ADVERTISEMENT

ವಾಲ್ಮೀಕಿ ನಿಗಮ ಹಗರಣ | ಸಿಎಂ ರಾಜೀನಾಮೆ ನೀಡುವವರೆಗೆ ಹೋರಾಟ: ಆರ್.ಅಶೋಕ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 10:16 IST
Last Updated 28 ಜೂನ್ 2024, 10:16 IST
   

ಕೋಲಾರ: 'ವಾಲ್ಮೀಕಿ ನಿಗಮ ಹಗರಣದಲ್ಲಿ ಸಚಿವರಾಗಿದ್ದ ನಾಗೇಂದ್ರ ಪಾಲು ಶೇ 20 ಮಾತ್ರ; ಇನ್ನುಳಿದ ಶೇ 80 ಲೂಟಿ ಹೊಡೆದಿರುವುದು ಅಧಿಕಾರ ನಡೆಸುತ್ತಿರುವ ಪ್ರಮುಖರು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ವಿಧಾನಸಭೆ ಅಧಿವೇಶನದಲ್ಲಿ ಪಟ್ಟು ಹಿಡಿದು ಹೋರಾಟ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸಲ್ಲ. ಒಂದು ವಿಕೆಟ್‌ ಬಿದ್ದಿದೆ, ಇನ್ನೂ ಮೂರ್ನಾಲ್ಕು ವಿಕೆಟ್‌ ಬೀಳುವುದಿದೆ. ಹಾಗೆಯೇ ‌ಇನ್ನೂ ಎರಡು ಮೂರು ‌ಇಲಾಖೆಯಲ್ಲಿ ಅವ್ಯವಹಾರ ನಡೆದಿದ್ದು, ಹೊರತರುತ್ತೇವೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ತಿಳಿಸಿದರು.

ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನೆ ಬಳಿಕ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯ ಕಾಂಗ್ರೆಸ್‌ ಸರ್ಕಾರ ದಲಿತರ ₹ 187 ಕೋಟಿ ಲೂಟಿ ಹೊಡೆದು ಬಾರ್‌, ವೈನ್‌ ಸ್ಟೋರ್‌ಗಳಿಗೆ ನೀಡಿದೆ’ ಎಂದು ಆರೋಪಿಸಿದರು.

‘ಈಗ ಮತ್ತೆ ವರ್ಗಾವಣೆ ಶುರುವಾಗುತ್ತಿದೆ. ಮತ್ತೆ ಲೂಟಿ ಆರಂಭವಾಗಲಿದೆ’ ಎಂದು ನುಡಿದರು.

ADVERTISEMENT

‘ಮತ್ತೊಂದು ಕಡೆ ಮೂರು ಡಿಸಿಎಂ ಬೇಕೆಂದು ಪ್ರಹಸನ ನಡೆಯುತ್ತಿದೆ. 32 ಜನರನ್ನು ಡಿಸಿಎಂ ಮಾಡಿ ಕರ್ನಾಟಕ ಲೂಟಿ ಮಾಡಲು ಹೊರಟಿದ್ದಾರೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ. ಇವರ ಪಾಪ, ಶಾಸಕರ ಶಾಪದಿಂದ ಶೀಘ್ರದಲ್ಲೇ ಸರ್ಕಾರ ಪತನವಾಗಲಿದೆ. ನಾವು ಸರ್ಕಾರ ಬೀಳಿಸಲ್ಲ; ಅವರ ಶಾಸಕರೇ ಬೀಳಿಸುತ್ತಾರೆ. ಸರ್ಕಾರ ಬಿದ್ದ ಮೇಲೆ ಏನು ಮಾಡಬೇಕೆಂದು ಯೋಚಿಸುತ್ತೇವೆ’ ಎಂದು ಹೇಳಿದರು.

‘ಹಾಲು ಹೆಚ್ಚು ಕೊಡಿ ಎಂದು ಕೇಳಿದವರು ಯಾರು? 50 ಎಂಎಲ್ ಹಾಲು ಕಡಿಮೆ ಮಾಡಿ ₹ 2 ದರ ತಗ್ಗಿಸಲು ತಮ್ಮಿಂದ ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಕಳೆದ ವರ್ಷ ಹಾಲಿನ ದರವನ್ನು ₹ 3 ಹೆಚ್ಚಿಸಿ ರೈತರಿಗೆ ರವಾನಿಸುವುದಾಗಿ ಹೇಳಿದ್ದರು. ನಯಾಪೈಸೆಯನ್ನೂ ರೈತರಿಗೆ ನೀಡಲಿಲ್ಲ. ಈಗ ಮತ್ತೆ ₹ 2 ಹೆಚ್ಚಿಸಿದ್ದಾರೆ. ಕೇಳಿದರೆ ಹಾಲು ಹೆಚ್ಚು ಕೊಡುತ್ತಿರುವುದಾಗಿ ಹೇಳುತ್ತಾರೆ. ಜನ ಬದುಕಲು ಕಷ್ಟಪಡುತ್ತಿದ್ದಾರೆ. ಅಂಥವರ ಮೇಲೆ ದರ ಏರಿಕೆ ಹೊರೆ ಹೇರುತ್ತಿದ್ದೀರಿ’ ಎಂದು ಟೀಕಾ ಪ್ರಹಾರ ನಡೆಸಿದರು.

‘ಮಳೆ ಬಂದು ಹೆಚ್ಚು ಮೇವು ಬಂದಾಗ ಸಹಜವಾಗಿ ಹಾಲಿನ ಪ್ರಮಾಣ ಹೆಚ್ಚಳವಾಗುತ್ತದೆ. ಸರ್ಕಾರಕ್ಕೆ ಜ್ಞಾನ ಇದ್ದಿದ್ದರೆ ಆ ಹೆಚ್ಚುವರಿ ಹಾಲನ್ನು ಏನು ಮಾಡಬಹುದೆಂಬುದು ಗೊತ್ತಾಗುತಿತ್ತು. ಅಂಗನವಾಡಿಗೆ ಕೊಡಬೇಕಾ, ಪೌಡರ್‌ ಮಾಡಬೇಕಾ ಎಂಬುದರ ಬಗ್ಗೆ ಆಲೋಚಿಸಬೇಕಿತ್ತು. ಇಷ್ಟು ದಿನ ಏನು ಮಣ್ಣು ತಿನ್ನುತ್ತಿದ್ದರಾ? ಐಎಎಸ್‌ ಅಧಿಕಾರಿಗಳಿಗೆ ಜ್ಞಾನ ಇಲ್ಲವೇ?’ ಎಂದು ಹರಿಹಾಯ್ದರು.

‘ಜುಲೈ 1ರಿಂದ ಮತ್ತೆ ಮದ್ಯ ದರ ಏರಿಕೆ ಮಾಡಲು ಹೊರಟಿದ್ದಾರೆ. ಬಡವರು, ಕೂಲಿಕಾರರು ಮೈಕೈ ನೋವಿಗೆ ಕುಡಿಯುತ್ತಾರೆ. ಅಂಥವರಿಗೆ ಮತ್ತೆ ಹೊಡೆತ ನೀಡುತ್ತಿದ್ದಾರೆ. ಈ ಸರ್ಕಾರ ಅವೈಜ್ಞಾನಿಕವಾಗಿ ಉಚಿತ ಗ್ಯಾರಂಟಿ ನೀಡಿ, ಅದಕ್ಕೆ ಹಣ ಹೊಂದಿಸಲು ಸಾಧ್ಯವಾಗದೆ ದರ ಏರಿಸಿ ಜನರನ್ನು ಲೂಟಿ ಮಾಡುತ್ತಿದೆ, ಜನಸಾಮಾನ್ಯರ ರಕ್ತ ಹೀರುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇಡೀ ರಾಜ್ಯದಲ್ಲಿ ಕಾಲರಾ ವ್ಯಾಪಿಸುತ್ತಿದೆ. ಕಲುಷಿತ ನೀರು ನೀಡಿ ದಿನಕ್ಕೆ‌ ಮೂರ್ನಾಲ್ಕು ಜನರನ್ನು ಸಾಯಿಸುತ್ತಿದ್ದಾರೆ. ಮೂರು ಸಾವಿರಕ್ಕೂ ಅಧಿಕ ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಬಡವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಈ ಸರ್ಕಾರಕ್ಕೆ ಶುದ್ಧ ಕುಡಿಯುವ ನೀರು ಕೊಡಲು ಯೋಗ್ಯತೆ ಇಲ್ಲದೆ ಪಾಪರ್‌ ಆಗಿದೆ’ ಎಂದು ಟೀಕಿಸಿದರು.

ಗೌರವವಿದ್ದಿದ್ದರೆ ವೇದಿಕೆಯಲ್ಲೇ ರಾಜೀನಾಮೆ ನೀಡುತ್ತಿದ್ದರು'

'ವೇದಿಕೆಯಲ್ಲಿ ಸ್ವಾಮೀಜಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದ್ದು, ಗೌರವ ಇರುವಂಥ ಮುಖ್ಯಮಂತ್ರಿ ಇದ್ದಿದ್ದರೆ ವೇದಿಕೆಯಲ್ಲೇ ರಾಜೀನಾಮೆ ನೀಡುತ್ತಿದ್ದರು. ಆ ಸಂದರ್ಭದಲ್ಲಿ ಶಿವಕುಮಾರ್‌ ನಗುತ್ತಿದ್ದರು' ಎಂದು ಅಶೋಕ ಲೇವಡಿ ಮಾಡಿದರು.

‘ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನ ಎಕ್ಸ್‌ಪೈರಿ ಆಗಿದೆ.‌ ಡಿ.ಕೆ.ಶಿವಕುಮಾರ್‌ ನಿತ್ಯ ಕಾಟ ಕೊಡುತ್ತಿದ್ದಾರೆ. ಅವರ ಸಹೋದರ ಡಿ.ಕೆ.ಸುರೇಶ್ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ. ಹಿಂದೆ ಪರಮೇಶ್ವರ್‌ ಅವರನ್ನು ಸೋಲಿಸಿ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದರು. ಅದೆಲ್ಲಾ ಗೊತ್ತಾಗಿ ಡಿ.ಕೆ.ಶಿವಕುಮಾರ್‌ ಈಗ ಬೇರೆ ರೀತಿಯಲ್ಲಿ ಗಾಳ ಹಾಕುತ್ತಿದ್ದಾರೆ. ರಾಜೀನಾಮೆ ಕೊಡಿಸುವಂತೆ ಸ್ವಾಮೀಜಿ ಕೈಯಲ್ಲಿ ಹೇಳಿಸುತ್ತಿದ್ದಾರೆ’ ಎಂದರು.

'ಡಿಕೆಶಿ ನಡೆ ನೋಡಿಕೊಂಡು ದಾಳ ಉರುಳಿಸುತ್ತೇವೆ'

'ಚನ್ನಪಟ್ಟಣ ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ಸಂಬಂಧ ಕುಮಾರಸ್ವಾಮಿ ಜೊತೆ ಮಾತನಾಡುತ್ತೇವೆ. ಯಾರೇ ಅಭ್ಯರ್ಥಿಯಾದರೂ ಪರವಾಗಿಲ್ಲ. ತಮ್ಮ ಅಭ್ಯರ್ಥಿಯೇ ಸ್ಪರ್ಧಿಸಬೇಕೆಂದು ಜೆಡಿಎಸ್‌, ಬಿಜೆಪಿ ಏನು ಪಟ್ಟು ಹಿಡಿದಿಲ್ಲ. ಡಿ.ಕೆ.ಶಿವಕುಮಾರ್ ಕುಟುಂಬದವರು ಸ್ಪರ್ಧೆ ಮಾಡುತ್ತಾರೋ ಕಾರ್ಯಕರ್ತರನ್ನು ಕಣಕ್ಕಿಳಿಸುತ್ತಾರೋ ಎಂಬುದರ ಆಧಾರದ ಮೇಲೆ ನಮ್ಮ ರಾಜಕೀಯ ಚದುರಂಗದಾಟ ನಡೆಯುತ್ತದೆ. ಡಿ.ಕೆ.ಶಿವಕುಮಾರ್ ತಾವೇ ಸ್ಪರ್ಧೆ ಮಾಡುವುದಾಗಿ ಹೇಳುತ್ತಾ ರಾಜಕೀಯ ಕುತಂತ್ರದಲ್ಲಿ ತೊಡಗಿದ್ದಾರೆ ಅಷ್ಟೆ' ಎಂದು ಅಶೋಕ ತಿಳಿಸಿದರು.

ಮುಂಬರುವ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಜೆಡಿಎಸ್–ಬಿಜೆಪಿ ಮೈತ್ರಿ ಮುಂದುವರಿಯಲಿದೆ ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.