ADVERTISEMENT

ಯಲುವಳ್ಳಿ ಮೊರಾರ್ಜಿ ದೇಸಾಯಿ ಶಾಲೆ: ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿರುವ ಪೋಷಕರು

ಯಲುವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಘಟನೆ ನಂತರ ಆತಂಕ

ಕೆ.ಓಂಕಾರ ಮೂರ್ತಿ
Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ವಸತಿ ಶಾಲೆಯ ಮುಖ್ಯದ್ವಾರದ ಬಳಿ ಮಂಗಳವಾರ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತಿರುವ ಪೋಷಕರು
ವಸತಿ ಶಾಲೆಯ ಮುಖ್ಯದ್ವಾರದ ಬಳಿ ಮಂಗಳವಾರ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತಿರುವ ಪೋಷಕರು   

ಕೋಲಾರ: ಮಾಲೂರು ತಾಲ್ಲೂಕಿನ ಯಲುವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಲದ ಗುಂಡಿ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳನ್ನು ಇಳಿಸಿದ ಘಟನೆಯ ನಂತರ ಆತಂಕಗೊಂಡಿರುವ ಕೆಲವು ಪೋಷಕರು ಮೂರು ದಿನಗಳಿಂದ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದಾರೆ.

ಘಟನೆ ಹೊರಬಂದ ಭಾನುವಾರದಿಂದ ಇಲ್ಲಿಯವರೆಗೆ ಸುಮಾರು 84 ವಿದ್ಯಾರ್ಥಿಗಳು ರಜೆ ಹಾಕಿ ಪೋಷಕರೊಂದಿಗೆ ಊರಿಗೆ ತೆರಳಿದ್ದಾರೆ. ಉಳಿದ ಮಕ್ಕಳು ಎಂದಿನಂತೆ ಪಾಠ, ಆಟದಲ್ಲಿ ನಿರತರಾಗಿದ್ದಾರೆ.

‘ಪ್ರಜಾವಾಣಿ’ ಪ್ರತಿನಿಧಿ ಮಂಗಳವಾರ ಶಾಲೆಗೆ ಭೇಟಿ ನೀಡಿದಾಗ ಪೋಷಕರು ಮಕ್ಕಳನ್ನು ತಮ್ಮೊಂದಿಗೆ ಮನೆಗೆ ಕರೆದೊಯುತ್ತಿದ್ದ ದೃಶ್ಯ ಕಂಡುಬಂತು. ಇನ್ನು ಕೆಲ ಪೋಷಕರು ಮಕ್ಕಳನ್ನು ಮಾತನಾಡಿಕೊಂಡು ಹೋಗಲು ಬಂದಿದ್ದರು.

ADVERTISEMENT

ಹೊಸದಾಗಿ ನಿಯೋಜನೆಗೊಂಡಿರುವ ಪ್ರಭಾರ ಪ್ರಾಂಶುಪಾಲ ರಘು ಅವರಿಗೆ ಇನ್ನೂ ಕೆಲವು ಮಕ್ಕಳು ರಜೆ ಅರ್ಜಿ ನೀಡಿ ಊರಿಗೆ ಹೊರಡಲು ಅನುವಾಗುತ್ತಿದ್ದಾರೆ. ವಸತಿ ನಿಲಯದಲ್ಲಿ 6ರಿಂದ 10ನೇ ತರಗತಿ ವರೆಗೆ 243 ಮಕ್ಕಳು ಇದ್ದಾರೆ. ಅವರಲ್ಲಿ 152 ಬಾಲಕರು, 91 ಬಾಲಕಿಯರು ಸೇರಿದ್ದಾರೆ.  

ಈ ನಡುವೆ ವಸತಿ ಶಾಲೆಗೆ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾದಿಕಾರಿ ಎಂ.ನಾರಾಯಣ, ಡಿವೈಎಸ್ಪಿ, ಇನ್‌ಸ್ಟೆಕ್ಟರ್‌ ಆಗಾಗ್ಗೆ ಭೇಟಿ ನೀಡಿ ಮಕ್ಕಳಿಗೆ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ. ವಸತಿ ಶಾಲೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್‌ಪಿ ಎಚ್.ಡಿ.ಆನಂದ್‌ ಸೋಮವಾರ ಭೇಟಿ ನೀಡಿ ಅಧಿಕಾರಿಗಳು ಹಾಗೂ ಮಕ್ಕಳಿಂದ ಮಾಹಿತಿ ಪಡೆದರು.  

ಘಟನೆಯ ನಂತರ ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು, ಅಡುಗೆಯವರು, ಅಟೆಂಡರ್‌, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ಬದಲಾಯಿಸಲಾಗಿದೆ. ಸದ್ಯ ಪ್ರಭಾರ ಪ್ರಾಂಶುಪಾಲ ರಘು ಸೇರಿದಂತೆ ಎಂಟು ಬೋಧಕ ಸಿಬ್ಬಂದಿ ಹಾಗೂ ಏಳು ಬೋಧಕೇತರ ಸಿಬ್ಬಂದಿಯನ್ನು ಹೊಸದಾಗಿ ನಿಯೋಜಿಸಲಾಗಿದೆ. 

ಪೋಷಕರ ನೋವು: ‘ಘಟನೆ ಕೇಳಿ ಆತಂಕವಾಗಿದೆ. ಮಕ್ಕಳು ಮಾನಸಿಕವಾಗಿ ನೊಂದಿರುತ್ತಾರೆ. ಮನಸ್ಸು ಉಲ್ಲಸಿತಗೊಳ್ಳಲಿ ಎಂಬ ಕಾರಣದಿಂದ ಕರೆದೊಯುತ್ತಿದ್ದೇವೆ’ ಎಂದು ಆರನೇ ತರಗತಿಯ ವಿದ್ಯಾರ್ಥಿನಿಯೊಬ್ಬರ ತಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇಗುಲ ನಿರ್ಮಾಣಕ್ಕೆ ₹500 ಕೇಳಿದಾಗ ತಡ ಮಾಡಿದ್ದಕ್ಕೆ ಶಿಕ್ಷಕರು ನನ್ನ ಮಗಳನ್ನು ಬೈಯ್ದಿದಿದ್ದಾರೆ. ಎಲ್ಲರ ಮುಂದೆ ನಿಂದಿಸಿದ್ದಾರೆ. ಹಣ ಕೊಡುವ ಯೋಗ್ಯತೆ ಇಲ್ಲವೇ ಎಂದು ಕೇಳಿದ್ದಾರೆ. ಅದೇ ಕಾರಣಕ್ಕೆ ಹೊಡೆದಿದ್ದು, ಕೈಯಲ್ಲಿ ಗುಳ್ಳೆ ಬಂದಿದೆ’ ಎಂದು ಪೋಷಕರೊಬ್ಬರು ದೂರಿದರು.

‘ಮಕ್ಕಳ ಭವಿಷ್ಯ ಒಳ್ಳೆಯದಾಗಲಿ ಎಂದು ಶಾಲೆಗೆ ಸೇರಿಸುತ್ತೇವೆ. ಇಂಥ ಘಟನೆ ನಡೆದಾಗ ಬೇಸರವಾಗುತ್ತದೆ’ ಎಂದು ಮತ್ತೊಬ್ಬ ವಿದ್ಯಾರ್ಥಿನಿಯ ತಂದೆ ಹೇಳಿದರು.

‘ಎರಡು ದಿನಗಳಷ್ಟೇ ರಜೆ ಹಾಕಿದ್ದೇನೆ. ಊರಿಗೆ ಹೋಗಿ ವಾಪಸ್‌ ಬರುತ್ತೇನೆ. ಘಟನೆಯಿಂದ ನಾನೇನು ಹೆದರಿಲ್ಲ’ ಎಂದು ಜಿಲ್ಲೆಯ ಟೇಕಲ್‌ ಗ್ರಾಮದ ವಿದ್ಯಾರ್ಥಿನಿ ಹೇಳಿದಳು.

ಎಂದಿನಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದ ವಸತಿ ಶಾಲೆ ಮಕ್ಕಳು  
ಮಾಲೂರು ತಾಲ್ಲೂಕಿನ ಯಲುವಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹೊರನೋಟ
ಘಟನೆಗೆ ಮುನ್ನ ಮೆನು ಚಾರ್ಟ್‌ ಪ್ರಕಾರ ಊಟ ಕೊಡುತ್ತಿರಲಿಲ್ಲ. ಸಾಂಬಾರ್‌ನಲ್ಲಿ ತರಕಾರಿಯೇ ಇರುತ್ತಿರಲಿಲ್ಲ ಕೆಲವೊಮ್ಮೆ ಮೊಟ್ಟೆ ಕೊಳೆತಿರುತಿತ್ತು ಎಂಬುದಾಗಿ ಮಕ್ಕಳು ಹೇಳಿಕೊಂಡರು.
–ಚೌಡಪ್ಪ, ಅಧ್ಯಕ್ಷ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.