ADVERTISEMENT

ಧಾರಾಕಾರ ಮಳೆ: ತಂಪಾದ ಇಳೆ

​ಪ್ರಜಾವಾಣಿ ವಾರ್ತೆ
Published 29 ಮೇ 2020, 15:32 IST
Last Updated 29 ಮೇ 2020, 15:32 IST
ಕೋಲಾರದಲ್ಲಿ ಶುಕ್ರವಾರ ಧಾರಾಕಾರ ಮಳೆ ಸುರಿದಿದ್ದರಿಂದ ವೇಣುಗೋಪಾಲ ಸ್ವಾಮಿ ಕಲ್ಯಾಣಿ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಕೋಲಾರದಲ್ಲಿ ಶುಕ್ರವಾರ ಧಾರಾಕಾರ ಮಳೆ ಸುರಿದಿದ್ದರಿಂದ ವೇಣುಗೋಪಾಲ ಸ್ವಾಮಿ ಕಲ್ಯಾಣಿ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.   

ಕೋಲಾರ: ಜಿಲ್ಲೆಯಾದ್ಯಂತ ಶುಕ್ರವಾರ ಧಾರಾಕಾರ ಮಳೆಯಾಗಿದ್ದು, ಸತತ ಬರದಿಂದ ನಲುಗಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಜಿಲ್ಲೆಯಲ್ಲಿ ಬೆಳಿಗ್ಗೆ ಬಿಸಿಲಿನ ವಾತಾವರಣವಿತ್ತು. ಸಂಜೆ 5 ಗಂಟೆ ಸುಮಾರಿಗೆ ಆರಂಭವಾದ ಮಳೆ ಸುಮಾರು ಒಂದು ತಾಸು ಎಡಬಿಡದೆ ಸುರಿಯಿತು. ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮಳೆಯು ಹಿತಾನುಭವ ನೀಡಿತು. ಸಾರ್ವಜನಿಕರು ರೈನ್‌ಕೋಟ್‌ ಧರಿಸಿ ಛತ್ರಿ ಹಿಡಿದು ಸಾಗುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಮಾಲೂರು, ಕೆಜಿಎಫ್‌ ಹಾಗೂ ಬಂಗಾರಪೇಟೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಜಮೀನುಗಳು ಹದವಾಗಿವೆ. ಮಳೆಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ತುಸು ನೆಮ್ಮದಿ ಸಿಕ್ಕಿದೆ.

ADVERTISEMENT

ಮಳೆಯಿಂದಾಗಿ ಜಿಲ್ಲಾ ಕೇಂದ್ರದಲ್ಲಿ ಚರಂಡಿಗಳು ಹಾಗೂ ಮ್ಯಾನ್‌ಹೋಲ್‌ಗಳು ಕ್ಷಣ ಮಾತ್ರದಲ್ಲಿ ಭರ್ತಿಯಾಗಿ ಕೊಳಚೆ ನೀರು ರಸ್ತೆಗಳ ಮೇಲೆ ಹರಿದಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿ ಕೆಳಗೆ ಹಾಗೂ ಪೆಟ್ರೋಲ್‌ ಬಂಕ್‌ಗಳ ಬಳಿ ನಿಂತಿದ್ದ ದೃಶ್ಯ ಕಂಡುಬಂತು.

ಮಳೆಯಿಂದಾಗಿ ಹಲವು ಬಡಾವಣೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತು. ಮಳೆಗೆ ಜಿಲ್ಲಾ ಕೇಂದ್ರದ ರಸ್ತೆಗಳ ಚಿತ್ರಣವೇ ಬದಲಾಯಿತು. ರಸ್ತೆ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಗಳು ರಾಡಿಯಾದವು. ರೈಲ್ವೆ ಕೆಳ ಸೇತುವೆ ಹಾಗೂ ತಗ್ಗು ಪ್ರದೇಶದ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ನಿಂತು ಅಕ್ಕಪಕ್ಕದ ಬಡಾವಣೆಗಳಿಗೆ ಸಂಪರ್ಕ ಕಡಿತಗೊಂಡಿತು.

‘ಜಿಲ್ಲೆಯಲ್ಲಿ ಶುಕ್ರವಾರ ಸುಮಾರು 20 ಮಿ.ಮೀ ಮಳೆಯಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಜೂನ್‌ 1ರವರೆಗೂ ಉತ್ತಮ ಮಳೆ ಆಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್‌.ಕೆ.ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.