ಕೋಲಾರ: ನಗರದ ಹೃದಯಭಾಗದಲ್ಲಿರುವ ಕೋಲಾರಮ್ಮ ಕೆರೆ ಏರಿ ಮೇಲೆ ಸಾಲುಸಾಲಾಗಿ ಬಿದ್ದಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣಪತಿ ವಿಗ್ರಹಗಳು ಪರಿಸರಕ್ಕೆ ಮಾರಕವಾಗುವ ಆತಂಕ ತಂದೊಡ್ಡಿವೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ದ್ಯೋತಕವಾಗಿ ಕಾಣಿಸುತ್ತಿವೆ.
ನಗರ ಪ್ರದೇಶದಲ್ಲಿ ಪ್ರತಿಷ್ಠಾಪಿಸುವ ಗಣೇಶನ ವಿಗ್ರಹಗಳನ್ನು ಒಂದೆಡೆ ವಿಸರ್ಜನೆಗೆಂದು ಕೋಲಾರ ನಗರಸಭೆಯಿಂದ ಕನ್ನಡ ಭವನ ಬಳಿ ಕೃತಕ ಕೊಳ ನಿರ್ಮಿಸಲಾಗಿದೆ. ಇದೇ ಕೊಳದಲ್ಲಿ ಪಿಒಪಿ ಗಣೇಶನ ವಿಗ್ರಹಗಳನ್ನೂ ವಿಸರ್ಜಿಸಿರುವುದು ಕಂಡುಬಂದಿದೆ.
ಕೊಳ ಗುತ್ತಿಗೆ ಪಡೆದಿರುವವರು ಈ ಬಾರಿ ಗಣೇಶನ ವಿಗ್ರಹ ವಿಸರ್ಜನೆಗೆಂದು ಸಚ್ಛತೆಗೆ ಮುಂದಾದಾಗ 15ಕ್ಕೂ ಹೆಚ್ಚು ಪಿಒಪಿ ವಿಗ್ರಹಗಳು ಪತ್ತೆಯಾಗಿವೆ. ಇವೆಲ್ಲಾ ಕಳೆದ ಬಾರಿ ಗಣೇಶನ ಹಬ್ಬದಲ್ಲಿ ವಿಸರ್ಜಿಸಿದ್ದ ಪಿಒಪಿ ಗಣೇಶನ ಮೂರ್ತಿಗಳಾಗಿವೆ.
ಪಿಒಪಿ ಗಣೇಶ ವಿಗ್ರಹಗಳನ್ನು ಕೊಳದಿಂದ ತೆಗೆದು ಕೋಲಾರಮ್ಮ ಕೆರೆ ಏರಿ ಮೇಲೆ ಜೋಡಿಸಿಟ್ಟಿದ್ದಾರೆ. ಸ್ವಲ್ಪದಿನದಲ್ಲಿ ಈ ವಿಗ್ರಹಗಳು ಕೆರೆ ಒಡಲನ್ನು ಸೇರುವ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಪರಿಸರಕ್ಕೆ ಮಾರಕವಾಗುವ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ಬಳಕೆ ನಿಷೇಧ ಮಾಡಿ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿವೆ.
ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನೂ ನೀಡಿವೆ. ಆದರೂ ಪಿಒಪಿ ಮೂರ್ತಿ ಮಾರಾಟ ಮಾಡುತ್ತಿರುವುದಕ್ಕೆ ಹಾಗೂ ವಿಸರ್ಜನೆ ಮಾಡುತ್ತಿರುವುದಕ್ಕೆ ಕೆರೆ ಏರಿ ಎಸೆದಿರುವ ವಿಗ್ರಹಗಳೇ ಸಾಕ್ಷಿಯಾಗಿವೆ.
‘ರಾತ್ರಿ ವೇಳೆ ಪಿಒಪಿ ಅಥವಾ ಮಣ್ಣಿನ ಮೂರ್ತಿಗಳ ವ್ಯತ್ಯಾಸ ಪತ್ತೆ ಹಚ್ಚುವುದು ಕಷ್ಟ. ಹೀಗಾಗಿ, ಕಳೆದ ಬಾರಿ ಪಿಒಪಿ ಮೂರ್ತಿ ವಿಸರ್ಜಿಸಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಈ ಬಾರಿ ಎಚ್ಚರ ವಹಿಸುತ್ತೇವೆ’ ಎಂದು ಕೋಲಾರ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯದ ಉತ್ತರ ನೀಡುತ್ತಾರೆ.
ಈ ಬಾರಿಯೂ ಹಬ್ಬಕ್ಕೆ 2-3 ದಿನಗಳ ಮೊದಲೇ ನಗರದ ಹಲವೆಡೆ ಪಿಒಪಿ ಹಾಗೂ ರಾಸಾಯನಿಕ ಬಣ್ಣ ಲೇಪಿತ ಮೂರ್ತಿ ಮಾರಾಟ ನಡೆದಿರುವುದು ಕಂಡುಬಂದಿದೆ.
ಆಂಧ್ರಪ್ರದೇಶ, ತಮಿಳುನಾಡಿನಿಂದ ತಂದು ಇಟ್ಟುಕೊಳ್ಳಲಾಗಿದೆ. ಮಣ್ಣು, ಪೇಪರ್ ಗಣಪನ ಮಾರಾಟ ಮಾಡುತ್ತಿರುವ ಬಗ್ಗೆ ಇತರ ವರ್ತಕರೇ ದೂರುತ್ತಿದ್ದಾರೆ.
ಪಿಒಪಿ ಗಣೇಶನ ಮೂರ್ತಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲೆ ಬಂಗಾರಪಟ್ಟಣದಲ್ಲಿ ಶುಕ್ರವಾರ ತಹಶೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳು ಮಾರಾಟ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
‘ಬಂಗಾರಪೇಟೆ ಪಟ್ಟಣದಲ್ಲಿ ನಾವು ಹಾಗೂ ತಹಶೀಲ್ದಾರ್ ಜೊತೆಗೂಡಿ ಗಣೇಶ ಮೂರ್ತಿಗಳನ್ನು ಪರಿಶೀಲಿಸಿದ್ದೇವೆ. ಎಲ್ಲೂ ಪಿಒಪಿ ಗಣೇಶ ಮೂರ್ತಿ ಇರುವುದು ಪತ್ತೆಯಾಗಿಲ್ಲ’ ಎಂದು ಬಂಗಾರಪೇಟೆ ಪುರಸಭೆ ಪರಿಸರ ಎಂಜಿನಿಯರ್ ಮಹೇಶ್ ತಿಳಿಸಿದರು.
ಮಾರಕ ಪಿಒಪಿ ಗಣೇಶ ವಿಗ್ರಹ ವಿಸರ್ಜನೆಯಿಂದ ಇಡೀ ಪರಿಸರ ಕಲುಷಿತವಾಗುತ್ತಿದೆ. ರಾಸಾಯನಿಕ ಅಂಶಗಳಿರುವ ಇಂಥ ವಿಗ್ರಹಗಳನ್ನು ಕೆರೆ ಕುಂಟೆಗಳಲ್ಲಿ ಮುಳುಗಿಸುವುದರಿಂದ ನೀರು ವಿಷಪೂರಿತವಾಗುತ್ತದೆ. ಕ್ರಿಮಿಕೀಟಗಳಿಂದ ಹಿಡಿದು ಯಾವುದೇ ಜೀವಿ ಬದುಕುಳಿಯುವುದಿಲ್ಲ. ಇಡೀ ಪರಿಸರಕ್ಕೆ ಮಾರಕವಾಗುತ್ತದೆ. ಕೆರೆ ನಾಶವಾಗುತ್ತದೆ ಸುತ್ತಲಿನ ಜನರ ಆರೋಗ್ಯದ ಮೇಲೂ ಪರಿಣಾಮ ಉಂಟಾಗುತ್ತದೆ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತೆ ಎದ್ದು ಕಾಣುತ್ತದೆ ಜನರಿಗೂ ಪರಿಸರ ಕಾಳಜಿ ಇಲ್ಲವಾಗಿದೆ ಪುರುಷೋತ್ತಮ ರಾವ್ ಪರಿಸರ ಲೇಖಕ ಕೋಲಾರ
‘ಮಣ್ಣಿನಲ್ಲಿ ದೊಡ್ಡ ಗಾತ್ರದ ಗಣಪತಿಗಳನ್ನು ತಯಾರಿಸಿ ಮಾರಾಟಕ್ಕಿಟ್ಟಿದ್ದೇವೆ. ಆದರೆ ನಮಗೆ ವ್ಯಾಪಾರವಿಲ್ಲದಂತಾಗಿದೆ. ಪಲಮನೇರು ಮದನಪಲ್ಲಿ ಚಿತ್ತೂರಿನಿಂದ ಪಿಒಪಿ ಗಣಪನ ಮೂರ್ತಿ ತಂದು ಮಾರಾಟ ಮಾಡುತ್ತಿದ್ದಾರೆ ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ನಮಗೆ ಎಚ್ಚರಿಕೆ ನೀಡುವ ಅಧಿಕಾರಿಗಳು ಬಡಾವಣೆಗಳಿಗೆ ತೆರಳಿ ಪಿಒಪಿ ಮೂರ್ತಿಗಳನ್ನು ಇಟ್ಟಿರುವವರ ಮೇಲೆ ಕ್ರಮಕೈಗೊಳ್ಳಲಿ’ ಎಂದು ವರ್ತಕರಾದ ಹರೀಶ್ ಹಾಗೂ ಆನಂದ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.