ADVERTISEMENT

ಕೆಜಿಎಫ್ | ರಸ್ತೆಯಲ್ಲೇ ಸಂಸದ–ಶಾಸಕಿ ಮಾತಿನ ಜಟಾಪಟಿ

ರಸ್ತೆ ಒತ್ತುವರಿ ತೆರವು ಸಂಬಂಧ ಬಿಜೆಪಿ, ಕಾಂಗ್ರೆಸ್‌ ಘರ್ಷಣೆ l ನಗರದಲ್ಲಿ ಕೆಲ ಕಾಲ ಉದ್ರಿಕ್ತ ವಾತಾವರಣ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2023, 5:02 IST
Last Updated 17 ಫೆಬ್ರುವರಿ 2023, 5:02 IST
ಕೆಜಿಎಫ್ ಆಂಡರಸನ್‌ ಪೇಟೆಯಲ್ಲಿ ರಸ್ತೆ ವಿಸ್ತರಣೆ ಸಂಬಂಧವಾಗಿ ಗುರುವಾರ ಸಂಸದ ಎಸ್.ಮುನಿಸ್ವಾಮಿ, ಶಾಸಕಿ ರೂಪಕಲಾ ಅವರಿಗೆ ಒತ್ತುವರಿ ತೆರವು ಬಗ್ಗೆ ವಿವರಣೆ ನೀಡಿದರು(ಎಡಚಿತ್ರ). ಆಂಡರಸನ್‌ಪೇಟೆಯಲ್ಲಿ ಸಂಸದ ಮತ್ತು ಶಾಸಕಿ ಮುಂಭಾಗದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಾತಿನ ಚಕಮಕಿ ನಡೆಸುತ್ತಿರುವುದು
ಕೆಜಿಎಫ್ ಆಂಡರಸನ್‌ ಪೇಟೆಯಲ್ಲಿ ರಸ್ತೆ ವಿಸ್ತರಣೆ ಸಂಬಂಧವಾಗಿ ಗುರುವಾರ ಸಂಸದ ಎಸ್.ಮುನಿಸ್ವಾಮಿ, ಶಾಸಕಿ ರೂಪಕಲಾ ಅವರಿಗೆ ಒತ್ತುವರಿ ತೆರವು ಬಗ್ಗೆ ವಿವರಣೆ ನೀಡಿದರು(ಎಡಚಿತ್ರ). ಆಂಡರಸನ್‌ಪೇಟೆಯಲ್ಲಿ ಸಂಸದ ಮತ್ತು ಶಾಸಕಿ ಮುಂಭಾಗದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಾತಿನ ಚಕಮಕಿ ನಡೆಸುತ್ತಿರುವುದು   

ಕೆಜಿಎಫ್: ರಸ್ತೆ ವಿಸ್ತರಣೆ ಕಾಮಗಾರಿ ಹಾಗೂ ಒತ್ತುವರಿ ತೆರವು ಸಂಬಂಧ ಸಂಸದ ಎಸ್.ಮುನಿಸ್ವಾಮಿ ಮತ್ತು ಶಾಸಕಿ ಎಂ.ರೂಪಕಲಾ ನಡುವೆ ನಡೆದ ವಾಗ್ವಾದ ಬಿಜೆಪಿ– ಕಾಂಗ್ರೆಸ್‌ ಕಾರ್ಯರ್ತರ ಘರ್ಷಣೆ ಕಾರಣವಾಯಿತು. ಇದರಿಂದ ಕೆಲ ಕಾಲ ನಗರದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.

ಗುರುವಾರ ಸಲ್ಡಾನ ವೃತ್ತದಿಂದ ಆಂಡರಸನ್‌ಪೇಟೆ ವರೆವಿಗೆ ಲೋಕೋಪಯೋಗಿ ಇಲಾಖೆಯ ರಸ್ತೆ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಕೆಲವು ಕಡೆ ಪ್ರಭಾವಿಗಳ ಶಾಲೆಗಳು ರಸ್ತೆ ಒತ್ತುವರಿ ಮಾಡಿಕೊಂಡಿದ್ದು, ತೆರವಿಗೆ ಅಡ್ಡಿ ಮಾಡುತ್ತಿವೆ ಎಂಬ ದೂರು ಕೇಳಿ ಬಂದಿತ್ತು.

ಸಂಸದ ಎಸ್.ಮುನಿಸ್ವಾಮಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಒತ್ತುವರಿ ತೆರವಿಗೆ ಸೂಚಿಸಿದರು. ಸ್ಥಳಕ್ಕೆ ಬಂದ ಶಾಸಕಿ ರೂಪಕಲಾ ಅವರು ಸಂಸದರ ನಡೆಯ ಬಗ್ಗೆ ಅಸಮಾಧಾನ ಹೊರ ಹಾಕಿದರು.

ADVERTISEMENT

ಒಂದು ಹಂತದಲ್ಲಿ ವಾದ, ಪ್ರತಿವಾದ ತೀವ್ರಗೊಂಡಿತು.ಒಂದು ಹಂತದಲ್ಲಿ ಆಂಡರಸನ್‌ಪೇಟೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತಿನ ಚಕಮಕಿ ನಡೆಯಿತು. ಕೈ ಕೈ ಮಿಲಾಯಿಸುವ ಹಂತ
ತಲುಪಿತು.

ಒಂದೆಡೆ ಕ್ಷೇತ್ರದ ಶಾಸಕಿ, ಇನ್ನೊಂದೆಡೆ ಆಡಳಿತ ಪಕ್ಷದ ಸಂಸದ. ಇಬ್ಬರ ನಡುವೆ ಅಧಿಕಾರಿಗಳು ಹೈರಾಣಾದರು. ಪೊಲೀಸರು ಎರಡೂ ಕಡೆಯವನ್ನು ಸಮಾಧಾನ ಮಾಡಿದರು.

ಸಲ್ಡಾನ ವೃತ್ತದ ಬಳಿ ನಗರಸಭೆಯ ಮಾಜಿ ಅಧ್ಯಕ್ಷರೊಬ್ಬರ ಕುಟುಂಬದವರು ನಿರ್ಮಿಸುತ್ತಿರುವ ಬೃಹತ್ ಕಟ್ಟಡದ ಮುಂಭಾಗ ಪಾದಚಾರಿ ರಸ್ತೆ ಅತಿಕ್ರಮಿಸಿಕೊಂಡು ಶೀಟ್ ಹಾಕಲಾಗಿತ್ತು. ಇದನ್ನು ತೆರವಿಗೆ ಸಂಸದ ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೆ ಆಕ್ಷೇಪಿಸಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಫ್ರಾನ್ಸಿಸ್, ‘ಸೀನ್ ತೋರಿಸಲು ಬಂದಿದ್ದೀರಾ’ ಎಂದು ಏರುಧ್ವನಿಯಲ್ಲಿ ಸಂಸದರನ್ನು ಪ್ರಶ್ನಿಸಿದರು. ಆಗ ಪೊಲೀಸರು ಅವರನ್ನು ಬಲವಂತವಾಗಿ ಕರೆದೊಯ್ದರು. ಬಳಿಕ ಜೆಸಿಬಿ ಮೂಲಕ ಒತ್ತುವರಿ ತೆರವುಗೊಳಿಸಲಾಯಿತು.

ಸೂಸೈಪಾಳ್ಯದ ಚರ್ಚ್ ಬಳಿ ಐದು ಅಡಿ ಒತ್ತುವರಿ ಆಗಿದ್ದು, ಚರ್ಚ್‌ ಫಾದರ್‌ ಅವರೊಂದಿಗೆ ಚರ್ಚಿಸಿ ಒತ್ತುವರಿ ತೆರವಿಗೆ ಸೂಚಿಸಲಾಯಿತು.

ಆಂಡರಸನ್‌ಪೇಟೆಯಲ್ಲಿ ರಸ್ತೆಯಲ್ಲಿದ್ದ ಅಕ್ರಮ ಎರಡು ಮಾಂಸದ ಅಂಗಡಿಗಳನ್ನು ತೆರವು ಮಾಡಲಾಯಿತು. ಮಾಂಸದ ಅಂಗಡಿಯಲ್ಲಿ ತಯಾರಿದ್ದ ಮಾಂಸದೂಟಕ್ಕೆ ₹10 ಸಾವಿರ ನೀಡಿದ ಸಂಸದ ಮುನಿಸ್ವಾಮಿ, ಊಟವನ್ನು ಜನರಿಗೆ ಹಂಚಿ ಅಂಗಡಿ ತೆರವು ಮಾಡಿಸಿದರು.

ಕಾಂಗ್ರೆಸ್ ಸದಸ್ಯೆ ಶಾಲಿನಿ ನಂದಕುಮಾರ್ ಅವರು ಕೂಡ ಫುಟ್‌ಪಾತ್‌ ಅತಿಕ್ರಮಿಸಿಕೊಂಡಿದ್ದು, ಅದನ್ನು ಕೂಡ ತೆರವು ಮಾಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಸದಸ್ಯೆಯ ಮನೆಗೆ ಭೇಟಿ ನೀಡಿದ ಸಂಸದ, ಅಧಿಕಾರಿಗಳ ಸಮ್ಮುಖದಲ್ಲಿ ಅಳೆತೆ ನಡೆಸಿ ಸುಮಾರು ಐದು ಅಡಿ ಒತ್ತುವರಿಯಾಗಿರುವುದು ಪತ್ತೆ ಮಾಡಿದರು.

ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಮತ್ತು ನಗರಸಭೆ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಮಧ್ಯ ಪ್ರವೇಶಿಸಿ ಸ್ವಲ್ಪ ಕಾಲಾವಕಾಶ ಕೊಡುವಂತೆ ಕೋರಿದರು. ‘ನ್ಯಾಯ ಎಲ್ಲರಿಗೂ ಒಂದೇ ಇರಬೇಕು. ಬಡವರಿಗೆ ಒಂದು ಶ್ರೀಮಂತರಿಗೆ ಒಂದು ಆಗಲ್ಲ’ ಎಂದು ಸಂಸದರು ಹೇಳಿದರು. ಮೂರು ದಿನದೊಳಗೆ ತೆರವು ಮಾಡುವುದಾಗಿ, ಅದರ ಜವಾಬ್ದಾರಿಯನ್ನು ತಾವು ತೆಗೆದುಕೊಳ್ಳುವುದಾಗಿ ನಗರಸಭೆ ಅಧ್ಯಕ್ಷ ವಾಗ್ದಾನ ನೀಡಿದ ನಂತರ ಕಾಲಾವಕಾಶ ನೀಡಲಾಯಿತು.

ಬಡವರ ಅಂಗಡಿ ಖಾಲಿ ಮಾಡಿಸುವುದು ಸರಿಯಲ್ಲ: ತೆರವು ಕಾರ್ಯಾಚರಣೆ ಸ್ಥಳಕ್ಕೆ ಆಗಮಿಸಿದ ಶಾಸಕಿ ಎಂ.ರೂಪಕಲಾ ಅವರು, ಸಂಸದ ಮುನಿಸ್ವಾಮಿ ನಡವಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ನಾನು ಕಷ್ಟ ಪಟ್ಟು ಸರ್ಕಾರದಿಂದ ₹25 ಕೋಟಿ ಮಂಜೂರು ಮಾಡಿಸಿಕೊಂಡು ರಸ್ತೆ ನಿರ್ಮಾಣ ಮಾಡಿಸುತ್ತಿದ್ದೇನೆ. ಸೂಸೈಪಾಳ್ಯದ ಚರ್ಚ್ ವರೆವಿಗೂ ಮಾತ್ರ ಜೋಡಿ ರಸ್ತೆ ಇದೆ. ಉಳಿದಂತೆ ರಸ್ತೆ ನಿರ್ಮಾಣ ಮಾತ್ರ ಆಗುತ್ತಿದೆ. ಯಾವುದನ್ನೂ ತಿಳಿದುಕೊಳ್ಳದೆ ಬಡವರ ಅಂಗಡಿಗಳನ್ನು ಖಾಲಿ ಮಾಡಿಸುತ್ತಿದ್ದೀರಿ. ಯಾರದೋ ಮಾತನ್ನು ಕೇಳಿಕೊಂಡು ಜನರ ಸಂತೋಷ ಕಸಿದುಕೊಳ್ಳುತ್ತಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒತ್ತುವರಿ ತೆರವುಗೊಳಿಸಬಾರದೇ?: ‘ಇದು ಸರ್ಕಾರದಿಂದ ಬಂದ ಅನುದಾನ. ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು, ರಸ್ತೆ ವಿಸ್ತರಣೆಗೆ ತೊಂದರೆಯಾಗುತ್ತಿರುವುದನ್ನು ಹಾಗೆಯೇ ಬಿಡಬೇಕು ಎನ್ನುವುದು ನಿಮ್ಮ ವಾದವೇ ಎಂದು ಪ್ರಶ್ನಿಸಿದರು. ಆಂಡರಸನ್ ಪೇಟೆಯ ಮೇಲ್ಭಾಗದಿಂದ ಬರುವ ಚರಂಡಿ ನೀರು ಸಮರ್ಪಕವಾಗಿ ಹೋಗುತ್ತಿಲ್ಲ. ಅದನ್ನು ನಿರ್ಮಾಣ ಮಾಡಬೇಕು. ಅದಕ್ಕೆ ಹಣವಿಲ್ಲ ಎಂದರೆ ಸರ್ಕಾರದಿಂದ ಬಿಡುಗಡೆ ಮಾಡಿಸೋಣ. ರಸ್ತೆ ಕಾಮಗಾರಿ ನಮ್ಮ ಮನೆ ಕೆಲಸ ಅಲ್ಲ. ಸಾರ್ವಜನಿಕರ ಕೆಲಸ’ ಎಂದು ಸಂಸದ ಮುನಿಸ್ವಾಮಿ ತಿರುಗೇಟು ನೀಡಿದರು.

ಇನ್ನೆಷ್ಟು ದಿನ ಅರಾಜಕತೆ?: ಬೆಮಲ್ ನಿಂದ ನಗರದವರೆವಿಗೂ ನಡೆಯುತ್ತಿರುವ ಕಾಮಗಾರಿ ಒತ್ತುವರಿ ತೆರವು ಮಾಡಲಿಲ್ಲ. ಕೋರ್ಟ್ ಮುಂಭಾಗದಲ್ಲಿ ನಡೆದ ರಸ್ತೆ ವಿಸ್ತರಣೆ ಕಾಮಗಾರಿ ಬಗ್ಗೆ ಸಹಕಾರ ನೀಡಲಿಲ್ಲ. ಈಗ ಇಪ್ಪತ್ತು ಜನರ ಮಾತು ಕೇಳಿಕೊಂಡು ಸಂಸದರು ಜೀವನೋಪಾಯಕ್ಕಾಗಿ ಇಟ್ಟುಕೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದಾರೆ. ಇನ್ನು ಎಷ್ಟು ದಿನ ಈ ಅರಾಜಕತೆ ನಡೆಯುತ್ತದೆಯೋ ನೋಡೋಣ ಎಂದು ಶಾಸಕಿ ಎಂ.ರೂಪಕಲಾ ಸಂಸದರ ಮೇಲೆ ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.