ADVERTISEMENT

ಕೃಷಿ ಹೊಂಡದಲ್ಲಿ ತೆರೆದ ಜಲದ ಕಣ್ಣು!

ಪನಸಮಾಕನಹಳ್ಳಿ ರೈತ ವೆಂಕಟೇಶಗೌಡರ ತೋಟದಲ್ಲಿ ನೀರು ಸಂಗ್ರಹ

ಆರ್.ಚೌಡರೆಡ್ಡಿ
Published 2 ಏಪ್ರಿಲ್ 2021, 6:53 IST
Last Updated 2 ಏಪ್ರಿಲ್ 2021, 6:53 IST
ಪನಸಮಾಕನಹಳ್ಳಿ ಹೊರವಲಯದ ಮಾವಿನ ತೋಟವೊಂದರಲ್ಲಿ ನಿರ್ಮಿಸಿರುವ ಕೃಷಿ ಹೊಂಡದಲ್ಲಿ ಶೇಖರಣೆಯಾಗಿರುವ ನೀರು
ಪನಸಮಾಕನಹಳ್ಳಿ ಹೊರವಲಯದ ಮಾವಿನ ತೋಟವೊಂದರಲ್ಲಿ ನಿರ್ಮಿಸಿರುವ ಕೃಷಿ ಹೊಂಡದಲ್ಲಿ ಶೇಖರಣೆಯಾಗಿರುವ ನೀರು   

ಶ್ರೀನಿವಾಸಪುರ: ತಾಲ್ಲೂಕಿನ ಪನಸಮಾಕನಹಳ್ಳಿ ಹೊರವಲಯದ ಮಾವಿನ ತೋಟವೊಂದರಲ್ಲಿ ನಿರ್ಮಿಸಿರುವ ಕೃಷಿ ಹೊಂಡದಲ್ಲಿ ಆಶ್ಚರ್ಯಕರವಾಗಿ ನೀರು ಬರುತ್ತಿದೆ.

ಗ್ರಾಮದ ರೈತ ವೆಂಕಟೇಶಗೌಡ ಮುಂಗಾರಿನಲ್ಲಿ ಮಳೆ ನೀರು ಸಂಗ್ರಹ ಮಾಡುವ ಉದ್ದೇಶದಿಂದ 40 ಅಡಿ ಉದ್ದ, 25 ಅಡಿ ಅಗಲ ಹಾಗೂ 12 ಅಡಿ ಆಳದ ಕೃಷಿ ಹೊಂಡ ನಿರ್ಮಿಸತೊಡಗಿದರು. ಜೆಸಿಬಿ ಯಂತ್ರದ ನೆರವಿನಿಂದ ನೆಲವನ್ನು ತೋಡಿ ಹಳ್ಳ ಮಾಡಿದರು. ನಿರ್ಮಾಣದ ಅಂತಿಮ ಹಂತ ಮುಗಿಯುತ್ತಿದ್ದಂತೆ ನೆಲದಿಂದ ನೀರು ಚಿಮ್ಮತೊಡಗಿತು.

ನೋಡುತ್ತಿದಂತೆ ನೆಲದಲ್ಲಿ ತೆರೆದ ಜಲದ ಕಣ್ಣಿನಿಂದ ಬೆಳ್ಳಗೆ ಹಾಲಿನಂತೆ ಕಾಣುತ್ತಿದ್ದ ಅಂತರ್ಜಲ ಚಿಮ್ಮತೊಡಗಿತು. ಸ್ವಲ್ಪ ಹೊತ್ತಿನಲ್ಲಿಯೇ ವಿಶಾಲವಾದ ಹಳ್ಳದಲ್ಲಿ ಸುಮಾರು 5 ಅಡಿ ನೀರು ತುಂಬಿಕೊಂಡಿತು. ಅನಿವಾರ್ಯವಾಗಿ ಜೆಸಿಬಿ ಯಂತ್ರವನ್ನು ಹೊರಗೆ ತೆಗೆದು ಕೆಲಸ ನಿಲ್ಲಿಸಲಾಯಿತು. ಈಗ ಮಳೆ ನೀರು ಸಂಗ್ರಹಿಸಲೆಂದು ನಿರ್ಮಿಸಿದ ಹೊಂಡದಲ್ಲಿ ನೀರು ತುಂಬಿಕೊಳ್ಳುತ್ತಿದೆ.

ADVERTISEMENT

‘ಈ ವಿದ್ಯಮಾನ ನಿರೀಕ್ಷಿಸಿರಲಿಲ್ಲ. ಮಳೆ ನೀರನ್ನು ಸಂಗ್ರಹಿಸಿ ಟೊಮೆಟೊ ಬೆಳೆಯಲು ನಿರ್ಧರಿಸಲಾಗಿತ್ತು. ಈಗ ಹಳ್ಳದಲ್ಲಿ ನೀರು ತುಂಬಿ ಕೊಂಡಿದೆ. ನೀರನ್ನು ಎತ್ತಿ ತೋಟಕ್ಕೆ ಹರಿಸಲು ಅಗತ್ಯವಾದ ಪಂಪ್‌ ಸೆಟ್ ತಂದಿಡಲಾಗಿದೆ. ನೀರನ್ನು ಬಳಸಿಕೊಂಡು ತರಕಾರಿ ಬೆಳೆಯಲಾಗುವುದು’ ಎಂದು ರೈತ ವೆಂಕಟೇಶಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಪನಸಮಾಕನಹಳ್ಳಿ ಸುತ್ತಮುತ್ತ 1,800 ಅಡಿ ಆಳದ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಇಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸಾಮಾನ್ಯ. ಅಂಥದ್ದರಲ್ಲಿ ಕೇವಲ 12 ಅಡಿ ಆಳದಲ್ಲಿ ನೀರು ಸಿಕ್ಕಿರುವುದು ಅಪರೂಪದ ವಿದ್ಯಮಾನ. ಕೆಲವರು ನೀರನ್ನು ಕುಡಿದುಸಂತೋಷಪಡುತ್ತಾರೆ.

‘ಹಿಂದೆ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ತಲಪರಗೆಗಳು ಇದ್ದವು. ಅವುಗಳಿಂದ ಅಂತರ್ಜಲ ತಾನೇ ತಾನಾಗಿ ಹರಿಯುತ್ತಿತ್ತು. ಕಾಲಾಂತರದಲ್ಲಿ ಅಂಥ ನೈಸರ್ಗಿಕ ಜಲದ ಕಣ್ಣುಗಳಲ್ಲಿ ಹೂಳು ತುಂಬಿ ಹಾಳಾದವು. ಕಾಲ ಉರುಳಿದಂತೆ ಅವುಗಳ ಸ್ಥಳ ಮಾಹಿತಿಯೂ ಇಲ್ಲವಾಯಿತು. ಅಂಥ ತಲಪರಗೆಯೊಂದು ಪನಸ ಮಾಕನಹಳ್ಳಿ ಗ್ರಾಮದ ಸಮೀಪ ತೆರೆದು ಕೊಂಡಿರಬಹುದು’ ಎಂಬುದು ವಿಜ್ಞಾನ ಲೇಖಕ ಎಚ್.ಎ. ಪುರುಷೋತ್ತಮರಾವ್ ಅವರ ಅಭಿಪ್ರಾಯ.

‘ಈಗ ನಿರ್ಮಿಸಲಾಗಿರುವ ಹೊಂಡದಲ್ಲಿ ಹೂಳು ತುಂಬದಂತೆ ನೋಡಿಕೊಳ್ಳಬೇಕು. ಹೂಳು ತುಂಬಿಕೊಂಡಲ್ಲಿ ತೆರೆದಿರುವ ಜಲದ ಕಣ್ಣು ಮತ್ತೆ ಮುಚ್ಚಿಹೋಗುವ ಸಾಧ್ಯತೆ ಇರುತ್ತದೆ. ಹೊಂಡದಿಂದ ನೀರನ್ನು ಹೊರಗೆ ತೆಗೆದಾಗ ಮಾತ್ರ ನೀರಿನ ಲಭ್ಯತೆ ಪ್ರಮಾಣ ತಿಳಿಯುತ್ತದೆ’ ಎನ್ನುತ್ತಾರೆ ಕೃಷಿಕ ರಾಮಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.