ADVERTISEMENT

ಪಕ್ಷ ದ್ರೋಹ ಮಾಡಿಲ್ಲ: ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 10:51 IST
Last Updated 3 ಸೆಪ್ಟೆಂಬರ್ 2019, 10:51 IST

ಕೋಲಾರ: ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿಲ್ಲ. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ನನ್ನ ರಾಜಕೀಯ ಗುರುವಾಗಿದ್ದು, ಅವರ ಹಾದಿಯಲ್ಲೇ ನಿಷ್ಠೆಯಿಂದ ಪಕ್ಷದ ಕೆಲಸ ಮಾಡುತ್ತಿದ್ದೇನೆ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರೆ ಆ ಬಗ್ಗೆ ಹೈಕಮಾಂಡ್ ನೋಟಿಸ್ ನೀಡಲಿ ಅಥವಾ ನಮ್ಮನ್ನು ಕರೆದು ವಿಚಾರಿಸಲಿ. ಪಕ್ಷ ವಿರೋಧಿ ಚಟುವಟಿಕೆ ಸಂಬಂಧ ಯಾವುದೇ ಸಾಕ್ಷ್ಯಾಧಾರವಿದ್ದರೆ ಹೇಳಲಿ’ ಎಂದು ಮುನಿಯಪ್ಪ ಆರೋಪಕ್ಕೆ ತಿರುಗೇಟು ನೀಡಿದರು.

‘ಗುರುಗಳಾದ ಮುನಿಯಪ್ಪ ಯಾವಾಗಲೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಅವರ ಗರಡಿಯಲ್ಲಿ ಬೆಳೆದ ನಾನು ಸಹ ಪಕ್ಷ ನಿಷ್ಠೆಯಿಂದಲೇ ಕೆಲಸ ಮಾಡಿದ್ದೇನೆ. ಮುನಿಯಪ್ಪ ಅವರು ರಾಜಕೀಯವಾಗಿ ಏನೇ ಹೇಳಿದರೂ ಆಶೀರ್ವಾದ ಎಂದು ಭಾವಿಸುತ್ತೇನೆ. ನಮ್ಮ ಗುರುಗಳು ತಪ್ಪು ಮಾಡಿದ್ದರೆ ನಾನು ತಪ್ಪು ಮಾಡಿದ್ದೇನೆ ಎಂದರ್ಥ. ಒಂದು ವೇಳೆ ಅವರು ತಪ್ಪು ಮಾಡಿಲ್ಲ ಎಂದರೆ ನಾನೂ ಮಾಡಿರುವುದಿಲ್ಲ. ನಮಗೆ ಗುರುಗಳು ಆ ವಿದ್ಯೆ ಕಲಿಸಿಲ್ಲ’ ಎಂದು ಹೇಳಿದರು.

ADVERTISEMENT

‘ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥೆ ಪರ ಕೆಲಸ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಮುನಿಯಪ್ಪ ಕಾಂಗ್ರೆಸ್‌ ಬಿಟ್ಟು ಎಂದಾದರೂ ಬೇರೆ ಪಕ್ಷದ ಪರ ಕೆಲಸ ಮಾಡ್ತಾರಾ? ಅವರು ಪಕ್ಷ ದ್ರೋಹ ಮಾಡದಿದ್ದ ಸಂದರ್ಭದಲ್ಲಿ ನಾನು ಮಾಡಲೂ ಸಾಧ್ಯವಿಲ್ಲ. ಇಷ್ಟಾದರೂ ಅವರು ನನಗೆ ಕಾಂಗ್ರೆಸ್ ಕಚೇರಿಗೆ ಕಾಲಿಡಬಾರದೆಂದು ಏಕೆ ಹೇಳಿದ್ದಾರೆ ಎಂಬ ಬಗ್ಗೆ ಅವರೇಸ್ಪಷ್ಟನೆ ನೀಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.