ಕೋಲಾರ: ತಾಲ್ಲೂಕಿನ ತಿಪ್ಪೇನಹಳ್ಳಿಯಲ್ಲಿ ರಾಜಕೀಯ ದುರುದ್ದೇಶದ ಕಾರಣಕ್ಕೆ ರೈತರ ಹಿಪ್ಪುನೇರಳೆ ಬೆಳೆಗೆ ಕಿಡಿಗೇಡಿಗಳು ಮಂಗಳವಾರ ವಿಷ ಸಿಂಪಡಣೆ ಮಾಡಿದ್ದು, ವಿಷಪೂರಿತ ಹಿಪ್ಪುನೇರಳೆ ಸೊಪ್ಪು ತಿಂದ ರೇಷ್ಮೆ ಹುಳುಗಳು ಮೃತಪಟ್ಟಿವೆ.
ತಿಪ್ಪೇನಹಳ್ಳಿ ಗ್ರಾಮದ ರೈತರಾದ ಸೀತಾರಾಮ, ಮಂಜುನಾಥ್, ಶಿವಾನಂದ, ರಮೇಶ್, ನಾಗರಾಜ್ ಮತ್ತು ಎಂ.ರಮೇಶ್ ಅವರ ಹಿಪ್ಪು ನೇರಳೆ ತೋಟಕ್ಕೆ ವಿರೋಧಿಗಳು ವಿಷ ಸಿಂಪಡಣೆ ಮಾಡಿದ್ದರು. ಈ ಸಂಗತಿ ತಿಳಿಯದ ರೈತರು ಹಿಪ್ಪುನೇರಳೆ ಸೊಪ್ಪ ಕತ್ತರಿಸಿಕೊಂಡು ಬಂದು ರೇಷ್ಮೆ ಹುಳುಗಳಿಗೆ ಹಾಕಿದ್ದರು. ಈ ಸೊಪ್ಪು ತಿಂದ ಹುಳುಗಳು ಕ್ಷಣ ಮಾತ್ರದಲ್ಲಿ ಮೃತಪಟ್ಟಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಘಟನೆಯ ವಿಷಯ ತಿಳಿದ ರೇಷ್ಮೆ ಇಲಾಖೆ ವೇಮಗಲ್ ವಿಸ್ತರ್ಣಾಧಿಕಾರಿ ಚಂದ್ರಶೇಖರ್‌ಗೌಡ ಅವರು ರೈತರ ಹುಳು ಸಾಕಾಣೆ ಮನೆ ಹಾಗೂ ಹಿಪ್ಪುನೇರಳೆ ತೋಟಗಳಿಗೆ ಭೇಟಿ ನೀಡಿ ಸೊಪ್ಪಿನ ಮಾದರಿ ಸಂಗ್ರಹಿಸಿದರು.
‘ನಾಲ್ಕನೇ ಜ್ವರಕ್ಕೆ ಬಂದಿದ್ದ ರೇಷ್ಮೆ ಹುಳುಗಳು 10 ದಿನದಲ್ಲಿ ಗೂಡು ಕಟ್ಟುವ ಹಂತದಲ್ಲಿದ್ದವು. ಬೆಳೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೆವು. ಇದೀಗ ಹುಳುಗಳು ಮೃತಪಟ್ಟಿರುವುದರಿಂದ ದಿಕ್ಕು ತೋಚದಂತಾಗಿದೆ’ ಎಂದು ರೈತರು ಅಳಲು ತೋಡಿಕೊಂಡರು.
‘ರೈತರ ಹಿಪ್ಪುನೇರಳೆ ತೋಟಗಳಿಗೆ ವಿಷ ಸಿಂಪಡಣೆ ಮಾಡಿರುವುದು ದೃಢಪಟ್ಟಿದೆ. ವಿಷಪೂರಿತ ಸೊಪ್ಪಿನ ಸೇವನೆಯಿಂದ ಹುಳುಗಳು ಮೃತಪಟ್ಟಿವೆ. ಬೆಳೆ ಕಳೆದುಕೊಂಡು ನಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ಕಲ್ಪಿಸುತ್ತೇವೆ’ ಎಂದು ಚಂದ್ರಶೇಖರ್‌ಗೌಡ ಭರವಸೆ ನೀಡಿದರು.
ಘಟನೆ ಸಂಬಂಧ ಬಗ್ಗೆ ರೈತರು ಜಿಲ್ಲಾಧಿಕಾರಿ, ರೇಷ್ಮೆ ಇಲಾಖೆ ಹಾಗೂ ವೇಮಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.