ADVERTISEMENT

ಮಲದ ಗುಂಡಿ ಸ್ವಚ್ಛತೆಗೆ ಮಕ್ಕಳ ಬಳಕೆ: ಜನಪ್ರತಿನಿಧಿಗಳು, ಅಧಿಕಾರಿಗಳು ಧಾಂಗುಡಿ

ನ್ಯಾಯಾಧೀಶರಿಂದ ತನಿಖೆಗೆ ಬಿಜೆಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಸೋಮವಾರ ಭೇಟಿ ನೀಡಿದ್ದ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹಾಗೂ ಬಿಜೆಪಿ ಮುಖಂಡರು ಮಲದ ಗುಂಡಿ ಪರಿಶೀಲಿಸಿದರು
ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಸೋಮವಾರ ಭೇಟಿ ನೀಡಿದ್ದ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹಾಗೂ ಬಿಜೆಪಿ ಮುಖಂಡರು ಮಲದ ಗುಂಡಿ ಪರಿಶೀಲಿಸಿದರು   

ಕೋಲಾರ: ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಲದ ಗುಂಡಿ ಸ್ವಚ್ಛತೆಗೆ ಮಕ್ಕಳನ್ನು ಬಳಸಿಕೊಂಡ ಪ್ರಕರಣ ಸಂಬಂಧ ಕೇಂದ್ರ, ರಾಜ್ಯ ಸಚಿವರು, ಸಂಸದವರು, ಶಾಸಕರು, ವಿರೋಧ ಪಕ್ಷದ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೋಮವಾರ ಧಾಂಗುಡಿ ಇಟ್ಟು ಪರಿಶೀಲಿಸಿದರು.

ಘಟನೆಯನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹಾಲಿ ನ್ಯಾಯಾಧೀಶರದಿಂದ ತನಿಖೆಗೆ ಆಗ್ರಹಿಸಿದರು. ಮಲದ ಗುಂಡಿ ಪರಿಶೀಲನೆ ವೇಳೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಮಕ್ಕಳನ್ನು ಮುಚ್ಚಿದ ಕೋಣೆಯಲ್ಲಿ ಮಾತನಾಡಿಸಿದರು. ವಿಧಾನ ಪರಿಷತ್ತಿನ ಬಿಜೆಪಿ ಮಹಿಳಾ ಸದಸ್ಯರು ಬಾಲಕಿಯರ ಸಮಸ್ಯೆ ಆಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ, ‘ಡಿ.1ರಂದು ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸಲಾಗಿದೆ. ಈ ವಿಚಾರ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಲಾಗಿದೆ. ಇವತ್ತು ಜಿಲ್ಲಾ ಉಸ್ತುವಾರಿ ಸಚಿವರು ಬಂದಿದ್ದಾರೆ. ಪ್ರಾಂಶುಪಾಲರು ಹಾಗೂ ಶಿಕ್ಷಕರ ವಿರುದ್ಧ ಮಾತ್ರ ಅಲ್ಲ; ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ನ್ಯಾಯಾಧೀಶರು ರಾಜ್ಯದ ಎಲ್ಲಾ ಕಡೆ ತೆರಳಿ ವರದಿ ನೀಡಿದರೆ ಸರ್ಕಾರದ ಕಾಮಾಲೆ ಕಣ್ಣು ತೆರೆಯಲು ಸಾಧ್ಯ’ ಎಂದರು

ADVERTISEMENT

‘ಮಕ್ಕಳಿಂದ ಶೌಚಾಲಯವನ್ನೂ ಸ್ವಚ್ಛಗೊಳಿಸಿದ್ದಾರೆ. ಇದು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ. ಸರ್ಕಾರ ಬದುಕಿದೆಯೇ, ಸತ್ತಿದೆಯೇ ಗೊತ್ತಾಗುತ್ತಿಲ್ಲ. ಕೆಲ ನಾಲಾಯಕ್‌ ಅಧಿಕಾರಿಗಳಿದ್ದಾರೆ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟ ಮಗುವಿನ ದೇಹ ಕೇಳಿದರೆ ದುಡ್ಡಿಗೆ ಪೀಡಿಸಿದ್ದಾರೆ’ ಎಂದು ಟೀಕಾ ಪ್ರಹಾರ ನಡೆಸಿದರು.

‘ಮಕ್ಕಳ ವಿಡಿಯೋ ಸೆರೆ ಹಿಡಿದಿರುವ ದೂರು ಇದೆ. ಹೆಣ್ಣು ಮಕ್ಕಳನ್ನು ಹಾಸ್ಟೆಲ್‍ಗೆ ಕಳಿಸುವುದು ಹೇಗೆ? ಇಲ್ಲಿ ಪ್ರಾಂಶುಪಾಲರು ಸೇರಿ 13 ಮಂದಿಗೆ ಮನೆ ಕೊಟ್ಟಿದ್ದರೂ ಮೂವರು ಮಾತ್ರ ವಾಸ್ತವ್ಯ ಇದ್ದಾರೆ’ ಎಂದು ಆಕ್ಷೇಪಿಸಿದರು.

ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿ ಎಚ್.ಡಿ.ಆನಂದ್ ಭೇಟಿ ನೀಡಿ ಮಕ್ಕಳ ಜೊತೆ ಚರ್ಚಿಸಿದರು. ಪ್ರತ್ಯೇಕ ವರದಿ ನೀಡುವುದಾಗಿ ಹೇಳಿದರು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌, ಸಂಸದ ಎಸ್‌.ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಭಾರತಿ ಶೆಟ್ಟಿ, ತೇಜಸ್ವಿನಿ ಗೌಡ, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ, ಜಿಲ್ಲಾ ಪಂಚಾಯಿತಿ ಸದಸ್ಯೆ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಸೋಮವಾರ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಾಗೂ ಶಾಸಕ ಕೆ.ವೈ.ನಂಜೇಗೌಡ ಮಲದ ಗುಂಡಿ ಪರಿಶೀಲಿಸಿದರು

ಮಕ್ಕಳ ಕಾಲಿಗೆ ಅಲರ್ಜಿ: ಅಶೋಕ್‌

‘ಮಲದ ಗುಂಡಿಗೆ ಇಳಿದಿದ್ದ ಮಕ್ಕಳ ಕಾಲಿಗೆ ಸಮಸ್ಯೆ ಉಂಟಾಗಿದೆ. ಒಬ್ಬರ ಕಾಲಿಗೆ ಗಾಜು ತಾಗಿದೆ. ಹಲವರಿಗೆ ಚರ್ಮದ ಅಲರ್ಜಿ ಆಗಿದೆ. ಮಲ ಗುಂಡಿಗೆ ಇಳಿದ ಈ ಮಕ್ಕಳ ಬಟ್ಟೆಗಳನ್ನು ಸುಟ್ಟು ಹಾಕಲಾಗಿದೆ. ಈ ಸರ್ಕಾರಕ್ಕೆ ಕಣ್ಣು ಇಲ್ಲ’ ಎಂದು ಪ್ರತಿಪಕ್ಷ ನಾಯಕ ಅಶೋಕ ಟೀಕಿಸಿದರು.

ವಸತಿ ಶಾಲೆ ಎಲ್ಲಾ ಸಿಬ್ಬಂದಿ ವರ್ಗಾವಣೆ–ಸುರೇಶ್‌

‘ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುವುದು. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಬೈರತಿ ಸುರೇಶ್‌ ಸುದ್ದಿಗಾರರಿಗೆ ತಿಳಿಸಿದರು. ‘ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವಿಷಾದ ವ್ಯಕ್ತಪಡಿಸಿದ್ದಾರೆ.

ತಪ್ಪು ಯಾರೇ ಮಾಡಿರಲಿ ಮಾದರಿ ಆಗುವ ರೀತಿಯಲ್ಲಿ ಶಿಕ್ಷೆ ನೀಡುತ್ತೇವೆ. ಘಟನೆಗೆ ಶಿಕ್ಷಕರಲ್ಲಿನ ಗುಂಪುಗಾರಿಕೆಯೇ ಕಾರಣವಾಗಿದೆ’ ಎಂದರು. ಅಧಿಕಾರಿಗಳು ಸಿಬ್ಬಂದಿ ಹಾಗೂ ಮಕ್ಕಳ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಮಲದ ಗುಂಡಿ ವೀಕ್ಷಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಎಸ್‌ಐಟಿ ತನಿಖೆಗೆ ಕೇಂದ್ರ ಸಚಿವ ಆಗ್ರಹ

ಪ್ರಕರಣವನ್ನು ಎಸ್‌ಐಟಿ ಮೂಲಕ ತನಿಖೆ ನಡೆಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಆಗ್ರಹಿಸಿದರು. ‘ಮಕ್ಕಳ ಕೈಯಲ್ಲಿ ಸ್ವಚ್ಛ ಮಾಡಿಸಿರುವುದು ಸಮಾಜಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಮಾಡಿರುವಂಥ ಅಪಮಾನ. ಇದನ್ನು ಯಾರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.