿಗೆ ಅಳವಡಿಸಿರುವ ರಿಂಗ್‌ ಬಗ್ಗೆಯೇ ಹೆಚ್ಚಿನವರು ಆಕ್ಷೇಪ ಎತ್ತಿದ್ದು, ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಯಮ ಉಲ್ಲಂಘನೆಯಾಗಿದ್ದು, ಆ ಸ್ಥಳದಿಂದ ಕಿತ್ತು ಬೇರೆಡೆ ಕ್ರಮಬದ್ಧವಾಗಿ ಅಳವಡಿಸಬೇಕೆಂದು ಕ್ರೀಡಾ ಇಲಾಖೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರಿಗೆ ಪತ್ರ ಬರೆದಿದ್ದಾರೆ. ಸಂಸದ ಎಂ.ಮಲ್ಲೇಶ್‌ ಬಾಬು ಕೂಡ ಕ್ರೀಡಾಂಗಣಕ್ಕೆ ಪರಿಶೀಲನೆ ನಡೆಸಿದ್ದಾರೆ. ಅಳವಡಿಕೆ ಸಮಯದಲ್ಲೇ ಗಮನಕ್ಕೆ ತರಬೇಕಿತ್ತು ಎಂದಿರುವ ಅವರು ಈ ಸಂಬಂಧ ಲೋಪಗಳಿದ್ದರೆ ಗುತ್ತಿಗೆದಾರರ ಗಮನಕ್ಕೆ ತಂದು ಕೂಡಲೇ ಸರಿಪಡಿಸುವಂತೆ ಸೂಚಿಸಿದ್ದಾರೆ.

ADVERTISEMENT

ಕಾಮಗಾರಿ ಲೋಪಗಳ ಬಗ್ಗೆ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ರಾಜವೇಲು, ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಷನ್‌ ಪದಾಧಿಕಾರಿಗಳು, ಕ್ರೀಡಾಪಟುಗಳು, ಕ್ರೀಡಾ ಮಾರ್ಗದರ್ಶಕ ಹಾಗೂ ನಿವೃತ್ತ ಯೋಧ ಜಗನ್ನಾಥನ್‌ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.

‘ಜೂನಿಯರ್‌ ಮಟ್ಟದ ಕ್ರೀಡಾಕೂಟ ನಡೆದಾಗ ಷಾಟ್‌ಪುಟ್‌ನಲ್ಲಿ ಮಕ್ಕಳು ಎಸೆಯುವ ಗುಂಡು ಸಿಂಥೆಟಿಕ್‌ ಮೇಲೆಯೇ ಬೀಳುತ್ತದೆ. ಪದೇಪದೇ ಗುಂಡು ಬಿದ್ದು, ಸಿಂಥೆಟಿಕ್‌ ಹಾಳಾಗುತ್ತದೆ. ಹುಲ್ಲಿನ ಮೇಲೆ ಗುಂಡು ಬೀಳುವಂತಿರಬೇಕು. ಹೀಗಾಗಿ, ಸ್ಥಳವನ್ನೇ ಬದಲಾಯಿಸಬೇಕು’ ಎಂದಿದ್ದಾರೆ.

‘ಟ್ರಿಪಲ್‌ ಜಂಪ್‌ಗೆ ಅಳವಡಿಸಿರುವ ಟ್ರ್ಯಾಕ್‌ನಲ್ಲಿ ಜೂನಿಯರ್‌ ಹಾಗೂ ಸಬ್‌ ಜೂನಿಯರ್ಸ್‌ ಅಥ್ಲೀಟ್‌ಗಳಿಗೆ ಬೇಕಾದ ಟೇಕ್‌ ಆಫ್‌ ಬೋರ್ಡ್‌ ಹಾಕಿಲ್ಲ. ಈ ಲೋಪ ಸರಿಪಡಿಸಬೇಕು. ಟ್ರಿಪಲ್‌ ಜಂಪ್‌ ಹಾಗೂ ಲಾಂಗ್‌ಜಂಪ್‌ ಫಿಟ್‌ನಲ್ಲಿ ಹಾಕಿರುವ ಸ್ಥಳೀಯ ಮರಳಿನ ಬದಲಾಗಿ ಸಮುದ್ರದ ಮರಳು ಹಾಕಬೇಕೆಂದು’ ಎಂದು ಸಲಹೆ ನೀಡಿದ್ದಾರೆ.

‘ಕಳಪೆ ಹುಲ್ಲು ಹಾಸು ಹಾಕಿದ್ದು, ಇಲ್ಲಿಗೆ ನೀರಿಗೆ ಹೊಂದಿಕೊಳ್ಳುವುದಿಲ್ಲ. ಟ್ರಿಪಲ್‌ ಚೇಸ್‌ ಸ್ಪರ್ಧೆಗೆ ಸಂಬಂಧಿಸಿದಂತೆ ಹರ್ಡಲ್ಸ್‌ ಕ್ಲ್ಯಾಂಪ್‌ ಇನ್ನೂ ಅಳವಡಿಸಿಲ್ಲ. ಫ್ಲಡ್‌ ಲೈಟ್‌ ಅಳವಡಿಕೆಯಲ್ಲೂ ದೋಷವಿದ್ದು, ನಾಲ್ಕು ದಿಕ್ಕುಗಳಿಗೆ ಸರಿಯಾಗಿ ಬೆಳಕು ಬರುತ್ತಿಲ್ಲ. ಟ್ರ್ಯಾಕ್‌ ಸಮತಟ್ಟವಿಲ್ಲದ ಕಾರಣ ಕೆಲವೆಡೆ ನೀರು ನಿಲ್ಲುತ್ತಿದೆ. ಟ್ರ್ಯಾಕ್‌ ಮಾರ್ಕಿಂಗ್‌ ತೆಳುವಾಗಿದ್ದು, ದಪ್ಪವಾಗಿರಬೇಕು’ ಎಂಬುದಾಗಿ ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಷನ್‌ ಕಾರ್ಯದರ್ಶಿ ರಾಜೇಶ್‌, ಕ್ರೀಡಾ ಮಾರ್ಗದರ್ಶಕ ಹಾಗೂ ನಿವೃತ್ತ ಯೋಧ ಜಗನಾಥನ್‌ ಎಚ್‌. ದೂರು ನೀಡಿದ್ದಾರೆ.

2023ರ ಜನವರಿ 26ರಂದು ಗಣರಾಜ್ಯೋತ್ಸವ ದಿನ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಶಂಕುಸ್ಥಾಪನೆ ನೆರವೇರಿಸಿದ್ದರು. ‘ನಿಗದಿಪಡಿಸಿದ 9 ತಿಂಗಳ ಸಮಯದೊಳಗೆ ಕಾಮಗಾರಿ ಮುಗಿಸದಿದ್ದರೆ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂಬ ಮುಚ್ಚಳಿಕೆಯನ್ನು ಗುತ್ತಿಗೆದಾರರಿಂದ ಬರೆಸಿಕೊಳ್ಳಲಿದ್ದೇವೆ’ ಎಂದಿದ್ದರು. ಆದರೆ, 9 ತಿಂಗಳು ಹೋಗಿ 18 ತಿಂಗಳು ಆಗಿದೆ.

‘ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಕೆ ತಾಂತ್ರಿಕ ವಿಚಾರ. ಕೆಲವರು ಮಾಹಿತಿ ಇಲ್ಲದೆ, ತಾಂತ್ರಿಕ ವಿಚಾರ ಗೊತ್ತಿಲ್ಲದೇ ಲೋಪ ಇದೆ ಎನ್ನುತ್ತಾರೆ. ಗುತ್ತಿಗೆದಾರರನ್ನು ಕೇಳಿದರೆ ಎಲ್ಲವೂ ಸರಿ ಇದೆ, ತಾಂತ್ರಿಕ ತಜ್ಞರ ಸಲಹೆ ಪಡೆದುಕೊಂಡೇ ಕೆಲಸ ಮಾಡಿದ್ದೇವೆ, ಬೇರೆ ಕಡೆಯೂ ಅಳವಡಿಸಿದ್ದೇವೆ ಎಂಬುದಾಗಿ ಹೇಳುತ್ತಾರೆ. ಆದಾಗ್ಯೂ ಕೆಲ ಲೋಪಗಳು ಕುರಿತು ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಗೆ ಬಂದಿರುವ ದೂರನ್ನು ಗುತ್ತಿಗೆದಾರರಿಗೆ ರವಾನಿಸಿದ್ದು, ಮತ್ತೊಮ್ಮೆ ಪರಿಶೀಲಿಸಿ ಸರಿಪಡಿಸುವಂತೆ ಕೇಳಿಕೊಂಡಿದ್ದೇವೆ. ಅದಕ್ಕೆ ಒಪ್ಪಿಕೊಂಡಿದ್ದಾರೆ’ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್‌.ಗೀತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋಲಾರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣ 
ಒಂದೂವರೆ ವರ್ಷವಾದರೂ ಪೂರ್ಣಗೊಳ್ಳದ ಸಿಂಥೆಟಿಕ್‌ ಟ್ರ್ಯಾಕ್‌ ಕ್ರೀಡಾ ಸಂಸ್ಥೆ, ಕ್ರೀಡಾ ಮಾರ್ಗದರ್ಶಕರು, ಕ್ರೀಡಾಪಟುಗಳಿಂದ ದೂರು ಕೆಲ ಅಂಕಣಗಳನ್ನು ಕಿತ್ತು ತಾಂತ್ರಿಕವಾಗಿ ಮರು ಅಳವಡಿಕೆಗೆ ಸಲಹೆ
ಗುತ್ತಿಗೆದಾರರ ಗಮನಕ್ಕೆ ತರಲಾಗಿದೆ
ಟ್ರ್ಯಾಕ್‌ ಸಂಬಂಧ ಕೆಲವೊಂದು ತಾಂತ್ರಿ ಲೋಪಗಳಾಗಿರುವ ಬಗ್ಗೆ ಕ್ರೀಡಾಪಟುಗಳು ಕ್ರೀಡಾ ಪರಿಣತರು ಗಮನಕ್ಕೆ ತಂದಿದ್ದಾರೆ. ಗುತ್ತಿಗೆದಾರರಿಗೆ ಈ ವಿಚಾರ ಮುಟ್ಟಿಸಲಾಗಿದ್ದು ಲೋಪವಿದ್ದರೆ ಉದ್ಘಾಟನೆಯೊಳಗೆ ಸರಿಪಡಿಸುವಂತೆ ಹೇಳಿದ್ದೇವೆ. ಪರಿಶೀಲನೆ ನಡೆಸಿ ಸರಿಪಡಿಸುವುದಾಗಿ ಹೇಳಿದ್ದಾರೆ. ಟ್ರ್ಯಾಕ್‌ ಮೇಲೆ ನೀರು ನಿಲ್ಲುತ್ತಿದ್ದ ಸಮಸ್ಯೆಯನ್ನು ಎರಡು ದಿನಗಳ ಹಿಂದೆ ಬಂದು ಸರಿಪಡಿಸಿದ್ದಾರೆ. ಆರ್‌.ಗೀತಾ ಸಹಾಯಕ ನಿರ್ದೇಶಕಿ ಕ್ರೀಡಾ ಇಲಾಖೆ ಕೋಲಾರ
₹ 8.55 ಕೋಟಿ ವೆಚ್ಚದ ಕಾಮಗಾರಿ
ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣದ ಕಾಮಗಾರಿಯನ್ನು ₹ 8.55 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಎಂದು ಕ್ರೀಡಾ ಇಲಾಖೆ ಆರಂಭದಲ್ಲಿ ಮಾಹಿತಿ ನೀಡಿತ್ತು. ಮೂರು ಕಾಮಗಾರಿಗಳನ್ನು ಪ್ರತ್ಯೇಕವಾಗಿ ಕೊಡಲಾಗಿತ್ತು. ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಕೆಗೆ ಬೇಸ್‌ ಹಾಗೂ ಚರಂಡಿ ಕಾಮಗಾರಿಯನ್ನು ₹ 2.07 ಕೋಟಿಗೆ ಟೆಂಡರ್‌ ನೀಡಲಾಗಿತ್ತು. ಟ್ರ್ಯಾಕ್‌ ಮಧ್ಯೆ ನೈಸರ್ಗಿಕ ಹುಲ್ಲು ಹಾಸಿನ ಫುಟ್‌ಬಾಲ್ ಅಂಕಣ ನೀರಿನ ತೊಟ್ಟಿ ಚೈನ್‌ ಲಿಂಕ್‌ ಫೆನ್ಸಿಂಗ್‌ ನಿರ್ಮಾಣ ಕಾಮಗಾರಿಯನ್ನು ₹ 2.41 ಕೋಟಿ ಮೊತ್ತಕ್ಕೆ ಟೆಂಡರ್‌ ಕೊಡಲಾಗಿತ್ತು. ₹ 5.60 ಕೋಟಿ ವೆಚ್ಚದಲ್ಲಿ 400 ಕಿ.ಮೀ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸುವ ಕಾಮಗಾರಿಯನ್ನು ಹೈದರಾಬಾದ್‌ನ ಕಂಪನಿಯೊಂದಕ್ಕೆ ನೀಡಲಾಗಿತ್ತು. 1 ಲಕ್ಷ ಲೀಟರ್‌ ನೀರು ಹಿಡಿದಿಡುವ ಸಾಮರ್ಥ್ಯದ ತೊಟ್ಟಿ ನಿರ್ಮಾಣ 109.35 x70.96 ಮೀಟರ್‌ ವಿಸ್ತೀರ್ಣದ ಫುಟ್‌ಬಾಲ್‌ ಅಂಕಣ ನಿರ್ಮಾಣ ಅಥ್ಲೆಟಿಕ್‌ ಟ್ರ್ಯಾಕ್‌ ಜೊತೆಗೆ ಲಾಂಗ್‌ ಜಂಪ್‌ ಸ್ಟೀಪಲ್‌ ಚೇಸ್‌ ಅಂಕಣ ನಿರ್ಮಾಣ ಹಾಗೂ ಕ್ರೀಡಾಂಗಣಕ್ಕೆ 10 ಫ್ಲಡ್‌ಲೈಟ್‌ ಅಳವಡಿಕೆಯ ಯೋಜನೆ ಹೊಂದಲಾಗಿತ್ತು. ಗುತ್ತಿಗೆದಾರರೇ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ವಹಣೆ ಮಾಡುವುದು ಒಪ್ಪಂದದ ಸಾರ. ಸಿಂಥೆಟಿಕ್‌ ಟ್ರ್ಯಾಕ್‌ ಸಾಮಗ್ರಿಯನ್ನು ಜರ್ಮನಿಯಿಂದ ತರಿಸಲಾಗಿದೆ ಎಂಬುದು ಇಲಾಖೆಯ ಹೇಳಿಕೆ. ಇಲಾಖೆಯ ಕೇಂದ್ರ ಕಚೇರಿ ಮೂಲಕ ಟೆಂಡರ್‌ ನೀಡಿ ಕಾಮಗಾರಿ ಕೈಗೊಂಡಿದ್ದು ಖರ್ಚು ವೆಚ್ಚದ ಬಗ್ಗೆ ತಮಗೆ ಮಾಹಿತಿ ಇಲ್ಲವೆಂದು ಕ್ರೀಡಾ ಇಲಾಖೆಯ ಸ್ಥಳೀಯ ಅಧಿಕಾರಿಗಳು ಹೇಳುತ್ತಾರೆ.
ಇನ್ನೂ ಎಷ್ಟು ದಿನ ಕಾಯಬೇಕು?
ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲೇ ಇರುವ ಜಿಲ್ಲೆಯ ಯಾವುದೇ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಸೌಲಭ್ಯ ಇಲ್ಲ. ರಾಜ್ಯ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವವರು ಸಿಂಥೆಟಿಕ್‌ ಟ್ರ್ಯಾಕ್‌ನಲ್ಲೇ ಅಭ್ಯಾಸ ನಡೆಸಬೇಕು. ಅಂತರ ಜಿಲ್ಲಾ ಮಟ್ಟದ ಕ್ರೀಡಾಕೂಟ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲೇ ನಡೆಯಬೇಕು. ಈವರೆಗೆ ಸೌಲಭ್ಯದ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಯಾವುದೇ ಪ್ರಮುಖ ಕ್ರೀಡಾಕೂಟ ನಡೆಸಲು ಸಾಧ್ಯವಾಗಿಲ್ಲ. ಈಗ ಟ್ರ್ಯಾಕ್‌ ಅಳವಡಿಕೆ ಬಹುತೇಕ ಕೊನೆಗೊಂಡಿದ್ದರೂ ಕೆಲ ಲೋಪ ದೋಷಗಳು ಕಾಣಿಸುತ್ತಿವೆ. ಈಗಾಗಲೇ ಒಂದೂವರೆ ವರ್ಷವಾಗಿದ್ದು ಬಳಕೆಗೆ ಇನ್ನೂ ಎಷ್ಟು ದಿನ ಕಾಯಬೇಕು ಎಂಬುದು ಅಥ್ಲೀಟ್‌ಗಳ ಪ್ರಶ್ನೆಯಾಗಿದೆ.
ಆಗಸ್ಟ್‌ 15ರಂದು ಉದ್ಘಾಟನೆ
ಸ್ವಾತಂತ್ರ್ಯೋತ್ಸವ ದಿನವಾದ ಆಗಸ್ಟ್‌ 15ರಂದು ಕ್ರೀಡಾಂಗಣದ ನೂತನ ಟ್ರ್ಯಾಕ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಚಾಲನೆ ನೀಡಲಿದ್ದಾರೆ. ಈ ಸಂಬಂಧ ಸಿದ್ಧತೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚನೆ ನೀಡಿದ್ದಾರೆ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್‌.ಗೀತಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.