ಕೋಲಾರ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶ್ರೀನಿವಾಸಪುರ ಪಟ್ಟಣದ ಗಂಗೋತ್ರಿ ಪಿಯು ಕಾಲೇಜಿನ ಎಸ್.ಎಂ.ಕೌಶಿಕ್ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
ಆಂಧ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ, ತೆಲುಗು ಭಾಷೆ ಪ್ರಭಾವವಿರುವ ಗ್ರಾಮೀಣ ಪ್ರದೇಶವಾದ ಶ್ರೀನಿವಾಸಪುರ ಶೈಕ್ಷಣಿಕವಾಗಿ ಇದೇ ಮೊದಲ ಬಾರಿ ಇಂಥ ಅದ್ಭುತ ಸಾಧನೆ ಮಾಡಿದೆ.
'ನಿತ್ಯ ಎರಡು ಗಂಟೆಯಷ್ಟೇ ಓದಿಗೆ ಮೀಸಲಿಡುತ್ತಿದ್ದೆ. ಯಾವುದೇ ಕೋಚಿಂಗ್ ಪಡೆದಿಲ್ಲ. ಟ್ಯೂಷನ್ ಗೆ ಹೋಗಿಲ್ಲ. ಮೊದಲ ಸ್ಥಾನ ಬರಬಹುದೆಂದು ಕನಸಿನಲ್ಲೂ ಯೋಚನೆ ಮಾಡಿರಲಿಲ್ಲ. ಅವಕಾಶ ಸಿಕ್ಕರೆ ಬೆಂಗಳೂರಿನ ಆರ್.ವಿ.ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದಬೇಕು ಅಂದುಕೊಂಡಿದ್ದೇನೆ' ಎಂದು ಕೌಶಿಕ್ 'ಪ್ರಜಾವಾಣಿ'ಗೆ ತಿಳಿಸಿದರು.
ಗಂಗೋತ್ರಿ ಪಿಯು ಕಾಲೇಜಿನ ಮಾಲೀಕ ಮುರಳೀನಾಥ್ ಪುತ್ರ ಕೌಶಿಕ್. ಸಹೋದರ ಈಶ್ವರ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
'ನಮ್ಮ ಪಾಲಿಗೆ ಇದು ಡಬಲ್ ಧಮಾಕಾ. ನನ್ನ ಮಾಲೀಕತ್ವದ ಕಾಲೇಜಿಗೆ ಇಡೀ ರಾಜ್ಯದಲ್ಲಿ ವಿಜ್ಞಾನದಲ್ಲಿ ಮೊದಲ ಸ್ಥಾನ ಬಂದಿದೆ. ಅದಕ್ಕೆ ಕಾರಣ ನನ್ನ ಪುತ್ರ' ಎಂದು ಮುರಳೀನಾಥ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.