ADVERTISEMENT

ಮುಳಬಾಗಿಲು: ರಾಜಕಾಲುವೆಯಲ್ಲಿ ಗಿಡಗಂಟಿಗಳ ಕಾಡು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 6:58 IST
Last Updated 18 ಅಕ್ಟೋಬರ್ 2024, 6:58 IST

ಮುಳಬಾಗಿಲು: ತಾಲ್ಲೂಕಿನ ಬೈರಕೂರು ಗ್ರಾಮದ ಚೀಕೂರು ರಸ್ತೆ ಪಕ್ಕದಲ್ಲಿ ಹರಿಯುವ ರಾಜಕಾಲುವೆ ಉದ್ದಕ್ಕೂ ನಾನಾ ಬಗೆಯ ಗಿಡಗಂಟಿಗಳು ಬೆಳೆದು ನಿಂತಿವೆ. ಕಾಲುವೆಯಲ್ಲಿ ಕೊಳೆತ ನೀರು, ಹುಲ್ಲು ಹಾಗೂ ಕಸ ಕಡ್ಡಿಗಳಿಂದ ಸೊಳ್ಳೆಗಳು ಹೆಚ್ಚಾಗಿದ್ದು, ಸುತ್ತಮುತ್ತಲಿನ ಜನರು ಸಾಂಕ್ರಾಮಿಕ ರೋಗಗಳು ವ್ಯಾಪಿಸಬಹುದು ಎಂಬ ಭೀತಿಯಲ್ಲಿದ್ದಾರೆ. 

ತಾಲ್ಲೂಕಿನ ಹೊಬಳಿ ಕೇಂದ್ರಗಳಲ್ಲಿ ಒಂದಾದ ಬೈರಕೂರು ಗ್ರಾಮದಿಂದ ಚೀಕೂರು ಗ್ರಾಮಕ್ಕೆ ಹೋಗುವ ಹಾಗೂ ಗ್ರಾಮದ ಸಂತೆ ಗೇಟಿನಿಂದ ಚೀಕೂರು ಗ್ರಾಮದವರೆಗೆ 20 ಅಡಿ ಅಗಲದ ಮಣ್ಣಿನ ರಾಜಕಾಲುವೆ. ಮಳೆಗಾಲದಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನೀರು ಇದೇ ರಾಜಕಾಲುವೆ ಮೂಲಕ ಬೈರಕೂರು ಕೆರೆಗೆ ಬಂದು ಸೇರುತ್ತದೆ. 

ಆದರೆ, ರಾಜಕಾಲುವೆಯನ್ನು ಹಲವು ವರ್ಷಗಳ ಕಾಲ ಸ್ವಚ್ಛಗೊಳಿಸದ ಕಾರಣಕ್ಕೆ ರಾಜಕಾಲುವೆ ಉದ್ದಕ್ಕೂ ನೂರಾರು ಬಗೆಯ ಗಿಡಗಂಟಿಗಳು, ಮುಳ್ಳಿನ ಗಿಡಗಳು, ಹುಲ್ಲು ಜಾತಿಯ ಬಳ್ಳಿಗಳು, ಲಾಂಟಾನ, ಎಕ್ಕೆ ಹಾಗೂ ಕಾಂಗ್ರೆಸ್ ಜಾತಿಯ ಗಿಡಗಂಟಿಗಳು ಬೆಳೆದು ನಿಂತಿವೆ. ಇದರಿಂದಾಗಿ ರಾಜಕಾಲುವೆಯು ಇದೀಗ ವಿಷಕಾರಿ ಜೀವ ಜಂತುಗಳ ವಾಸ ಸ್ಥಳವಾಗಿದೆ.

ADVERTISEMENT

ಸಣ್ಣ ಮಳೆ ಬಂದರೂ ಸುತ್ತಮುತ್ತಲಿನ ನೀರು ಕಾಲುವೆಗೆ ಬರುವ ಕಾರಣ ಕಾಲುವೆ ಉದ್ದಕ್ಕೂ ಅಲ್ಲಲ್ಲಿ ನೀರು ನಿಂತು ಪಾಚಿ ಕಟ್ಟಿಕೊಂಡಿದೆ. ಹೀಗಾಗಿ, ಕಪ್ಪೆಗಳು, ನೀರಿನ ಹಾವುಗಳು ಮತ್ತಿತರರ ಜೀವಿಗಳು ವಾಸಿಸುತ್ತಿವೆ. ಜೊತೆಗೆ ಸೊಳ್ಳೆಗಳ ಆವಾಸ ಸ್ಥಾನವಾಗಿಯೂ ಮಾರ್ಪಟ್ಟಿದೆ. ಕಾಲುವೆಯ ಎರಡೂ ಕಡೆಗಳಲ್ಲಿ ಗಿಡಗಂಟಿಗಳು ಬೆಳೆದಿದ್ದರೆ ಕಾಲುವೆ ಮಧ್ಯೆ ಪಾಚಿ ತುಂಬಿದ ಹಾಗೂ ಕಸ ಕಡ್ಡಿಗಳಿಂದ ಕೊಳೆತ ನೀರು ದುರ್ವಾಸನೆ ಬೀರುತ್ತಿದೆ. ಇದರ ಪರಿಣಾಮ ರಾಜಕಾಲುವೆ ವ್ಯಾಪ್ತಿಯಲ್ಲಿರುವ ಮನೆಗಳಿಗೂ ಈ ದುರ್ನಾತ ವ್ಯಾಪಿಸಿದ್ದು, ಊಟ ಮಾಡಲು ವಾಕರಿಕೆ ಬರುವಂತಾಗಿದೆ ಎಂದು ಸ್ಥಳೀಯರು ದೂರುತ್ತಾರೆ. 

‘ರಾಜಕಾಲುವೆಯನ್ನು ದುರಸ್ತಿಗೊಳಿಸುವಂತೆ ಸಂಬಂಧಿಸಿದ ಅದಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಅಸಹಾಯಕರಾಗಿ ಸಮಸ್ಯೆಗಳ ಜೊತೆ ಜೀವನ ನಡೆಸುತ್ತಿದ್ದೇವೆ’ ಎಂದು ರಾಜಕಾಲುವೆ ಅಕ್ಕಪಕ್ಕದ ನೂರಾರು ಮನೆಗಳ ನಿವಾಸಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

ನಾಲ್ಕು ವರ್ಷಗಳ ಹಿಂದೆ ಬಿದ್ದ ಭಾರಿ ಮಳೆಯಿಂದ ಗಿಡಗಂಟಿಗಳಿಂದ ನೀರು ಸರಾಗವಾಗಿ ಕೆರೆಯ ಕಡೆ ಹರಿಯಲಾಗದೆ, ಕಾಲುವೆ ತುಂಬಿ ಮನೆಗಳಿಗೆ ನುಗ್ಗಿತ್ತು. ಆ ಸಮಯದಲ್ಲಿ ತಾಲ್ಲೂಕಿನ ಕೆಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಇತ್ತ ಸುಳಿದಿಲ್ಲ. ಕೆಲವೊಮ್ಮೆ ಕಾಲುವೆ ತುಂಬಿ ಮನೆಗಳಿಗೂ ನೀರು ನುಗ್ಗಿದೆ. ಆಗ ಸಂಬಂಧಿಕರ ಮನೆಗಳಲ್ಲಿ ಇರುವಂತಾಗಿತ್ತು ಎನ್ನುತ್ತಾರೆ ಸ್ಥಳೀಯರು. 

ಅಧಿಕಾರಿಗಳ ನಿರ್ಲಕ್ಷ್ಯ: ಸುಮಾರು ವರ್ಷಗಳಿಂದ ಕಾಲುವೆಯನ್ನು ಸ್ವಚ್ಛ ಮಾಡದ ಕಾರಣ ನೀರು ಸರಾಗವಾಗಿ ಹರಿಯುತ್ತಿಲ್ಲ. ಸೊಳ್ಳೆಗಳ ಕಾಟ ತಪ್ಪಿಸಲು ಫಾಗಿಂಗ್, ಮಣ್ಣಿನ ಕಾಲುವೆಯನ್ನು ಸಿಮೆಂಟ್ ಅಥವಾ ಕಲ್ಲುಗಳಿಂದ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿ ಸುಬ್ಬಣ್ಣ ಆರೋಪಿಸಿದರು.

ಕಾಲುವೆಯ ಪಕ್ಕದ ಹುಣಸೆ ಮರಗಳ ಕೆಳಗೆ ಬಳೆ, ಬೊಂಬೆ ಮಾರುವ ವ್ಯಾಪಾರಿಗಳು 10–15 ವರ್ಷಗಳಿಂದ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದು, ಕಾಲುವೆಯಿಂದ ಬರುವ ಸೊಳ್ಳೆಗಳ ಕಾಟಕ್ಕೆ ಇರಲಾರದ ಪರಿಸ್ಥಿತಿ ಎದುರಿಸುತ್ತಿದ್ದಾರೆ. 

ರಾಜ ಕಾಲುವೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, ಸ್ವಚ್ಛತೆ, ನೂತನ ಕಾಲುವೆ ನಿರ್ಮಾಣ ಹಾಗೂ ಗಿಡಗಂಟಿ ತೆರವು ಜವಾಬ್ದಾರಿ ಆ ಇಲಾಖೆಯದ್ದೇ ಆಗಿರುತ್ತದೆ. ಕಾಲುವೆಗೂ ಪಂಚಾಯಿತಿಗೂ ಸಂಬಂಧವಿಲ್ಲ.
–ಚಂದ್ರಶೇಖರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಮಣ್ಣಿನ ಕಾಲುವೆಯನ್ನು ಸಿಮೆಂಟ್, ಕಲ್ಲು ಅಥವಾ ಕಾಂಕ್ರೀಟ್‌ನಿಂದ ನಿರ್ಮಿಸಿದರೆ ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆಯಲಾರವು. ನೀರು ಸಹ ಸರಾಗವಾಗಿ ಹರಿಯುತ್ತದೆ. ಆದರೆ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ
–ಸ್ಥಳೀಯ ನಿವಾಸಿಗಳು
ಬೈರಕೂರು ರಾಜಕಾಲುವೆ ಸ್ಥಿತಿ ಹಾಗೂ ಸಮಸ್ಯೆಗಳ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದು, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
–ಬಿ.ಆರ್.ಮುನಿವೆಂಕಟಪ್ಪ, ತಹಶೀಲ್ದಾರ್
ಮನೆಗಳಿಗೆ ನುಗ್ಗುವ ಹಾವು
ಕಾಲುವೆಯಲ್ಲಿ ಬೆಳೆದ ಬೃಹತ್ ಮಟ್ಟದ ಪೊದೆಗಳಲ್ಲಿ ಅಡಗಿರುವ ಹಾವು ಸೇರಿದಂತೆ ಇನ್ನಿತರ ವಿಷಜಂತುಗಳು ಕೆಲವೊಮ್ಮೆ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತಿವೆ. ಹಾವುಗಳು ಚಿಕ್ಕ ಮಕ್ಕಳನ್ನು ಕಚ್ಚುತ್ತವೆ ಎಂಬ ಭೀತಿ ಸ್ಥಳೀಯರಲ್ಲಿದೆ. ಸಾಂಕ್ರಾಮಿಕ ರೋಗಗಳ ಭೀತಿ: ಕಾಲುವೆಯಲ್ಲಿ ನೀರು ಕೊಳೆತು ಪಾಚಿಗಟ್ಟಿದ್ದು, ಕೊಳೆತ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಹಗಲು–ರಾತ್ರಿ ಎನ್ನದೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಜನರು ಮಲೇರಿಯಾ, ಡೆಂಗೀ ಸೇರಿದಂತೆ ಇನ್ನಿತರ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.