ಕೋಲಾರ: ‘ತಿಗಳ ಸಮಾಜದವರು ಸ್ವಾವಲಂಬನೆಯಿಂದ ಜೀವಿಸುತ್ತಿದ್ದು, ರಾಜ್ಯದಾದ್ಯಂತ ಹಂಚಿ ಹೋಗಿರುವ ನಾವು ಸಂಘಟಿತರಾಗಲು ಮುಂದಾಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಸಲಹೆ ನೀಡಿದರು.
ಜಿಲ್ಲಾ ತಿಗಳ ಜನಾಂಗ ಸಮನ್ವಯ ಸಮಿತಿಯಿಂದ ಇನ್ನಲಿನ ಸಹ್ಯಾದ್ರಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ತಿಗಳ ಸಮುದಾಯವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗಿಲ್ಲ. ಶೋಷಣೆಗೆ ಒಳಗಾಗಿರುವ ಜನಾಂಗಕ್ಕೆ ಸಿಗಬೇಕಾದ ಸೌಲಭ್ಯ ಕಲ್ಪಿಸಿದರೆ ಸಾಕು. ನಮ್ಮಿಂದ ಅನೇಕ ವಿದ್ಯೆ ಕಲಿತಿರುವ ಬೇರೆ ಸಮುದಾಯದವರು ಸ್ವಾಭಿಮಾನಕ್ಕೆ ಹೆಸರಾದ ನಮ್ಮನ್ನೂ ಕೈಬಿಡದೆ ಜತೆಯಲ್ಲಿ ಕರೆದೊಯ್ಯಬೇಕು’ ಎಂದು ಹೇಳಿದರು.
‘ಸಮುದಾಯದ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ₨ 20 ಕೋಟಿ ಪ್ರತ್ಯೇಕ ಬಜೆಟ್ ಮೀಸಲು ಇಡಿಸಿದೆ, ಇದನ್ನು ಮುಂದುವರೆಸಲು ಸಮುದಾಯದಲ್ಲಿನ ಬಿಜೆಪಿ ಮುಖಂಡರು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿ ಮಂಜೂರು ಮಾಡಿಸಬೇಕು’ ಎಂದು ಒತ್ತಾಯಿಸಿದರು.
ರಾಜ್ಯ ತಿಗಳ ಜನಾಂಗ ಮಹಾಸಭಾ ಅಧ್ಯಕ್ಷ ಎಚ್.ಸುಬ್ಬಣ್ಣ ಮಾತನಾಡಿ, ‘ಜಿಲ್ಲೆಗೆ ಒಬ್ಬರನ್ನು ಸಮುದಾಯದ ವ್ಯಕ್ತಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.
‘ರಾಜ್ಯದ ವಿವಿಧ ಭಾಗಗಳಲ್ಲಿ ಸಮುದಾಯದವರು ವಾಸವಿದ್ದು, ಚುನಾವಣೆ ಸಂದರ್ಭದಲ್ಲಿ ನಿರ್ಣಾಯಕ ವಹಿಸಿ ಬೇರೆ ಸಮುದಾಯದವರ ಜತೆ ಕೈಜೋಡಿಸಿಕೊಂಡು ಸಮುದಾಯದವರನ್ನು ಗೆಲ್ಲಿಸಿಕೊಳ್ಳಬೇಕು. ಇದಕ್ಕೆ ಇತರೆ ರಾಜಕೀಯ ಪಕ್ಷಗಳಲ್ಲಿ ಇರುವವರೆಲ್ಲ ಒಗ್ಗಟ್ಟಾಗಬೇಕು’ ಎಂದು ತಿಳಿಸಿದರು.
‘ಕೋಲಾರ ಜಿಲ್ಲೆಯಲ್ಲೂ ರಾಜಕೀಯ, ಶೈಕ್ಷಣಿ, ಸಾಮಾಜಿ, ಆರ್ಥಿಕವಾಗಿ ಅಭಿವೃದ್ಧಿಹೊಂದಿರುವವರು ಸಮುದಾಯದಲ್ಲಿ ಇದ್ದಾರೆ. ಎಲ್.ಎ.ಮಂಜುನಾಥ್ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದರು, ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಶಕ್ತಿ ಪ್ರದರ್ಶಿಸಬೇಕು’ ಎಂದು ಹೇಳಿದರು.
‘ಹಿಂದೆ ಸಮುದಾಯ ವಿದ್ಯಾರ್ಥಿಗಳಿಗೆ ಅಗತ್ಯ ಸಹಕಾರ ದೊರೆಯದ ಕಾರಣ ಮುಂದೆ ಬರಲು ಸಾಧ್ಯವಾಗಿಲಿಲ್ಲ. ಈಗ ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ವಿದ್ಯಾಭ್ಯಾಸದ ಜತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಮುಂದಾಗಬೇಕು’ ಎಂದು ಹೇಳಿದರು.
‘ಕರಗ, ತೋಟದ ಕೆಲಸದಿಂದ ಸಮುದಾಯದವರನ್ನು ಗುರುತಿಸಲಾಗುತ್ತಿದೆ. ಒಗ್ಗಟ್ಟು ಇರುವ ಕಡೆ ಶಕ್ತಿ ಇರುತ್ತದೆ. ಯಾರು ಯಾರನ್ನು ಕೈ ಬಿಡಬೇಡಿ. ಸಾಧ್ಯವಾದರೆ ಬಡವರನ್ನು ಮೇಲೆತ್ತಲು ಪ್ರಯತ್ನಿಸಬೇಕು. ಅದು ಬಿಟ್ಟು ಕಾಲು ಎಳೆಯುವ ಕೆಲಸ ಮಾಡಬೇಡಿ’ ಎಂದರು.
ಸಮುದಾಯದ ಜಿಲ್ಲಾ ಘಟಕದ ಪ್ರಧಾನ ಪೋಷಕ ಎಲ್.ಎ.ಮಂಜುನಾಥ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಜಾತಿ ಜಾತಿಗಳನ್ನು ಹೊಡೆಯುವ ಕೆಲಸ ಕೆಲ ವ್ಯಕ್ತಿಗಳಿಂದ ನಡೆಯುತ್ತಿದೆ. ಕಡಿಮೆ ಜನ ಸಂಖ್ಯೆಯಲ್ಲಿರುವ ಸಮುದಾಯದವರು ಇದಕ್ಕೆ ಕಿವಿಗೊಡಬಾರದು’ ಎಂದು ಎಚ್ಚರಿಸಿದರು.
ತಿಗಳ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಉದಯ್ ಕುಮಾರ್ ಮಾತನಾಡಿ, ‘ನಾವೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜೀವನ ನಡೆಸುತ್ತಿದ್ದು, ಪ್ರತಿಯೊಂದು ಸಮುದಾಯದವರು ಒಟ್ಟಿಗೆ ಕೆಲಸ ಮಾಡಿದಾಗ ಸಮಾಜದ ಅಭಿವೃದ್ಧಿ ಸಾಧ್ಯ’ ಎಂದರು.
‘ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವ ನಿಟ್ಟಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಅಭಿನಂದಿಸಲಾಗುತ್ತಿದೆ. ಕಡಿಮೆ ಜನ ಸಂಖ್ಯೆಯಲ್ಲಿರುವ ತಿಗಳರು ಸಂಘಟನೆಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿರುವ ಪ್ರತಿಭಾವಂತ ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಅಭಿನಂದಿಸಲಾಯಿತು.
ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘದ ಅಧ್ಯಕ್ಷ ಸಿ.ಜಯರಾಜ್, ರಾಜ್ಯ ವಹ್ನಿಕುಲ ಕ್ಷತ್ರಿಯ ನೌಕರರ ಸಂಘದ ಅಧ್ಯಕ್ಷ ಡಿ.ವಿ.ಚಂದ್ರಶೇಖರಯ್ಯ, ಪ್ರಧಾನ ಕಾರ್ಯದರ್ಶಿ ಮುನಿವೆಂಕಟಪ್ಪ, ಕಾರ್ಯದರ್ಶಿ ಮುನಿರಾಜಪ್ಪ, ವಹ್ನಿಕುಲ ಕ್ಷತ್ರಿಯ ಸಂಘದ ಬೆಂಗಳೂರು ಪೂರ್ವ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ವೇಣುಗೋಪಾಲ್, ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿ ಗೌರವಾಧ್ಯಕ್ಷ ಪಲ್ಲವಿಮಣಿ, ಬಿಬಿಎಂಪಿ ಸದಸ್ಯ ಶಿವಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.