ಕೆಜಿಎಫ್: ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇರೆಗೆ ಬಿಜೆಪಿ ಮುಖಂಡ ಸೇರಿದಂತೆ ಇಬ್ಬರನ್ನು ರಾಬರ್ಟಸನ್‌ಪೇಟೆ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ಆಂಡರಸನ್‌ಪೇಟೆಯ ಬಿಜೆಪಿ ಮುಖಂಡ ನವೀನ್ ಜೈನ್ ಮತ್ತು ರಾಬರ್ಟಸನ್‌ಪೇಟೆಯ ವರ್ತಕ ಚೇತನ್ ಭಾಟಿಯಾ ಎಂಬುವರನ್ನು ಬಂಧಿಸಲಾಗಿದೆ.
ತೆರಿಗೆ ಕಟ್ಟುವ ವಿಚಾರಕ್ಕೆ ಮುಸ್ಲಿಂ ಸಮುದಾಯವನ್ನು ಟೀಕಿಸಿದ್ದ ಕಾರ್ಟೂನ್‌ವೊಂದನ್ನು ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದರಿಂದ ಸಿಟ್ಟಿಗೆದ್ದ ಮುಸ್ಲಿಂ ಸಮುದಾಯದ ನೂರಾರು ಮಂದಿ ಶುಕ್ರವಾರ ರಾತ್ರಿ ರಾಬರ್ಟಸನ್‌ಪೇಟೆ ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು. ಆರೋಪಿಗಳನ್ನು ಬಂಧಿಸಿ, ಅವರಿಂದ ಕ್ಷಮೆ ಕೇಳಿಸಬೇಕೆಂದು ಒತ್ತಾಯಿಸಿದರು.
ಪೊಲೀಸ್ ಠಾಣೆ ಮತ್ತು ಮುಂಭಾಗದ ರಸ್ತೆಯಲ್ಲಿ ಸೇರಿದ್ದ ಉದ್ರಿಕ್ತ ಗುಂಪಿನೊಂದಿಗೆ ಸ್ಥಳಕ್ಕೆ ಬಂದ ಡಿವೈಎಸ್‌ಪಿ ಪಾಂಡುರಂಗ ಮಾತುಕತೆ ನಡೆಸಿದರು. ತಕ್ಷಣ ಇಬ್ಬರು ಆರೋಪಿಗಳನ್ನು ಬಂಧಿಸಿ, ಸಮುದಾಯದ ಮುಖಂಡರಿಗೆ ಮಾಹಿತಿ ನೀಡಿದರು.
ಮುಸ್ಲಿಂ ಸಮುದಾಯದ ಮುಖಂಡರು ಸಹ ಉದ್ರಿಕ್ತ ಗುಂಪನ್ನು ಸಮಾಧಾನಪಡಿಸಿದರು. ಈ ವಿಷಯವಾಗಿ ಯಾರೂ ಕಾನೂನು ಮೀರಿ ವರ್ತಿಸಬಾರದು. ಸಂಯಮ ಕಾಪಾಡಿಕೊಂಡು ಬರಬೇಕು. ಯಾವುದೇ ಕೋಮು ಪ್ರಚೋದನಕಾರಿ ಮತ್ತು ಅವಹೇಳನಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬಾರದು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.