ADVERTISEMENT

ಕೆಜಿಎಫ್‌ | ಪಿಂಚಣಿದಾರರ ಅಳಲು ಕೇಳುವವರಾರು?

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 6:47 IST
Last Updated 11 ನವೆಂಬರ್ 2023, 6:47 IST
ವಸಂತಮ್ಮ
ವಸಂತಮ್ಮ   

ಕೆಜಿಎಫ್‌: ಸಾಮಾಜಿಕ ಭದ್ರತೆ ಮಾಸಿಕ ಪಿಂಚಣಿ ಯೋಜನೆಯಲ್ಲಿ ಅಂಚೆ ಕಚೇರಿ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳ ಅಸಹಕಾರದಿಂದಾಗಿ ಸಾವಿರಾರು ಪಿಂಚಣಿದಾರರು ಸರ್ಕಾರದ ಯೋಜನೆಯನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ಸಾಮಾಜಿಕ ಭದ್ರತೆ ಮಾಸಿಕ ಪಿಂಚಣಿ ಯೋಜನೆಯಲ್ಲಿ ಸರ್ಕಾರದ ಯೋಜನೆಗಳಾದ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷ, ವಿಧವಾ ವೇತನ, ಮನಸ್ವಿನಿ, ಮೈತ್ರಿ, ರೈತರ ಆತ್ಮಹತ್ಯೆ ಮೊದಲಾದವು ಎನ್‌ಪಿಸಿಐ (ನ್ಯಾಷನಲ್‌ ಪೇಮೆಂಟ್ ಕಾರ್ಫೋರೇಷನ್‌ ಆಫ್‌ ಇಂಡಿಯಾ) ಮೂಲಕ ಹಣ ಸಂದಾಯವಾಗಲಿದೆ. ಫಲಾನುಭವಿಗಳು ಬ್ಯಾಂಕ್‌ ಇಲ್ಲವೇ ಪೋಸ್ಟ್ ಆಫೀಸ್‌ ಮೂಲಕ ಹಣ ಪಡೆಯಬಹುದಾಗಿದೆ. ಆದರೆ ಸಾವಿರಾರು ಫಲಾನುಭವಿಗಳ ಆಧಾರ್ ಕಾರ್ಡನ್ನು ಬ್ಯಾಂಕ್ ಇಲ್ಲವೇ ಪೋಸ್ಟ್ ಆಫೀಸ್‌ ಖಾತೆಗೆ ಜೋಡಣೆ ಮಾಡಲು ಸಾಧ್ಯವಾಗದೆ ಇರುವುದರಿಂದ ಫಲಾನುಭವಿಗಳು ಸರ್ಕಾರದ ಯೋಜನೆಯಿಂದ ವಂಚಿತರಾಗಿದ್ದಾರೆ. ಮಾಹಿತಿ ಕೊರತೆಯಿಂದಾಗಿ ಹೆಚ್ಚುವರಿ ಹಣ ಪಡೆಯಲು ವಿಫಲರಾಗಿದ್ದಾರೆ.

ಗ್ರಾಮೀಣ ಭಾಗದ ರಾಬರ್ಟಸನ್‌ಪೇಟೆ ಹೋಬಳಿಯಲ್ಲಿ 127, ಕ್ಯಾಸಂಬಳ್ಳಿ ಹೋಬಳಿಯಲ್ಲಿ 526 ಮತ್ತು ಬೇತಮಂಗಲ ಹೋಬಳಿಯಲ್ಲಿ 256 ಮಂದಿ ಜೋಡಣೆಗಾಗಿ ಕಾದಿದ್ದಾರೆ. ಕೆಜಿಎಫ್ ನಗರವೊಂದರಲ್ಲಿಯೇ ಶುಕ್ರವಾರದ ವೇಳೆಗೆ ಒಂದು ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಆಧಾರ್ ಜೋಡಿಸುವಲ್ಲಿ ವಿಫಲರಾಗಿದ್ದಾರೆ.

ADVERTISEMENT

ಆಧಾರ್ ಜೋಡಣೆ ಮಾಡಲು ಶುಕ್ರವಾರದಂದು ಕೊನೆಯ ದಿನಾಂಕ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ತಾಲ್ಲೂಕು ಕಚೇರಿಯಲ್ಲಿ ನೂರಾರು ಫಲಾನುಭವಿಗಳು ಸರತಿ ಸಾಲಿನಲ್ಲಿ ನಿಂತಿದ್ದರು. ಕಚೇರಿಯ ಬಾಗಿಲು ತೆರೆಯುತ್ತಿದ್ದಂತೆಯೇ ನೂಕು ನುಗ್ಗಲು ಉಂಟಾಯಿತು. ಅಂಚೆ ಕಚೇರಿ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಆಧಾರ್ ಜೋಡಣೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಆದರೆ ಬಹುತೇಕ ಮಂದಿ ವೃದ್ಧರಾಗಿದ್ದರಿಂದ ಅವರ ಕೈ ಗುರ್ತು ಥಂಬ್ ಕೊಡಲು ಸಾಧ್ಯವಾಗದೆ ನಿರಾಶರಾಗಿದ್ದು ಕಂಡು ಬಂದಿತು. ನೇರವಾಗಿ ಬ್ಯಾಂಕ್‌ ಹೋಗಿ ವಿಚಾರಿಸಿ ಎಂಬ ಉತ್ತರ ಸಿಬ್ಬಂದಿಯಿಂದ ಕೇಳಿ ಬಂದಿತು. ಇದರಿಂದ ವಿಚಲಿತರಾದ ವೃದ್ಧರು ಈ ತಿಂಗಳಿಂದ ತಮ್ಮ ಪಿಂಚಣಿ ನಿಂತು ಹೋಗುವ ಭೀತಿಯನ್ನು ವ್ಯಕ್ತಪಡಿಸಿದರು.

ವಿಧವಾ ವೇತನ ಪಡೆಯುತ್ತಿರುವ ನೂರಾರು ಮಂದಿ 65 ವರ್ಷ ದಾಟಿದರೂ ಇನ್ನೂ ₹ 800 ಪಡೆಯುತ್ತಿರುವ ಪ್ರಕರಣಗಳು ಈ ಸಂದರ್ಭದಲ್ಲಿ ಬೆಳಕಿಗೆ ಬಂದವು. ವಿಧವೆಯರಿಗೆ ಸರ್ಕಾರ ₹ 800 ಕೊಡುತ್ತಿದೆ. ಅವರು 65 ವರ್ಷ ದಾಟಿದರೆ ಅವರು ವೃದ್ಧಾಪ್ಯ ವೇತನವಾಗಿ ₹ 1ಮ200 ರೂಪಾಯಿ ಪಡೆಯಲು ಅರ್ಹರಾಗಿದ್ದಾರೆ. ಆದರೆ ಇಲಾಖೆಯು ಫಲಾನುಭವಿಗಳಿಗೆ ಸರಿಯಾದ ಮಾಹಿತಿ ಕೊಡದೆ ಇರುವುದರಿಂದ ಅವರು ಹೆಚ್ಚುವರಿಯಾಗಿ ₹ 400  ಪಡೆಯಲು ಸಾಧ್ಯವಾಗಿಲ್ಲ. ಅಂಚೆ ಕಚೇರಿ ಮೂಲಕ ಹಣ ಪಡೆಯುತ್ತಿರುವ ವೃದ್ಧರು ಪೋಸ್ಟ್‌ ಮ್ಯಾನ್‌ ನೀಡುವ ಹಣಕ್ಕೆ ಪರದಾಡಬೇಕಾಗುತ್ತಿದೆ. ಕನಿಷ್ಠ ₹ 30 ರಿಂದ ₹ 50 ಅನ್ನು ಪೋಸ್ಟ್‌ಮ್ಯಾನ್‌ಗೆ ನೀಡಿದರೆ ಮಾತ್ರ ಪಿಂಚಣಿ ಕೊಡುತ್ತಾರೆ. ಇಲ್ಲವಾದರೆ ಸತಾಯಿಸುತ್ತಾರೆ ಎಂದು ಸಾಕಷ್ಟು ಫಲಾನುಭವಿಗಳು ದೂರಿದರು.

ಪೋಸ್ಟ್‌ಮ್ಯಾನ್‌ಗಳು ಪಿಂಚಣಿ ನೀಡಲು ಹಣ ತೆಗೆದುಕೊಳ್ಳುವ ಬಗ್ಗೆ ಲಿಖಿತವಾಗಿ ದೂರುಗಳು ಬಂದಿಲ್ಲ. ದೂರು ಬಂದರೆ ಕ್ರಮ ಜರುಗಿಸುವುದಾಗಿ ಅಂಚೆ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

72 ವರ್ಷ ದಾಟಿದ್ದರೂ ಪಿಂಚಣಿ ನೀಡುತ್ತಿಲ್ಲ
72 ವರ್ಷ ದಾಟಿದ್ದರೂ ಇದುವರೆವಿಗೂ ಅವರಿಗೆ ₹ 1200 ಪಿಂಚಣಿ ನೀಡುತ್ತಿಲ್ಲ. ಹಲವಾರು ಬಾರಿ ಅರ್ಜಿ ನೀಡಿದ್ದರೂ, ಇನ್ನೂ ವೃದ್ಧಾಪ್ಯ ವೇತನವಾದ ₹ 800 ರೂಪಾಯಿ ನೀಡಲಾಗುತ್ತಿದೆ. ಒಮ್ಮೆ ಎಂಟು ತಿಂಗಳು ಪಿಂಚಣಿ ಬಂದಿರಲಿಲ್ಲ. ಜೀವನ ಮಾಡುವುದೇ ಕಷ್ಟವಾಗಿದೆ. ಪೋಸ್ಟ್‌ ಮಾನ್‌ ಹೇಳಿದ ಹಾಗೆ ಕೇಳಬೇಕು. ಇಲ್ಲವಾದಲ್ಲಿ ಬರುವ ಹಣ ಕೂಡ ಬರುವುದಿಲ್ಲ ಎಂದು ಎನ್‌.ಟಿ ಬ್ಲಾಕ್ ನಿವಾಸಿ ವಸಂತಮ್ಮ ಅವಲತ್ತುಕೊಂಡರು.
ಕೆಜಿಎಫ್ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರದಂದು ಆಧಾರ್ ಜೋಡಣೆ ಮಾಡಲು ನೂಕು ನುಗ್ಗಲು ಉಂಟಾಯಿತು.
ಆಧಾರ್ ಕಾರ್ಡ್ ಇಟ್ಟುಕೊಂಡು ಜೋಡಣೆ ಬಗ್ಗೆ ವಿಚಾರಣೆ ನಡೆಸುತ್ತಿರುವ ಪಿಂಚಣಿದಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.