ADVERTISEMENT

ಇಸ್ಪೀಟ್‌ ಅಡ್ಡೆ ಮೇಲೆ ಪೊಲೀಸರ ದಾಳಿ: ಕೆರೆಗೆ ಜಿಗಿದ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 20:03 IST
Last Updated 12 ಜೂನ್ 2024, 20:03 IST
   

ಶ್ರೀನಿವಾಸಪುರ: ತಾಲ್ಲೂಕಿನ ರಾಯಲ್ಪಾಡು ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಂಡಾರೆಡ್ಡಿ ಚೆರುವು ಸಮೀಪದ ಇಸ್ಪೀಟ್‌ ಅಡ್ಡೆ ಮೇಲೆ ಬುಧವಾರ ಸಂಜೆ ಪೊಲೀಸರು ದಾಳಿ ನಡೆಸಿದಾಗ ಭೀತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವ್ಯಕ್ತಿಯೊಬ್ಬರು ಗುಡಸವಾರಪಲ್ಲಿ ಕೆರೆಗೆ ಜಿಗಿದು ಸಾವನ್ನಪ್ಪಿದ್ದಾರೆ.

ತಾಲ್ಲೂಕಿನ ಗುರುವಲೊಳ್ಳಗಡ್ಡ ಗ್ರಾಮದ ನಿವಾಸಿ ನರಸಿಂಹ (45) ಮೃತ ವ್ಯಕ್ತಿ. ಗುರುವಾರ ಮೃತದೇಹ ಪತ್ತೆಯಾಗಿದೆ.

ಕೊಂಡಾರೆಡ್ಡಿ ಚೆರುವು ಸಮೀಪ ನಡೆಯುತ್ತಿದ್ದ ಇಸ್ಪೀಟ್‌ ಅಡ್ಡೆ ಯೊಂದರಲ್ಲಿ ಅಂದರ್ ಬಾಹರ್ ಆಟ ನಡೆಯುತಿತ್ತು ಎಂಬುದು ಗೊತ್ತಾಗಿದೆ. ಈ ಅಡ್ಡೆಗೆ ಸಮೀಪದ ಮೂಲ ಗೊಲ್ಲಪಲ್ಲಿ ಊರಹಬ್ಬದ ಬಂದೋಬಸ್ತ್‌ಗಾಗಿ ಪೊಲೀಸರು ಬಂದಿದ್ದರು. ಜಾತ್ರೆಗೆ ಬಂದ ಪೊಲೀಸರು ಮಾಹಿತಿ ತಿಳಿದು ಕೊಂಡಾರೆಡ್ಡಿ ಚೆರುವು ಗ್ರಾಮಕ್ಕೂ ಬಂದಿದ್ದಾರೆ.

ADVERTISEMENT

ಪೊಲೀಸರ ದಾಳಿ ಹೆದರಿದ ಆರೋಪಿಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಈ ಪೈಕಿ ನರಸಿಂಹ ಎಂಬುವರು ಕೆರೆಗೆ ಜಿಗಿದಿದ್ದಾರೆ. ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮನೆಯಿಂದ ತೆರಳಿದ್ದ ನರಸಿಂಹ ವಾಪಸ್‌ ಬಾರದ ಕಾರಣ ಪತ್ನಿ ಸುಶೀಲಮ್ಮ ಹಾಗೂ ಕುಟುಂಬದವರು ಗಾಬರಿಯಾಗಿದ್ದಾರೆ. ನರಸಿಂಹ ಕೆರೆಯಲ್ಲಿ ಮುಳುಗಿ ಮೃತರಾಗಿರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಕುಟುಂಬದವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಬುಧವಾರ ರಾತ್ರಿಯೇ ಮೃತದೇಹ ಶೋಧಕ್ಕೆ ಇನ್‌ಸ್ಪೆಕ್ಟರ್‌ ಯೋಗೀಶ್‌ ಕುಮಾರ್‌, ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಕಾರ್ಯಾಚರಣೆ ಆರಂಭಿಸಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆಗೆ ಮೃತ ದೇಹ ಪತ್ತೆಯಾಗಿದೆ. ಕೆರೆ ಪಕ್ಕ ದ್ವಿಚಕ್ರ ವಾಹನ ಇರುವುದು ಕಂಡುಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.