ADVERTISEMENT

ಕ್ಯಾಸಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ: ವೈದ್ಯರಿಲ್ಲದೆ ರೋಗಿಗಳ ಪರದಾಟ

ಕ್ಯಾಸಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್‌ ಕೊರತೆ

ಪ್ರಜಾವಾಣಿ ವಿಶೇಷ
Published 24 ಜೂನ್ 2024, 6:13 IST
Last Updated 24 ಜೂನ್ 2024, 6:13 IST
ಕೆಜಿಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ
ಕೆಜಿಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ   

ಕೆಜಿಎಫ್: ಕ್ಯಾಸಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಆಂಬುಲೆನ್ಸ್ ಕೊರತೆ ಉಂಟಾಗಿದ್ದು, ಸುತ್ತಮುತ್ತಲಿನ ಗ್ರಾಮದ ನಿವಾಸಿಗಳು ಚಿಕಿತ್ಸೆಗಾಗಿ ದೂರದ ಕೆಜಿಎಫ್ ನಗರಕ್ಕೆ ಬರಬೇಕಾದ ಪರಿಸ್ಥಿತಿ ಉಂಟಾಗಿದೆ.

ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶಗಳನ್ನು ಹೊಂದಿರುವ ಕ್ಯಾಸಂಬಳ್ಳಿ ಹೋಬಳಿಯಲ್ಲಿರುವ ಏಕೈಕ ದೊಡ್ಡ ಆಸ್ಪತ್ರೆ ಕ್ಯಾಸಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ. ಆದರೆ, ಈ ಆಸ್ಪತ್ರೆಯಲ್ಲಿ ಪ್ರಸ್ತುತ ಒಬ್ಬ ವೈದ್ಯರಿದ್ದು, ಹಗಲಿನಲ್ಲಿ ಕಾರ್ಯನಿರ್ವಹಿಸುತ್ತಾರೆ. ರಾತ್ರಿ ಪಾಳಿಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ. ಜತೆಗೆ ತರಬೇತಿ ಹಾಗೂ ಸಭೆಗಳಿಗೆ ವೈದ್ಯರು ಹೋದರೆ ಸೇವೆ ಇರುವುದಿಲ್ಲ.

ಆಸ್ಪತ್ರೆಯಲ್ಲಿ ಸುಸಜ್ಜಿತ ಹೆರಿಗೆ ವಾರ್ಡ್ ಇದೆ. ತುರ್ತುಸೇವಾ ಘಟಕವೂ ಇದೆ. 20 ವಿವಿಧ ರೀತಿಯ ಪರೀಕ್ಷೆ ಮಾಡುವ ಪ್ರಯೋಗಾಲಯ ಮತ್ತು ಇಸಿಜಿ ಯಂತ್ರ ಇದೆ. ಹೆರಿಗೆಗಾಗಿ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಆದರೆ, ಸಂಜೆ ನಂತರ ಬಂದರೆ ಅವರು ಕೆಜಿಎಫ್ ಇಲ್ಲವೇ ಕೋಲಾರಕ್ಕೆ ಹೋಗಬೇಕು. ಆ ವೇಳೆ ಗರ್ಭಿಣಿ ಮಹಿಳೆಯನ್ನು ಸಾಗಿಸಲು ಆಂಬುಲೆನ್ಸ್ ಸೇವೆ ಇಲ್ಲದೆ ಇರುವುದು ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ.

ADVERTISEMENT

ಗ್ರಾಮಕ್ಕೆ ಆಂಬುಲೆನ್ಸ್ ನೀಡದೆ ಇದ್ದಲ್ಲಿ ಹೋರಾಟ ಮಾಡುವುದಾಗಿ ಕ್ಯಾಸಂಬಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಲವಾರು ಬಾರಿ ಮನವಿ ನೀಡಿದ್ದರು. ಜೂನ್ ಒಂದರೊಳಗೆ ಆಂಬುಲೆನ್ಸ್ ನೀಡದೆ ಇದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರಿಂದ, ಜೂನ್ ಒಂದರಂದು ಆಂಬುಲೆನ್ಸ್ ವಾಹನವನ್ನು ಆಸ್ಪತ್ರೆಗೆ ನೀಡಲಾಯಿತು. ಆದರೆ, ಮರುದಿನವೇ ಆಂಬುಲೆನ್ಸ್ ನಾಪತ್ತೆಯಾಗಿದೆ ಎಂದು ಹೋರಾಟಗಾರ ಸೋಮಸುಂದರ ರೆಡ್ಡಿ ಆರೋಪಿಸಿದರು.

ಕ್ಯಾಸಂಬಳ್ಳಿ ಸುತ್ತಾಮುತ್ತ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಮಾಪುರ ಕ್ರಾಸ್ ಅಪಘಾತಕ್ಕೆ ಹೆಸರಾಗಿದೆ. ಆಸ್ಪತ್ರೆಗೆ ಆಂಬುಲೆನ್ಸ್ ನೀಡುವ ಅವಶ್ಯಕತೆ ಇದೆ ಎಂದು ಪೊಲೀಸರು ಕೂಡ ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರಿಗೆ ನೈತಿಕ ಹೊಣೆ ಹೊತ್ತು ಸರ್ಕಾರ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನನ್ನ ಹೆಂಡತಿ ಗರ್ಭಿಣಿಯಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಕೇಳಿದರೆ ಇಲ್ಲ ಎಂದು ಸಿಬ್ಬಂದಿ ಹೇಳಿದರು. ಅವರನ್ನು ಹೆರಿಗೆಗಾಗಿ ಬೈಕ್‌ನಲ್ಲಿ ಕರೆತಂದಿದ್ದೇನೆ ಎಂಬುದು ಬೆನ್ನವಾರ ಗ್ರಾಮದ ಟ್ರಾಕ್ಟರ್ ಚಾಲಕ ಕಿರಣ್ ಅವರ ಮಾತಾಗಿದೆ.

ಹಾವು ಕಡಿದವರಿಗೆ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಸಂಜೆ ನಂತರ ಬಂದರೆ ನರ್ಸ್ ಬಿಟ್ಟರೆ ಯಾವುದೇ ವೈದ್ಯರು ಕೂಡ ಸಿಗುವುದಿಲ್ಲ. ರಾತ್ರಿ ಪಾಳಿಗೆ ವೈದ್ಯರನ್ನು ನೇಮಿಸಿ ಎಂದು ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ.

-ಸೋಮಸುಂದರ ರೆಡ್ಡಿ ಗ್ರಾಮಸ್ಥ

ಮೂರ್ನಾಲ್ಕು ವರ್ಷದಿಂದ ಆಂಬುಲೆನ್ಸ್ ಮತ್ತು ಹೆಚ್ಚುವರಿ ವೈದ್ಯರಿಗಾಗಿ ಬೇಡಿಕೆ ಇಟ್ಟಿದ್ದೇವೆ. ಜಿಲ್ಲಾ ಆರೋಗ್ಯಾಧಿಕಾರಿ ಸಾಬೂಬು ಹೇಳಿಕೊಂಡು ಕಾಲ ತಳ್ಳುತ್ತಿದ್ದಾರೆ.

-ಚಿಕ್ಕವೆಂಕಟರಾಮರೆಡ್ಡಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.