ADVERTISEMENT

ಶ್ರೀನಿವಾಸಪುರ | ಪಾದಚಾರಿ ರಸ್ತೆ ಆಕ್ರಮಿಸಿದ ಗಿಡಗಂಟಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 13:51 IST
Last Updated 1 ಜುಲೈ 2023, 13:51 IST
ಶ್ರೀನಿವಾಸಪುರ ತಾಲ್ಲೂಕಿನ ಹೆಬ್ಬಟ ಗ್ರಾಮದ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿ
ಶ್ರೀನಿವಾಸಪುರ ತಾಲ್ಲೂಕಿನ ಹೆಬ್ಬಟ ಗ್ರಾಮದ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿ   

ಶ್ರೀನಿವಾಸಪುರ: ತಾಲ್ಲೂಕಿನ ರಸ್ತೆಗಳ ಎರಡೂ ಬದಿಗಳಲ್ಲಿ ಗಿಡಗಂಟಿ ಬೆಳೆದು ನಿಂತಿದ್ದು, ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗಿದೆ. ಇಕ್ಕಟ್ಟಾದ ರಸ್ತೆಗಳಲ್ಲಿ ವಾಹನ ಅಪಘಾತ ಸಂಭವಿಸುವುದು ಸಾಮಾನ್ಯವಾಗಿದೆ.

ರಾಜ್ಯ ಹಾಗೂ ಜಿಲ್ಲಾ ರಸ್ತೆಗಳು ಮಾತ್ರವಲ್ಲದೆ, ಗ್ರಾಮೀಣ ರಸ್ತೆಗಳ ಇಕ್ಕೆಲದಲ್ಲಿನ ಪಾದಚಾರಿ ರಸ್ತೆಗಳ ಮೇಲೆ ವಿವಿಧ ಜಾತಿಯ ಪೊದೆ ಹಾಗೂ ಕಳೆಗಿಡಗಳು ದಟ್ಟವಾಗಿ ಬೆಳೆದು ನಿಂತಿವೆ. ರಸ್ತೆ ಬದಿಯ ಮಾವಿನ ತೋಟಗಳ ಹಸಿರು ಬೇಲಿಯೂ ರಸ್ತೆಯನ್ನು ಆಕ್ರಮಿಸಿಕೊಂಡಿದೆ.

ತಿರುವುಗಳಿಂದ ಕೂಡಿರುವ ಗ್ರಾಮೀಣ ರಸ್ತೆಗಳು ಗಿಡಗಂಟಿಗಳಿಂದಾಗಿ ಕಿರಿದಾಗಿವೆ. ಈಗ ಪ್ರತಿ ಗ್ರಾಮದಲ್ಲೂ ವಾಹನಗಳಿವೆ. ಕಾರು, ಟೆಂಪೋ, ಟ್ರ್ಯಾಕ್ಟರ್, ದ್ವಿಚಕ್ರವಾಹನಗಳ ಸಂಖ್ಯೆ ಹೆಚ್ಚಿದೆ. ಶಾಲಾ ವಾಹನಗಳು, ಗ್ರಾಮೀಣ ಬಸ್‌ಗಳಲ್ಲಿ ಸಂಚರಿಸುತ್ತವೆ. ಅಂಕುಡೊಂಕಿನ ರಸ್ತೆಗಳಲ್ಲಿ ವೇಗವಾಗಿ ಚಲಿಸುವ ವಾಹನಗಳು ಪಾದಚಾರಿಗಳಿಗೆ ಜೀವಭಯ ಉಂಟುಮಾಡಿವೆ. ಅದರಲ್ಲೂ ಮಾವಿನ ಕಾಯಿ ಕಟಾವು ಮಾಡುವ ಸಂದರ್ಭದಲ್ಲಿ ತಾಲ್ಲೂಕಿನಾದ್ಯಂತ ನೂರಾರು ಟ್ರ್ಯಾಕ್ಟರ್‌ಗಳು ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸುತ್ತವೆ.

ADVERTISEMENT

ಎರಡೂ ಕಡೆಯಿಂದ ಬರುವ ವಾಹನಗಳು, ಕಿರಿದಾದ ರಸ್ತೆಗಳಲ್ಲಿ ಸಾಗಬೇಕು. ಸಂದರ್ಭ ಬಂದಾಗ ಪಕ್ಕಕ್ಕೆ ಹೋಗಲು ಪಾದಚಾರಿ ರಸ್ತೆ ಮೇಲೆ ಬೆಳೆದಿರುವ ಗಿಡಗಂಟಿ ಅಡ್ಡಿಯಾಗಿದೆ. ದೊಡ್ಡ ವಾಹನಗಳು ಬಂದರೆ ಪಾದಚಾರಿಗಳು ಗಿಡಗಳಲ್ಲಿ ತೂರಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

‘ಪಾದಚಾರಿ ರಸ್ತೆ ಮೇಲೆ ಬೆಳೆದು ನಿಂತಿರುವ ಪೊದೆಗಳಿಂದಾಗಿ, ಸಂಚಾರ ದುಸ್ತರವಾಗಿದೆ. ಹುಲ್ಲು ಹೊಟ್ಟು ಹೊತ್ತು ಹೋಗುವಾಗ, ದನಕರು ಹಿಡಿದು ಸಾಗುವಾಗ ವಾಹನಗಳ ಬಂದರೆ ಭಯದಿಂದ ಹೃದಯ ಬಡಿತ ಹೆಚ್ಚುತ್ತದೆ’ ಎಂದು ನಲ್ಲಪಲ್ಲಿ ಗ್ರಾಮದ ರೈತ ಕೃಷ್ಣೇಗೌಡ ಪ್ರಜಾವಾಣಿಗೆ ತಿಳಿಸಿದರು.

‘ಪಾದಚಾರಿ ರಸ್ತೆಗಳ ಮೇಲೆ ಬೆಳೆದಿರುವ ಗಿಡಗಂಟಿ ತೆರವುಗೊಳಿಸುವ ವ್ಯವಸ್ಥೆ ಜೀವಂತವಾಗಿಲ್ಲ ಎನಿಸುತ್ತದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದೇ ರಸ್ತೆಗಳ ಮೇಲೆ ಓಡಾಡುತ್ತಾರೆ. ಸಮಸ್ಯೆ ಬಗ್ಗೆ ಗಮನ ನೀಡುವುದಿಲ್ಲ. ಜಾಣ ಕುರುಡು ಪ್ರದರ್ಶಿಸುತ್ತಾರೆ’ ಎಂಬುದು ರೈತ ಮಹಿಳೆ ಮುನಿಯಮ್ಮ ಅವರ ಅಳಲು.

ಪಾದಚಾರಿ ರಸ್ತೆ ಆಕ್ರಮಿಸಿರುವ ಕಳೆಗಿಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.