ADVERTISEMENT

ಕೆಜಿಎಫ್‌ | ಸೌಲಭ್ಯ ವಂಚಿತ ರಾಜೀವ್ ಗಾಂಧಿ ಬಡಾವಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 8:08 IST
Last Updated 4 ಡಿಸೆಂಬರ್ 2023, 8:08 IST
ಕೆಜಿಎಫ್ ರಾಜೀವ್ ಗಾಂಧಿ ಬಡಾವಣೆಯಲ್ಲಿ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಉದ್ಯಾನ ಹಾಳು ಬಿದ್ದಿದೆ
ಕೆಜಿಎಫ್ ರಾಜೀವ್ ಗಾಂಧಿ ಬಡಾವಣೆಯಲ್ಲಿ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಉದ್ಯಾನ ಹಾಳು ಬಿದ್ದಿದೆ   

ಕೆಜಿಎಫ್: ನಗರದ ಪ್ರಥಮ ಸುಸಜ್ಜಿತ ಬಡಾವಣೆಯನ್ನು ನಿರ್ಮಾಣ ಮಾಡಲು ಹೊರಟ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರ ನಿಶ್ಚಿತ ಗುರಿಯಿಲ್ಲದೇ ರಾಜೀವ್ ಗಾಂಧಿ ಬಡಾವಣೆಯನ್ನು ನಿರ್ಮಾಣ ಮಾಡಿದ ಫಲವಾಗಿ ಇಡೀ ಬಡಾವಣೆ ಮೂಲಸೌಕರ್ಯವಿಲ್ಲದೆ ಸೊರಗುತ್ತಿದೆ.

ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಿದ ಬಡಾವಣೆ ಎಂಬ ಹೆಗ್ಗಳಿಕೆಯಿಂದ ಹಲವಾರು ಮಂದಿ ಬಡಾವಣೆಯಲ್ಲಿ ನಿವೇಶನ ಖರೀದಿ ಮಾಡಿ ಮನೆಗಳನ್ನು ನಿರ್ಮಾಣ ಮಾಡಿದರು. ಆದರೆ, ನಿರ್ಮಾಣವಾದ ಬಳಿಕ ನಾಗರಿಕರಿಗೆ ನೀಡಬೇಕಾದ ಸೌಲಭ್ಯಗಳನ್ನು ಕೆಡಿಎ ನೀಡಲೇ ಇಲ್ಲ. ತನ್ನ ಜವಾಬ್ದಾರಿಯನ್ನು ಸರ್ಕಾರದ ಬೇರೆ ಅಂಗ ಸಂಸ್ಥೆಗಳ ಮೇಲೆ ಹೇರಿಕೆ ಮಾಡಿದ ಫಲವಾಗಿ ಬಡಾವಣೆಯ ಜನ ಮನೆ ನಿರ್ಮಿಸಿರುವುದಕ್ಕೆ ಪರಿತಪಿಸಬೇಕಾದ ಸನ್ನಿವೇಶ ಎದುರಾಗಿದೆ.

ನಗರದ ಹೊರಭಾಗದಲ್ಲಿ ಬಡಾವಣೆ ಇದೆ ಎಂಬ ಕಾರಣಕ್ಕಾಗಿ ನಿವೇಶನ ಖರೀದಿ ಮಾಡಿದವರು ಸಹ ಮನೆ ಕಟ್ಟಲು ಮೀನ ಮೇಷ ಎಣಿಸಿತೊಡಗಿದ್ದರು. ಇದೇ ಬಡಾವಣೆಯಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ನಿರ್ಮಾಣವಾದ ಮೇಲೆ ಜನ ಸಂಚಾರ ಹೆಚ್ಚಿತು. ಬಡಾವಣೆಯಲ್ಲಿ ನಿವೇಶನಗಳ ಬೆಲೆ ಕೂಡ ಏರಿಕೆಯಾಯಿತು.  ಅದಕ್ಕೆ ಅನುಗುಣವಾಗಿ ಸೌಕರ್ಯಗಳು ಮಾತ್ರ ಜನತೆಗೆ ಸಿಗಲಿಲ್ಲ.

ADVERTISEMENT

ಸರ್ಕಾರದ ಮಾರ್ಗಸೂಚಿಯಂತೆ ರಸ್ತೆಗಳು ವಿಶಾಲವಾಗಿವೆ. ಆದರೆ, ರಸ್ತೆಯ ಎರಡೂ ಬದಿಗಳಲ್ಲಿ ಮುಳ್ಳು ಗಿಡಗಳ ಯಥೇಚ್ಚವಾಗಿ ಬೆಳೆದುಕೊಂಡು ಅವು ರಸ್ತೆಗೆ ಚಾಚುತ್ತಿರುವುದರಿಂದ ದೊಡ್ಡ ರಸ್ತೆಯೇ ಕಿರಿದಾಗಿದೆ. ಖಾಲಿ ಜಾಗದಲ್ಲಿ ಬೆಳೆದಿರುವ ಪೊದೆಗಳು ವಿಷ ಜಂತುಗಳಿಗೆ ಆಶ್ರಯತಾಣವಾಗಿ ಮಾರ್ಪಟ್ಟಿದೆ. ಚರಂಡಿಗಳು ಇಲ್ಲ. ಬಡಾವಣೆಗೆ ಅಗತ್ಯವಾಗಿದ್ದ ಒಳಚರಂಡಿ ವ್ಯವಸ್ಥೆಯನ್ನು ಕೂಡ ಮಾಡಲಾಗಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಬಡಾವಣೆಯಲ್ಲಿ ಸುತ್ತಲೂ ಬೇಲಿ ಹಾಕಿ ಉದ್ಯಾನ ರಚನೆ ಮಾಡಲಾಗಿದೆ. ಆದರೆ, ಉದ್ಯಾನಕ್ಕೆ ಬೇಕಾದ ಲಕ್ಷಣಗಳೇ ಇಲ್ಲ. ಅದು ಕೂಡ ಪೊದೆಗಳ ಉದ್ಯಾನವಾಗಿ ಕಾಣುತ್ತಿದೆ. ಸೌಲಭ್ಯಗಳ ಮಾತಂತೂ ದೂರ. ಇನ್ನೊಂದು ಉದ್ಯಾನ ದಾಖಲೆಯಲ್ಲಿದೆ. ಆದರೆ, ಹೊರನೋಟಕ್ಕೆ ಎಲ್ಲಿಯೂ ಕಾಣುತ್ತಿಲ್ಲ. 

ಬಡಾವಣೆಯ ಮುಖ್ಯ ರಸ್ತೆಗಳಿಗೆ ಮಾತ್ರ ಬೀದಿ ದೀಪ ಅಳವಡಿಸಲಾಗಿದೆ. ಒಳಭಾಗದಲ್ಲಿ ಬೀದಿ ದೀಪಗಳೇ ಇಲ್ಲ. ಹಗಲು ಹೊತ್ತಿನಲ್ಲಿಯೇ ಈ ರಸ್ತೆಗಳಲ್ಲಿ ಓಡಾಡಲು ಭಯವಾಗುತ್ತದೆ. ಇನ್ನು ರಾತ್ರಿ ವೇಳೆ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಊಹಿಸಬಹುದು ಎಂದು ನಿವಾಸಿಗಳು ಅವಲತ್ತುಕೊಳ್ಳುತ್ತಾರೆ.

ನಿರ್ವಹಣೆ ಜವಾಬ್ದಾರಿ ಯಾರದ್ದು?

ಬಡಾವಣೆ ನಿರ್ಮಾಣ ಮಾಡಿದ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿಕೊಡಲು ಹಣಕಾಸಿನ ಕೊರತೆ ಇದೆ ಎಂದು ಕೆಡಿಎ ಅಧಿಕಾರಿಗಳು ಹೇಳುತ್ತಿದ್ದಾರೆ. ಹಿಂದಿನ ಜಿಲ್ಲಾಧಿಕಾರಿ ವೆಂಕಟರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಡಾವಣೆಯನ್ನು ನಗರಸಭೆಗೆ ವಹಿಸಲಾಗಿದೆ. ನಗರಸಭೆಯೇ ಬಡಾವಣೆಯ ಉಸ್ತುವಾರಿ ವಹಿಸಬೇಕು ಎಂದು ಕೆಡಿಎ ಆಯುಕ್ತ ಧರ್ಮೇಂದ್ರ ಹೇಳುತ್ತಾರೆ. ‘ಇದುವರೆಗೆ ಯಾವುದೇ ದಾಖಲೆಯನ್ನು ನಗರಸಭೆಗೆ ಹಸ್ತಾಂತರ ಮಾಡಿಲ್ಲ. ಬಡಾವಣೆಯ ನಕ್ಷೆ ಕೂಡ ನಮ್ಮ ಬಳಿ ಇಲ್ಲ. ನಮಗೆ ಕಾನೂನು ಬದ್ದವಾಗಿ ಹಸ್ತಾಂತರ ಮಾಡಿದರೆ ಬಡಾವಣೆಗೆ ಮೂಲಸೌಕರ್ಯ ಒದಗಿಸಲು ಸಿದ್ಧ’ ಎಂದು ನಗರಸಭೆ ಆಯುಕ್ತ ಪವನ್‌ ಕುಮಾರ್ ಹೇಳುತ್ತಾರೆ. 

ಬಡಾವಣೆಗೆ ಈವರೆಗೆ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಮನವಿ ಮಾಡಿದ್ದಕ್ಕೆ ನಗರಸಭೆಯಿಂದ ವಾರಕ್ಕೆ ಎರಡು ಬಾರಿ ಕಸ ತೆಗೆದುಕೊಂಡು ಹೋಗಲು ವಾಹನ ಬರುತ್ತದೆ  ನವೀನ್ ಬಡಾವಣೆ ನಿವಾಸಿ
ನವೀನ್, ಬಡಾವಣೆ ನಿವಾಸಿ
ಬಡಾವಣೆಯ ಉಸ್ತುವಾರಿ ಯಾರದ್ದು ಎಂದೇ ತಿಳಿದಿಲ್ಲ. ಅದರ ಬಗ್ಗೆ ಅಧಿಕಾರಿಗಳು ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ. ಸೌಲಭ್ಯಗಳನ್ನೂ ಕಲ್ಪಿಸುತ್ತಿಲ್ಲ
ಲಕ್ಷ್ಮಿ, ನಿವಾಸಿ
ಬಡಾವಣೆಯ ಮುಖ್ಯ ರಸ್ತೆಗಳನ್ನು ಮುಳ್ಳುಗಿಡಗಳು ಆವರಿಸಿಕೊಂಡಿರುವುದು
ಕಳಪೆ ಕಾಮಗಾರಿಗೆ ಸಾಕ್ಷಿಯಾಗಿರುವ ಚರಂಡಿ ಕಾಮಗಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.