ADVERTISEMENT

ಕೋಲಾರ: ಉದ್ಯಾನ ಅಧ್ವಾನ; ಸಾಮಗ್ರಿಯೂ ಹಾಳು!

ಕೋಲಾರ ನಗರಸಭೆಗೆ ಹೇಳೋರು, ಕೇಳೋರು ಯಾರೂ ಇಲ್ಲವೇ? ನಾಗರಿಕರ ಆಕ್ರೋಶ

ಕೆ.ಓಂಕಾರ ಮೂರ್ತಿ
Published 9 ಜುಲೈ 2024, 7:55 IST
Last Updated 9 ಜುಲೈ 2024, 7:55 IST
ಕೋಲಾರ ನಗರದ ರೈಲ್ವೆ ನಿಲ್ದಾಣ ಬಳಿಯ ಉದ್ಯಾನದಲ್ಲಿ ಕಳೆ, ಕಸ. ಹಾಳಾಗುವ ಹಂತದಲ್ಲಿ ಸಾಮಗ್ರಿಗಳು
ಕೋಲಾರ ನಗರದ ರೈಲ್ವೆ ನಿಲ್ದಾಣ ಬಳಿಯ ಉದ್ಯಾನದಲ್ಲಿ ಕಳೆ, ಕಸ. ಹಾಳಾಗುವ ಹಂತದಲ್ಲಿ ಸಾಮಗ್ರಿಗಳು   

ಕೋಲಾರ: ಸಮರ್ಪಕವಾಗಿ ಕಸ ವಿಲೇವಾರಿ ಮಾಡಲು ಸಾಧ್ಯವಾಗದಷ್ಟು ಅಶಕ್ತಗೊಂಡಿರುವ ಕೋಲಾರ ನಗರಸಭೆ ಇರುವ ಉದ್ಯಾನಗಳನ್ನೂ ಹಾಳುಗೆಡುವುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನಗಳು ಕಸದ ತೊಟ್ಟಿಯಾಗುತ್ತಿವೆ. ಉಪಕರಣಗಳು ತುಕ್ಕು ಹಿಡಿಯುವುದೊಂದೇ ಬಾಕಿ!

ದಿನವೆಲ್ಲಾ ಜಂಜಾಟದ ಬದುಕು ದೂಕುವ ನಗರದ ಜನರು ವಿರಾಮ, ವಿಹಾರ, ಮಕ್ಕಳಿಗೆ ಆಟ, ಮನರಂಜನೆಗೆಂದು ಉದ್ಯಾನ ಅರಸಿ ಬರುತ್ತಾರೆ. ಆದರೆ, ಇಲ್ಲಿನ ಉದ್ಯಾನ ಅವ್ಯವಸ್ಥೆ ನೋಡಿದರೆ ಮಾರು ದೂರು ಓಡಿ ಹೋಗುವಂತಿದೆ.

ನಗರದ ರೈಲ್ವೆ ನಿಲ್ದಾಣದ ಬಳಿಯ ಧರ್ಮರಾಯನಗರ ಬಡಾವಣೆಯಲ್ಲಿರುವ ಉದ್ಯಾನವಂತೂ ಅಧೋಗತಿಯಲ್ಲಿದೆ. ನಾಗರಿಕರ ವಾಯುವಿಹಾರ ಹಾಗೂ ಮಕ್ಕಳ ಆಟಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಾಣವಾಗಿರುವ ಈ ಉದ್ಯಾನ ಪಾಳು ಬಿದ್ದಿದೆ.

ADVERTISEMENT
ಉದ್ಯಾನದ ಪ್ರವೇಶ ದ್ವಾರದಲ್ಲೇ ಕಸದ ರಾಶಿ

ಉದ್ಯಾನದ ಪ್ರವೇಶ ದ್ವಾರದಲ್ಲೇ ಕಸದ ರಾಶಿ ಬಿದ್ದಿದೆ. ಎಲ್ಲಿ ನೋಡಿದರಲ್ಲಿ ಕಸ ಕಡ್ಡಿ, ಹುಲ್ಲು ಬೆಳೆದು ಕಾಲಿಡಲಾಗದ ಪರಿಸ್ಥಿತಿ ನೆಲೆಸಿದೆ. ಹಾವುಗಳು ಸೇರಿದಂತೆ ವಿಷಜಂತುಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಅಕ್ಕಪಕ್ಕದಲ್ಲೇ ಮನೆಗಳಿದ್ದು, ಈ ಪರಿಸ್ಥಿತಿ ಕಂಡು ಜನರು ಭಯಭೀತರಾಗಿದ್ದಾರೆ.

ನಗರಸಭೆ ಉದ್ಯಾನ ನಿರ್ವಹಣೆಗೆಂದು ಪ್ರತಿ ವರ್ಷ ಬಜೆಟ್‌ನಲ್ಲಿ ಹಣ ಎತ್ತಿಡುತ್ತದೆ. ಆದರೆ, ಅದೆಲ್ಲಿ ಹೋಗುತ್ತದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಮಕ್ಕಳು ಆಟದ ಉಪಕರಣಗಳು, ಜಿಮ್ ಸಾಮಗ್ರಿಗಳು ಹಾಳಾಗುತ್ತಿದ್ದು, ಲಕ್ಷಾಂತರ ರೂಪಾಯಿ ಪೋಲು ಮಾಡಲಾಗುತ್ತಿದೆ ಎಂದು ನಾಗರಿಕರು ಆರೋಪಿಸುತ್ತಾರೆ.

ಉದ್ಯಾನದ ಪ್ರವೇಶ ದ್ವಾರದಲ್ಲೇ ಕಸದ ರಾಶಿ

ಕೆಲ ತಿಂಗಳ ಹಿಂದೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ನಗರ ಪ್ರದಕ್ಷಿಣೆ ಮಾಡಿ ಸ್ವಚ್ಛತೆಗೆ ಆದ್ಯತೆ ನೀಡಲು ಸೂಚನೆ ಕೊಟ್ಟಿದ್ದರೂ ನಗರಸಭೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯದೇ ವರ್ಷದಿಂದ ಖಾಲಿ ಬಿದ್ದಿದ್ದು, ಈಗ ಜಿಲ್ಲಾಧಿಕಾರಿಯೇ ಆಡಳಿತಾಧಿಕಾರಿ. ಉದ್ಯಾನದ ದುಃಸ್ಥಿತಿ ಅವರ ಗಮನಕ್ಕೂ ಬಂದಂತಿಲ್ಲ.

ನಗರ ನಿರ್ವಹಣೆಯೇ ನಗರಸಭೆಗೆ ಸಾಧ್ಯವಾಗದ ಪರಿಸ್ಥಿತಿಗೆ ಬಂದು ತಲುಪಿದ್ದು, ಸಾರ್ವಜನಿಕರು ನಿತ್ಯ ಶಾಪ ಹಾಕುತ್ತಿದ್ದಾರೆ. ಆದರೆ, ಅದ್ಯಾವುದೂ ಅಧಿಕಾರಿಗಳ ಕಿವಿಗೆ ಬೀಳುತ್ತಿಲ್ಲ. ಈ ಸಂಬಂಧ ನಗರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಿಬ್ಬಂದಿ ಕೊರತೆಯ ನೆಪವೊಡ್ಡುತ್ತಾರೆ.

ಕೋಲಾರದ ಉದ್ಯಾನ ನಿರ್ವಹಣೆ ಕೊರತೆ
ಶಿವಾನಂದ
ಉದ್ಯಾನ ಅವ್ಯವಸ್ಥೆ ನನ್ನ ಗಮನಕ್ಕೆ ಬಂದಿಲ್ಲ. ಉದ್ಯಾನದ ಲೋಕೇಶನ್‌ ವಾಟ್ಸ್‌ಆ್ಯಪ್‌ ಮಾಡಿ ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಿ ಸರಿಪಡಿಸುತ್ತೇನೆ
ಶಿವಾನಂದ ಪೌರಾಯುಕ್ತ ಕೋಲಾರ ನಗರಸಭೆ
ಕುರುಬರಪೇಟೆ ವೆಂಕಟೇಶ್‌
ನಗರಸಭೆ ಏನು ಮಾಡುತ್ತಿದೆಯೋ ಏನೋ?
ಈ ಉದ್ಯಾನ ನಿರ್ಮಾಣಕ್ಕೆ ನಗರಸಭೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು ಅದೆಲ್ಲಾ ವ್ಯರ್ಥವಾಗಿದೆ. ನಗರಸಭೆ ಪೌರಾಯುಕ್ತರಿಗೆ ಈ ಸಮಸ್ಯೆಯನ್ನು ವಿಡಿಯೋ ಸಮೇತ ಗಮನಕ್ಕೆ ತಂದರೂ ಈವರೆಗೆ ಕ್ರಮ ವಹಿಸಿಲ್ಲ. ಉದ್ಯಾನದೊಳಗೆ ಜನರು ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಮಕ್ಕಳು ಆಟೋಪಕರಣ ಬಳಸಲು ಆಗುತ್ತಿಲ್ಲ. ವಯಸ್ಸಾದವರು ಈ ಉದ್ಯಾನದಲ್ಲಿ ವಾಯು ವಿಹಾರ ಮಾಡಲು ಸಾಧ್ಯವಿಲ್ಲ. ಗಿಡಗಂಟಿ ಬೆಳೆದಿದ್ದು ಕಸ ಹರಡಿಕೊಂಡಿದೆ. ನಗರಸಭೆ ಏನು ಮಾಡುತ್ತಿದೆಯೋ ಏನೋ? ಕುರುಬರಪೇಟೆ ವೆಂಕಟೇಶ್‌ ಕೋಲಾರ ನಾಗರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.