ಕೋಲಾರ: ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.
ನಗರದ ಮೆಕ್ಕೆ ವೃತ್ತದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲೆಯು ಅಭಿವೃದ್ಧಿ ವಿಚಾರದಲ್ಲಿ ತೀರಾ ಹಿಂದುಳಿದಿದೆ. ಜಿಲ್ಲೆಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದ್ದು, ಇವುಗಳ ಪರಿಹಾರಕ್ಕೆ ಬಜೆಟ್‌ನಲ್ಲಿ ಒತ್ತು ಕೊಟ್ಟಿಲ್ಲ. ರಾಜ್ಯ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.
‘ಕೆ.ಸಿ ವ್ಯಾಲಿ ಯೋಜನೆ 2ನೇ ಹಂತದ ಕಾಮಗಾರಿ, ಎಪಿಎಂಸಿ ಮಾರುಕಟ್ಟೆ ಸ್ಥಳಾಂತರ, ಟೊಮೆಟೊ ಮತ್ತು ಮಾವು ಸಂಸ್ಕರಣಾ ಘಟಕ ಸ್ಥಾಪನೆ, ಜಿಲ್ಲಾ ಕೇಂದ್ರದಲ್ಲಿ ವರ್ತುಲ ರಸ್ತೆ ನಿರ್ಮಾಣ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ. ಸೇರಿದಂತೆ ಜಿಲ್ಲೆಯ ಜನರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಮುಖ್ಯಮಂತ್ರಿಗಳು ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ನಿರೀಕ್ಷೆ ಹುಸಿ: ‘ಬರಪೀಡಿತ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಿಂದಾಗಿ ಕೃಷಿಗೆ ಸಮಸ್ಯೆಯಾಗಿದೆ. ಬಡ್ಡಿ ಸಾಲ ಮಾಡಿ ಬೆಳೆ ಬೆಳೆದ ರೈತರು ಬೆಲೆ ಕುಸಿತ ಹಾಗೂ ಬೆಳೆ ನಾಶದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಜಿಲ್ಲೆಯ ಮಾಲೂರು, ಬಂಗಾರಪೇಟೆ ತಾಲ್ಲೂಕಿನಲ್ಲಿ ಕಾಡಾನೆ ಹಾವಳಿಯಿಂದ ಬೆಳೆ ನಷ್ಟವಾಗಿದೆ ಹಾಗೂ ಹಲವು ರೈತರು ಮೃತಪಟ್ಟಿದ್ದಾರೆ. ಕಾಡಾನೆ ದಾಳಿ ಸಮಸ್ಯೆಗೆ ಬಜೆಟ್‌ನಲ್ಲಿ ಪರಿಹಾರ ಸಿಗುವ ನಿರೀಕ್ಷೆ ಹುಸಿಯಾಗಿದೆ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
‘ಬಜೆಟ್‌ನಲ್ಲಿ ಜಿಲ್ಲೆಯ ಪ್ರಸ್ತಾಪವೇ ಇಲ್ಲ. ಮುಖ್ಯಮಂತ್ರಿಗಳು ಜಿಲ್ಲೆಗೆ ಬಜೆಟ್‌ನಲ್ಲಿ ನಯಾಪೈಸೆ ಅನುದಾನ ನೀಡದೆ ಅನ್ಯಾಯ ಮಾಡಿದ್ದಾರೆ. ಮಹತ್ವದ ಯೋಜನೆಗಳ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನರಿಗೆ ಬಿಜೆಪಿ ಸರ್ಕಾರ ದೊಡ್ಡ ಆಘಾತ ನೀಡಿದೆ. ಸರ್ಕಾರಕ್ಕೆ ಜಿಲ್ಲೆಯ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಂಧ್ರಕ್ಕೆ ಸೇರಿಸಲಿ: ‘ಬಜೆಟ್‌ಗೂ ಮುನ್ನ ಜಿಲ್ಲೆಯ ಸಮಸ್ಯೆಗಳ ಪಟ್ಟಿ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ ಕೋಲಾರವು ಕರ್ನಾಟಕ ರಾಜ್ಯದಲ್ಲಿ ಇಲ್ಲವೆಂಬಂತೆ ನಡೆದುಕೊಂಡಿದೆ. ಸರ್ಕಾರ ಜಿಲ್ಲೆಯನ್ನು ನಿರ್ಲಕ್ಷಿಸುವ ಬದಲು ಆಂಧ್ರಪ್ರದೇಶಕ್ಕೆ ಸೇರಿಸಬೇಕು. ಇಲ್ಲದಿದ್ದರೆ ಜನರು ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಕೆ ನೀಡಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್, ಸದಸ್ಯರಾದ ಅನಿಲ್, ಕಿಶೋರ್, ಕಿರಣ್, ನಾಗೇಶ್, ತಿಮ್ಮಣ್ಣ, ಚಲಪತಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.