ಕೋಲಾರ: ‘ಕೃಷಿ, ಪಶುಪಾಲನೆ ಮಾದರಿಯಲ್ಲಿ ಕೋಳಿ ಸಾಕಾಣಿಕೆ ವಿಷಯದಲ್ಲಿ ಪದವಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಉತ್ತೇಜನ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಒತ್ತಾಯಿಸಿದರು.
ವಿಧಾನ ಪರಿಷತ್‌ನಲ್ಲಿ ಗುರುವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿ, ‘ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಕೋಳಿ ಸಾಕಾಣಿಕೆಗೆ ಹೆಚ್ಚಿನ ನೆರವು ನೀಡಲಾಗುತ್ತಿದೆ’ ಎಂದು ಹೇಳಿದರು.
‘ಕೃಷಿ ಮಾದರಿಯಲ್ಲೇ ಕುಕ್ಕುಟೋದ್ಯಮ ಬೃಹತ್ ಆಗಿ ಬೆಳೆದಿದ್ದು, ರಾಜ್ಯದಲ್ಲಿ ಕೋಳಿ ಸಾಕಾಣಿಕೆದಾರರಿಗೆ ಅಗತ್ಯ ನೆರವು ಒದಗಿಸಬೇಕು. ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಿಸಲು ಭೂಪರಿವರ್ತನೆಯ ನಿಯಮಗಳನ್ನು ಸಡಿಲಗೊಳಿಸಬೇಕು’ ಎಂದು ಮನವಿ ಮಾಡಿದರು.
‘ಈವರೆಗೆ 25 ಎಚ್.ಪಿ ಸಾಮರ್ಥ್ಯದ ಟ್ರ್ಯಾಕ್ಟರ್‌ಗೆ ಮಾತ್ರ ಸಹಾಯಧನ ನೀಡಲಾಗುತ್ತಿತ್ತು. ಇದೀಗ 45 ಎಚ್.ಪಿ ಸಾಮರ್ಥ್ಯದವರೆಗೂ ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ ನೀಡುವುದಾಗಿ ಸರ್ಕಾರ ಘೋಷಿಸಿರುವುದು ಸ್ವಾಗತಾರ್ಹ. ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಸಹಾಯಧನಕ್ಕೆ ಪರಿಶಿಷ್ಟರಿಂದ 200ಕ್ಕೂ ಹೆಚ್ಚು ಅರ್ಜಿ ಬಂದಿದ್ದು, ಕನಿಷ್ಠ 50 ಮಂದಿಗಾದರೂ ಸಹಾಯಧನ ನೀಡಬೇಕು’ ಎಂದು ಕೋರಿದರು.
‘ಕೋಲಾರ ಜಿಲ್ಲೆಯಲ್ಲಿ 71 ಬಗೆಯ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಆದರೆ, ರೈತರಿಗೆ ತೋಟಗಾರಿಕೆ ತಾಂತ್ರಿಕತೆ ಕುರಿತು ಮಾಹಿತಿ ನೀಡಲು ಸಿಬ್ಬಂದಿ ಕೊರತೆಯಿದೆ. ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಗೆ ಮಂಜೂರಾಗಿರುವ 226 ಹುದ್ದೆಗಳ ಪೈಕಿ 95 ಮಾತ್ರ ಭರ್ತಿಯಾಗಿವೆ. ಉಳಿದ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.
ಸ್ವಾಗತಾರ್ಹ: ‘ಮಹಿಳಾ ಸಂಘಗಳಿಗೆ ಉದ್ಯಮ ಸ್ಥಾಪಿಸಲು ಶೇ 4ರ ಬಡ್ಡಿ ದರದಲ್ಲಿ ಸಾಲ ನೀಡುವ ಸರ್ಕಾರದ ಪ್ರಸ್ತಾವ ಸ್ವಾಗತಾರ್ಹ. ಈಗಾಗಲೇ ಕರ್ನಾಟಕ ರಾಜ್ಯ ಹಣಕಾಸು ನಿಗಮದಿಂದ ಮಹಿಳೆಯರಿಗೆ ಈ ಸೌಲಭ್ಯ ಸಿಗುತ್ತಿದೆ. ಸಹಕಾರಿ ಬ್ಯಾಂಕ್‌ಗಳಿಂದ ಶೂನ್ಯ ಬಡ್ಡಿ ಸಾಲ ಸೌಲಭ್ಯ ಮುಂದುವರಿಸಿರುವುದು ಒಳ್ಳೆಯದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಕೋಲಾರ ನಗರದಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆ ಕಾರ್ಯ ಅವಲಂಬಿಸಿರುವ ಸಾಕಷ್ಟು ಬಡ ಕುಟುಂಬಗಳಿವೆ. ಆದರೆ, ಈ ಕುಟುಂಬಗಳಿಗೆ ಈವರೆಗೂ ಯಾವುದೇ ಸರ್ಕಾರ ವಸತಿ ಸೌಕರ್ಯ ಕಲ್ಪಿಸಿಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಿ ಬಡ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.
‘ಕೋಲಾರ ಜಿಲ್ಲೆಯು ರೇಷ್ಮೆ ಉದ್ಯಮ ಅಲಂಬಿಸಿದ್ದು, ಸ್ಥಳೀಯ ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ಚೀನಾ ರೇಷ್ಮೆ ಆಮದು ತಡೆಯಬೇಕು. ರೇಷ್ಮೆ ಉದ್ಯಮಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.