ADVERTISEMENT

ಬ್ರಾಹ್ಮಣರಾಗಿದ್ದೂ ದಲಿತರತ್ತ ಕಾಳಜಿ ವಹಿಸಿದ್ದ ಗೋಪಾಲಸ್ವಾಮಿ ಅಯ್ಯರ್‌: ಗುಹಾ

ಗೋಪಾಲಸ್ವಾಮಿ ಅಯ್ಯರ್‌, ಕುದ್ಮುಲ್‌ ರಂಗರಾವ್‌ ಸ್ಮರಣೆಯಲ್ಲಿ ರಾಮಚಂದ್ರ ಗುಹಾ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 12:11 IST
Last Updated 24 ಜುಲೈ 2022, 12:11 IST
   

ಕೋಲಾರ: ‘ಬ್ರಾಹ್ಮಣರಾದ ಆರ್‌.ಗೋಪಾಲಸ್ವಾಮಿ ಅಯ್ಯರ್‌ ತಮ್ಮದೇ ಸಮುದಾಯ ಎದುರು ಹಾಕಿಕೊಂಡು, ಕಠಿಣವಾದ ಜಾತಿ ವ್ಯವಸ್ಥೆಯ ನಡುವೆ ದಲಿತರು, ಶೋಷಿತರ ಏಳಿಗೆಗಾಗಿ ಶ್ರಮಿಸಿದರು’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಬಣ್ಣಿಸಿದರು.

ಆರ್‌.ಗೋಪಾಲಸ್ವಾಮಿ ಅಯ್ಯರ್‌ ಹಾಗೂ ಕುದ್ಮುಲ್‌ ರಂಗರಾವ್‌ ಕುರಿತು ಭಾನುವಾರ ಇಲ್ಲಿ ಆಯೋಜಿಸಿದ್ದ ‘ಆದವರ ನೆನೆಯೋಣ ಅರೆಗಳಿಗೆ’ (ಉಪಕಾರ ಸ್ಮರಣೆ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ಆದಿಮ ಸಾಂಸ್ಕೃತಿಕ ಕೇಂದ್ರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಓದುಗ ಕೇಳುಗ–ನಮ್ಮ ನಡೆ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ADVERTISEMENT

‘ಅಯ್ಯರ್‌ಗಳೆಂದರೆ ಸಂಪ್ರದಾಯ ಬದ್ಧ ಹಾಗೂ ಪೂರ್ವಾಗ್ರಹದಿಂದ ಕೂಡಿದ ಜನರು. ಈಗಿನ ಪರಿಸ್ಥಿತಿ ಅವಲೋಕಿಸುವುದಾದರೆ ತುಸು ಪೂರ್ವಾಗ್ರಹದಿಂದ ಕೂಡಿದ್ದರೂ ಕನ್ನಡ ಬ್ರಾಹ್ಮಣರು ಪರವಾಗಿಲ್ಲ. ಆದರೆ, ತಮಿಳು ಬ್ರಾಹ್ಮಣರಲ್ಲಿ ಇನ್ನೂ ಗೊಂದಲವಿದೆ’ ಎಂದರು.

‘ಸರ್ವಣೀಯರಾದ ಗೋಪಾಲರಾವ್‌ ಅವರಿಗೆ ದಲಿತರ, ಶೋಷಿತರ ಬಗ್ಗೆ ಕಾಳಜಿ ಮೂಡಿದಾದ್ದರೂ ಹೇಗೆ? ದಲಿತರ ಏಳಿಗೆಗೆ ಏಕೆ, ಹೇಗೆ ಶ್ರಮಿಸಿದರು’ ಎಂದು ತಮ್ಮ ಭಾಷಣದುದ್ದಕ್ಕೂ ಪ್ರಶ್ನೆ ಎತ್ತುತ್ತಲೇ ತಮ್ಮ ತಾತ (ಗುಹಾ ಅವರ ತಂದೆ ತಂದೆಯ ಅಣ್ಣ ಅಯ್ಯರ್‌) ಕೈಗೊಂಡ ಕೆಲಸ ಕಾರ್ಯಗಳನ್ನು ತೆರೆದಿಟ್ಟರು.

‘ಬ್ರಾಹ್ಮಣರಾಗಿದ್ದ ಸಮಾಜ ಸುಧಾರಕ ಗೋಪಾಲಕೃಷ್ಣ ಗೋಖಲೆ ಕೂಡ ದಲಿತರ ಪರ ದನಿ ಎತ್ತಿದ್ದರು. ಗೋಖಲೆ ಅವರ ಆಲೋಚನೆಯೇ ಅಯ್ಯರ್‌ ಅವರಿಗೂ ಸ್ಫೂರ್ತಿ ಆಗಿರಬಹುದು’ ಎಂದರು.

‘ಮೈಸೂರು ಸಂಸ್ಥಾನದ ಜನಪ್ರತಿನಿಧಿ ಸಭೆಯಲ್ಲಿ ‘ದಲಿತರ ಪ್ರತಿನಿಧಿ’ಯಾಗಿ ದಲಿತರ ಶಿಕ್ಷಣದ ಬಗ್ಗೆ ಅಯ್ಯರ್‌ ದನಿ ಎತ್ತಿದ್ದರು. ಸವರ್ಣೀಯರ ಜೊತೆ ದಲಿತ ಮಕ್ಕಳು ಶಿಕ್ಷಣ ಪಡೆಯಬಹುದೇ ಎಂಬ ಚರ್ಚೆ ನಡೆಯಿತು. ಆಗ ಮೇಲುಕೋಟೆ ಅರ್ಚಕರೊಬ್ಬರು, ‘ದಲಿತರೂ ಶಿಕ್ಷಣ ಪಡೆಯಲಿ, ಆದರೆ, ಬ್ರಾಹ್ಮಣ ಮಕ್ಕಳ ಜೊತೆ ಬೇಡ. ದಲಿತರು ಕೊಳಕಾಗಿರುತ್ತಾರೆ, ದನದ ಮಾಂಸ ತಿನ್ನುತ್ತಾರೆ, ಮದ್ಯಪಾನ ಮಾಡುತ್ತಾರೆ’ ಎಂಬ ವಾದ ಎತ್ತಿದರು. ಈ ವಾದ ತಿರಸ್ಕರಿಸಿದ ಅಯ್ಯರ್‌, ‘ಮಕ್ಕಳನ್ನು ಮಾಂಸಾಹಾರಿ, ಸಸ್ಯಾಹಾರಿ ಎಂಬುದಾಗಿ ವಿಭಜಿಸಲು ಸಾಧ್ಯವೇ? ಇತರ ಸಮುದಾಯದವರು ಮಾಂಸ ತಿನ್ನುವುದಿಲ್ಲವೇ ಎಂದು ಪ್ರಶ್ನಿಸಿ ಜೊತೆಯಲ್ಲಿ ಓದಬೇಕೆಂದು ಸಮರ್ಥಿಸಿಕೊಂಡಿದ್ದರು’ ಎಂದು ಅಂದಿನ ಚರ್ಚೆಯನ್ನು ಸ್ಮರಿಸಿದರು.

‘ದಲಿತರ ಮನೆಗಳಿಗೆ ಸೈಕಲ್‌ನಲ್ಲಿ ಹೋಗಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸುತ್ತಿದ್ದರು. ಲಿಂಗ ಅಸಮಾನತೆ ಹೋಗಲಾಡಿಸಬೇಕು ಎಂಬ ಉದ್ದೇಶದಿಂದ ದಲಿತ ಹೆಣ್ಣು ಮಕ್ಕಳಿಗೂ ಹಾಸ್ಟೆಲ್‌ ಆರಂಭಿಸಲು ಶಿಫಾರಸು ಮಾಡಿದರು. ದಲಿತರಿಗಾಗಿ ಆಸ್ಪತ್ರೆ ತೆರೆಯುವ, ಜಮೀನು ಹಾಗೂ ಮನೆ ನೀಡುವ ಪ್ರಸ್ತಾಪವನ್ನೂ ಮಾಡಿದ್ದರು. ಇದನ್ನೂ ವಿರೋಧಿಸಿದ ಮೇಲುಕೋಟೆಯ ಶ್ಯಾಮ ಅಯ್ಯಂಗಾರ್‌, ‘ಹೀಗೆ ಮಾಡಿದರೆ ಹಿಂದೂ ಸಮಾಜ ನಾಶವಾಗುತ್ತದೆ’ ಎಂಬ ಆತಂಕ ವ್ಯಕ್ತಪಡಿಸಿದ್ದರು’ ಎಂದು ನುಡಿದರು.

‘ಅಸ್ಪೃಶ್ಯರು ಎಂಬ ಭಾವವನ್ನು ಬದಿಗಿರಿಸಿ ಸವರ್ಣೀಯ ಮಕ್ಕಳ ಜೊತೆ ಪೈಪೋಟಿ ನಡೆಸಬೇಕು. ಚೆನ್ನಾಗಿ ಓದಿ ಐಎಎಸ್‌ ಅಧಿಕಾರಿಯಾಗಿ, ನ್ಯಾಯಾಧೀಶರಾಗಿ ತಲೆ ಎತ್ತಿ ಓಡಾಡಬೇಕು ಎಂಬುವುದಾಗಿ ದಲಿತ ಮಕ್ಕಳನ್ನು ಹುರಿದುಂಬಿಸುತ್ತಿದ್ದರು’ ಎಂದು ನೆನಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.