ADVERTISEMENT

ಪೂರ್ವ ಮುಂಗಾರು ಬಿತ್ತನೆ ಚುರುಕು; ಟ್ರ್ಯಾಕ್ಟರ್ ಉಳುಮೆಗೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2024, 6:51 IST
Last Updated 20 ಮೇ 2024, 6:51 IST
ರಸಗೊಬ್ಬರ ಮಾರಾಟ ಅಂಗಡಿ
ರಸಗೊಬ್ಬರ ಮಾರಾಟ ಅಂಗಡಿ   

ಬಂಗಾರಪೇಟೆ: ತಾಲ್ಲೂಕಿನಾದ್ಯಂತ ಉತ್ತಮ ಮಳೆ ಸುರಿಯುತ್ತಿದೆ. ಕೃಷಿ ಚಟುವಟಿಕೆ ಕೈಗೊಳ್ಳಲು ರೈತರು ಮುಂದಾಗಿದ್ದಾರೆ. ಹೊಲ ಹಸನು ಮಾಡಿ ಮುಂಗಾರು ಹಂಗಾಮಿನ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ರೈತರು ಪ್ರತಿವರ್ಷ ಭರಣಿ ಮಳೆಗೆ ಪೂರ್ವ ಮುಂಗಾರು ಬಿತ್ತನೆ ಮಾಡುವುದು ವಾಡಿಕೆ. ಆದರೆ, ಈ ಬಾರಿ ಕೆಲವೆಡೆ ಮಾತ್ರ ಭರಣಿ ಮಳೆಯಾದ ಪರಿಣಾಮ ಬಿತ್ತನೆಗೆ ಅನುಕೂಲವಾಗಲಿಲ್ಲ.

ಕಳೆದ ಮೂರು ದಿನಗಳಿಂದ ಸುರಿದ ಕೃತಿಕ ಹದವಾದ ಮಳೆಯಿಂದ ರೈತರಲ್ಲಿ ಸಂತಸ ಮೂಡಿದೆ. ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ. ಕೆಲ ರೈತರು ಪೂರ್ವ ಮುಂಗಾರು ಬೀಜ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ. ಟ್ರ್ಯಾಕ್ಟರ್ ಉಳುಮೆಗೆ ಬೇಡಿಕೆ ಹೆಚ್ಚಿದೆ.

ರಾಗಿ, ಭತ್ತ, ಜೋಳ, ಮೆಕ್ಕೆಜೋಳ, ತೊಗರಿ, ಹುರುಳಿ, ಆವರೆ, ಹೆಸರು, ಅಲಸಂದಿ, ನೆಲಗಡಲೆ, ಸಜ್ಜೆ, ಸಾಮೆ, ಎಳ್ಳು ಸೇರಿ ತೋಟಗಾರಿಕೆ, ದ್ವಿದಳ ಧಾನ್ಯ ಹಾಗೂ ವಾಣಿಜ್ಯ ಬೆಳೆಗಳು ತಾಲ್ಲೂಕಿನ ಪ್ರಮುಖ ಬೆಳೆಗಳಾಗಿವೆ.

ADVERTISEMENT

24853 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ: ತಾಲ್ಲೂಕಿನಲ್ಲಿ ಕೃಷಿ ಇಲಾಖೆ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಒಟ್ಟು 14853 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ.

14863 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 12340 ಹೆಕ್ಟರ್‌ನಲ್ಲಿ ಭತ್ತ, 390 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ, 320 ಹೆಕ್ಟರ್‌ ಪ್ರದೇಶದಲ್ಲಿ ಜೋಳ, 34 ಹೆಕ್ಟೇರ್‌ನಲ್ಲಿ ತೊಗರಿ, 385 ಹೆಕ್ಟೇರ್‌ನಲ್ಲಿ ಆವರೆ, 300 ಹೆಕ್ಟೇರ್‌ನಲ್ಲಿ ಅಲಸಂದಿ, 160 ಹೆಕ್ಟೇರ್‌ನಲ್ಲಿ ನೆಲಗಡಲೆ, 222 ಸೇರಿ ಎಣ್ಣೆಕಾಳು ಹಾಗೂ ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ ಇದೆ. ‌

ಬಿತ್ತನೆ ಬೀಜ ಕೊರತೆ ಇಲ್ಲ: ‌ತಾಲ್ಲೂಕಿನಲ್ಲಿ ರೈತರಿಗೆ ಅಂದಾಜು 10 ಸಾವಿರ ಕ್ವಿಂಟಲ್‌ಗೂ ಅಧಿಕ ಬಿತ್ತನೆ ಬೀಜ ಅಗತ್ಯವಿದೆ. ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜಗಳ ದಾಸ್ತಾನು ಇದೆ. ಉತ್ತಮ ಮಳೆ ಆಗುತ್ತಿದ್ದಂತೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯಧನದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗುವುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಪ್ರಸ್ತುತ ಕಾಮಸಮುದ್ರ, ಬೂದಿಕೊಟೆ ಮತ್ತು ಕಸಬಾ ಮೂರು ಹೋಬಳಿಗಳಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಕೇಂದ್ರಗಳಿವೆ. ರೈತರಿಗೆ ಅಗತ್ಯವಿರುವ ರಾಗಿ, ತೊಗರಿ, ನೆಲಗಡಲೆ, ಅಲಸಂದಿ ಸೇರಿದಂತೆ ಏಕಧಾನ್ಯ, ದ್ವಿದಳ ಧಾನ್ಯಗಳ ಬಿತ್ತನೆ ಬೀಜ ತರಿಸಲು ಸಿದ್ಧತೆ ನಡೆಸಲಾಗಿದೆ.

ರಸಗೊಬ್ಬರ ದಾಸ್ತಾನು: ಮೂರು ಮೆಟ್ರಿಕ್‌ ಸಾವಿರ ಟನ್‌ ಗೊಬ್ಬರದ ಅಗತ್ಯವಿದೆ. ಈಗಾಗಲೇ 1466.57 ಮೆಟ್ರಿಕ್‌ ಟನ್ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಇದರಲ್ಲಿ ಮೇ ಅಂತ್ಯದವರೆಗೆ ಬಿತ್ತನೆಗಾಗಿ 1,039 ಮೆಟ್ರಿಕ್‌ ಟನ್ ರಸಗೊಬ್ಬರ ವಿತರಿಸಲಾಗುತ್ತದೆ. ಜೂನ್‌ ಆರಂಭದಲ್ಲಿ ಇನ್ನೂ ಹೆಚ್ಚಿನ ರಸಗೊಬ್ಬರ ಪೂರೈಕೆಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ತೋಟಗಾರಿಕೆ ಬೆಳೆ ಪ್ರದೇಶ: ತಾಲ್ಲೂಕಿನಲ್ಲಿ ಅಂದಾಜು 35 ಸಾವಿರ ಹೆಕ್ಟೇರ್‌ ತೋಟಗಾರಿಕೆ ಬೆಳೆ ಬೆಳೆಯುವ ಪ್ರದೇಶವಿದೆ. ಇದರಲ್ಲಿ 15 ಸಾವಿರ ಹೆಕ್ಟೇರ್‌ನಲ್ಲಿ ಟೊಮೆಟೊ, 5 ಸಾವಿರ ಹೆಕ್ಟೇರ್‌ನಲ್ಲಿ ಬದನೆ ಬಿತ್ತನೆ ಗುರಿ ಇದೆ. 6 ಎಲೆಕೋಸು, 5 ಆಲೂಗಡ್ಡೆ, 4 ಮೆಣಸಿನಕಾಯಿ, ಬಾಳೆ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. ಇದೆಲ್ಲವೂ ಮಳೆ ಪ್ರಮಾಣ ಅವಲಂಬಿಸಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರ ಶಿವಾರೆಡ್ಡಿ ಹೇಳಿದರು.

ಚಿಕ್ಕಅಂಕಡಹಳ್ಳಿ ಗ್ರಾಮದಲ್ಲಿ ಪೂರ್ವ ಮುಂಗಾರು ಬಿತ್ತನೆಗೆ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಿರುವ ರೈತ
ಬಂಗಾರಪೇಟೆಯಲ್ಲಿ ತಂಪಾದ ಮಳೆಯಾಗಿತಿರುವುದು.
ಮುಂಗಾರು ಬಿತ್ತನೆಗಾಗಿ ರೈತರಿಗೆ ಬಿತ್ತನೆ ಬೀಜ ರಸಗೊಬ್ಬರ ಪೂರೈಸುವಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದೆಂದು ‌ಸಿದ್ಧತೆ ಮಾಡಿಕೊಳ್ಳಲಾಗಿದೆ
ಪ್ರತಿಭಾ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಬಂಗಾರಪೇಟೆ
ಕೃಷಿ ಚಟುವಟಿಕೆ ಪ್ರಾರಂಭಿಸಲು ಪೂರಕವಾಗಿದೆ. ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ
ಹಾಲಪ್ಪ ಪ್ರಗತಿಪರ ರೈತ ಗೊಡುಗಮಂದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.